ಹೊಸದಿಲ್ಲಿ : 65ರ ಹರೆಯದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಕಿಡ್ನಿ ತೊಂದರೆಗೆ ಒಳಗಾಗಿದ್ದು ಅವರು ಶಸ್ತ್ರ ಚಿಕಿತ್ಸೆಗೆ ಒಳಪಡಬೇಕಾದೀತು ಎಂದು ಸಚಿವರ ನಿಕಟ ಮೂಲಗಳು ತಿಳಿಸಿವೆ.
ಜೇಟ್ಲಿ ಅವರು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು ಅವರಿಗೆ ಮೂತ್ರ ಪಿಂಡದ ತೊಂದರೆ ಇದೆ ಎಂದು ವೈದ್ಯರು ದೃಢೀಕರಿಸಿದ್ದಾರೆ. ಜೇಟ್ಲಿ ಅವರ ಆಸ್ಪತ್ರೆಗೆ ಸೇರಿಲ್ಲವಾದರೂ ಸೋಂಕಿಗೆ ಗುರಿಯಾಗದಂತೆ ಎಚ್ಚರಿಕೆ ವಹಿಸಲು ಮನೆಯಿಂದ ಹೊರಗೆ ಹೋಗದಂತೆ ಅವರಿಗೆ ವೈದ್ಯರು ಸೂಚಿಸಿದ್ದಾರೆ.
ಕಳೆದ ಸೋಮವಾರದಿಂದ ಜೇಟ್ಲಿ ಅವರು ತಮ್ಮ ಸಚಿವಾಲಯಕ್ಕೆ ಹೋಗುತ್ತಿಲ್ಲ. ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ನೂತನವಾಗಿ ಚುನಾಯಿತರಾದರೂ ಪ್ರಮಾಣ ವಚನ ಸ್ವೀಕರಿಸಲು ಹೋಗಿರಲಿಲ್ಲ. ತಮ್ಮ ನಿವಾಸದಲ್ಲೇ ಇದ್ದುಕೊಂಡು ಅವರು ಕಡತಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದಾಗ ಜೇಟ್ಲಿ ಅವರು ಬ್ಯಾರಿಯಾಟ್ರಿಕ್ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ದೀರ್ಘಕಾಲದಿಂದ ಮದುಮೇಹಿಗಳಾಗಿರುವ ಜೇಟ್ಲಿ ತೂಕ ಹೆಚ್ಚಿಸುವ ಸರ್ಜರಿಗೆ ಒಳಪಟ್ಟಿದ್ದರು. ಆ ಸರ್ಜರಿಯನ್ನು ಮ್ಯಾಕ್ಸ್ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ಆದರೆ ಅಲ್ಲಿ ಕೆಲವು ತೊಂದರೆಗಳು ಎದುರಾಗಿದ್ದ ಕಾರಣ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಈಗ ಜೇಟ್ಲಿ ಅವರನ್ನು ಅವರ ನಿವಾಸದಲ್ಲಿ ಏಮ್ಸ್ ವೈದ್ಯರು ನೋಡಿಕೊಳ್ಳುತ್ತಿದ್ದಾರೆ. ಜೇಟ್ಲಿ ಅವರ ಮೂತ್ರ ಪಿಂಡ ಕಸಿ ಶಸ್ತ್ರ ಚಿಕಿತ್ಸೆಯ ಅಗತ್ಯ ಇದೆಯೇ ಇಲ್ಲವೇ ಎಂಬುದನ್ನು ಅವರು ಈಗಿನ್ನು ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.