ಮಹಾನಗರ: ನಗರಕ್ಕೆ ನೀರು ಒದಗಿಸುವ ತುಂಬೆ ಡ್ಯಾಂನ ನೀರಿನ ತಳದಲ್ಲಿರುವ ಪೈಪ್‌ನ ಗೇಟ್‌ವಾಲ್ಟ್ ದುರಸ್ತಿ ನ. 15ರಂದು ಹಮ್ಮಿಕೊಂಡಿರುವ ಕಾರಣದಿಂದ ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಇಳಿಸಲಾಗಿದೆ ಎಂದು ಮಹಾನಗರ ಪಾಲಿಕೆ ತಿಳಿಸಿದೆ.
ನದಿಯ ಹತ್ತಿರವಿರುವ ಮುಖ್ಯ ಪಂಪ್‌ನ ಕೆಳಭಾಗದ ಬಾವಿಗೆ ನೀರು ಸರಬರಾಜು ಮಾಡುವ ಪೈಪ್‌ನಲ್ಲಿರುವ ಗೇಟ್‌ವಾಲ್ ರಿಪೇರಿ ಕಾಮಗಾರಿ ಕೈಗೊಂಡ ಕಾರಣ ತುಂಬೆಯ ನೀರಿನ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ.
ಇಲ್ಲಿಯವರೆಗೆ 4 ಮೀಟರ್‌ವರೆಗೆ ನೀರಿನ ಸಂಗ್ರಹವನ್ನು ನಿಗದಿ ಪಡಿಸಲಾಗಿದ್ದು, ದುರಸ್ತಿ ಹಿನ್ನೆಲೆಯಲ್ಲಿ ಈ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ನೀರಿನ ಪ್ರಮಾಣವನ್ನು 2.5 ಮೀಟರ್‌ಗೆ ತಗ್ಗಿಸಲಾಗಿದೆ. ಬುಧವಾರವೂ ಗೇಟ್ ವಾಲ್ಟ್ ದುರಸ್ತಿ ನಡೆಯುವ ಹಿನ್ನೆಲೆಯಲ್ಲಿ ಬುಧವಾರ ಸಂಜೆಯವರೆಗೂ 2.5 ಮೀಟರ್‌ವರೆಗೆ ನೀರಿನ ಪ್ರಮಾಣದಷ್ಟೇ ನೀರು ನಿಲ್ಲಿಸಲಾಗುತ್ತದೆ. ಬುಧವಾರ ಸಂಜೆಯಿಂದ ಮತ್ತೆ 4 ಮೀಟರ್ ನೀರು ನಿಲ್ಲಿಸಲಾಗುತ್ತದೆ ಎಂದು ಮನಪಾ ಕಾರ್ಯಪಾಲಕ ಅಭಿಯಂತರ ನರೇಶ್ ಶೆಣೈ ತಿಳಿಸಿದ್ದಾರೆ.
ನೀರಿನ ಒಳಹರಿವು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಹೀಗಾಗಿ ನೀರಿನ ಕೊರತೆ ಇಲ್ಲ ಮತ್ತು ದುರಸ್ತಿ ಕಾರ್ಯಕ್ಕಾಗಿ ತಾತ್ಕಾಲಿಕವಾಗಿ ಮಾತ್ರ ನೀರು ಸಂಗ್ರಹವನ್ನು ಕಡಿಮೆಗೊಳಿಸಲಾಗಿದೆ.
ಬುಧವಾರ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ನಗರದ ಭಾಗಶಃ ಪ್ರದೇಶಗಳಿಗೆ ನೀರು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮನಪಾ ಪ್ರಕಟನೆ ತಿಳಿಸಿದೆ.