Advertisement

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

10:16 PM Apr 23, 2024 | Team Udayavani |

ಚಾಮರಾಜನಗರ: ಚಕ್ರವರ್ತಿ ಸೂಲಿಬೆಲೆಯವರ ಚುನಾವಣಾ ಪ್ರಚಾರ ಕಾರ್ಯಕ್ರಮದ ಅವಧಿ ಮುಗಿದಿದೆ ಎಂದು ಹೇಳಲು ವೇದಿಕೆಗೆ ಹೋದ ಫ್ಲೈಯಿಂಗ್ ಸ್ಕ್ವಾಡ್ ಮ್ಯಾಜಿಸ್ಟ್ರೇಟ್ ಅವರ ಎದೆಗೆ ಕೆಲವು ಯುವಕರು ಕೈ ಹಾಕಿ ತಳ್ಳಾಡಿ ಕೆಳಗಿಳಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

Advertisement

ನಮೋ ಭಾರತ ಸಂಘಟನೆ ನಗರದ ಗುರುನಂಜಶೆಟ್ಟರ ಛತ್ರದ ಮುಂಭಾಗ ನಡೆಸಲು ಆಯೋಜಿಸಿದ್ದ ಚಕ್ರವರ್ತಿ ಸೂಲಿಬೆಲೆ ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಮಂಗಳವಾರ ಸಂಜೆ 6.30ರಿಂದ 8ರವರೆಗೆ ಅನುಮತಿ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆ ತಡವಾಗಿ ಆಗಮಿಸಿದರು. ಹಾಗಾಗಿ ಭಾಷಣ ತಡವಾಗಿ ಆರಂಭವಾಯಿತು. ರಾತ್ರಿ 8 ಗಂಟೆ ಬಳಿಕವೂ ಅವರ ಭಾಷಣ ಮುಂದುವರೆದ ಕಾರಣ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದ ಫ್ಲೈಯಿಂಗ್ ಸ್ಕ್ವಾಡ್ ಮ್ಯಾಜಿಸ್ಟ್ರೇಟ್ ಶೈಲೇಶ್‌ ಕುಮಾರ್ ಅವರು ವೇದಿಕೆ ಮೇಲೇರಿ, ಚಕ್ರವರ್ತಿ ಸೂಲಿಬೆಲೆಯವರ ಬಳಿ ತೆರಳಿ ಕಾರ್ಯಕ್ರಮಕ್ಕೆ ಅನುಮತಿ ಪಡೆದ ಅವಧಿ ಮುಗಿದಿದೆ ಎಂಬ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆಯ ಕೆಳಗಿದ್ದ ಕೆಲವು ಯುವಕರು ವೇದಿಕೆಯ ಮೇಲೆ ಎತ್ತಿ, ಇಳಿರಿ ಕೆಳಕ್ಕೆ ಎಂದು ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಶೈಲೇಶ್‌ ಅವರ ಎದೆಗೆ ಹಾಕಿ ಹಿಂದೆ ತಳ್ಳಿದರು. ಅವರನ್ನು ಸುತ್ತುವರಿದು ಬಲವಂತವಾಗಿ ತಳ್ಳಿ ವೇದಿಕೆಯಿಂದ ಕೆಳಕ್ಕೆ ಇಳಿಸಿದರು. ಧಿಕ್ಕಾರ ಧಿಕ್ಕಾರ ಎಂದು ಕೂಗಾಟ ಮಾಡಿ, ಮಾತಿನ ಚಕಮಕಿ ನಡೆಸಿದರು. ಎಲ್ಲವನ್ನೂ ರೂಲ್ಸು ರೆಗುಲೇಷನ್ ಪ್ರಕಾರವೇ ಮಾಡ್ತೀರಾ? ಎಂದು ಜೋರು ದನಿಯಲ್ಲಿ ವಾಗ್ವಾದ ನಡೆಸಿದರು.

ಇದರಿಂದ ಅಧಿಕಾರಿ ವಿಚಲಿತರಾದರು. ವೇದಿಕೆಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ, ಕೆಳಗಿದ್ದ ಪೊಲೀಸರು ಮೇಲೆ ಹತ್ತಿ ಅಧಿಕಾರಿಗೆ ರಕ್ಷಣೆ ನೀಡಲಿಲ್ಲ. ಅವರನ್ನು ಕೆಳಗಿಳಿಸಿದ ನಂತರ ಬಂದರು. ಆಗ ಶೈಲೇಶ್‌ ಕುಮಾರ್ ಅವರು ನೀವು ಮೇಲೆ ಬಂದು ನನ್ನನ್ನು ರಕ್ಷಣೆ ಮಾಡಬೇಕಿತ್ತು ಎಂದು ಪೊಲೀಸರಿಗೆ ಹೇಳಿದರು. ಇದೆಲ್ಲವನ್ನೂ ವೇದಿಕೆಯಲ್ಲಿ ನಿಂತು ನೋಡುತ್ತಿದ್ದ ಚಕ್ರವರ್ತಿ ಸೂಲಿಬೆಲೆ, ಬಳಿಕ ಐದು ನಿಮಿಷದಲ್ಲಿ ಭಾಷಣ ಮುಗಿಸಿ ತೆರಳಿದರು.

ಈ ಸಂಬಂಧ ಚುನಾವಣಾ ಅಧಿಕಾರಿಗಳು ಪ್ರತಿಕ್ರಿಯಿಸಿ, ಭಾಷಣ ಕಾರ್ಯಕ್ರಮದ ಅವಧಿ ಮುಗಿದ ಬಳಿಕ ಆಯೋಜಕರ ಗಮನಕ್ಕೆ ಸಮಯ ಮುಗಿಯಿತೆಂದು ಗಮನಕ್ಕೆ ತರುತ್ತೇವೆ. ಬಳಿಕವೂ ಕಾರ್ಯಕ್ರಮ ಮುಂದುವರೆದರೆ ವಿಡಿಯೋ ರೆಕಾರ್ಡಿಂಗ್ ಮಾಡಿ, ಅದರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಈ ಪ್ರಕರಣದಲ್ಲಿ ಚುನಾವಣಾ ಅಧಿಕಾರಿಯ ಮೇಲೆ ಕೈ ಮಾಡಿ, ಎದೆಗೆ ಕೈಹಾಕಿ ತಳ್ಳಿ ಕೆಳಗಿಳಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ವಿಡಿಯೋ ಪರಿಶೀಲಿಸಿ, ಚುನಾವಣಾ ಕರ್ತವ್ಯಕ್ಕೆ ಯಾರು ಅಡ್ಡಿ ಪಡಿಸಿದ್ಧಾರೆ ಅವರುಗಳ ವಿರುದ್ಧ ಮತ್ತು ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಉದಯವಾಣಿಗೆ ತಿಳಿಸಿದರು.

Advertisement

ಗಲಾಟೆ ಬಳಿಕ ತಮ್ಮ ಮಾತು ಮುಂದುವರೆಸಿದ ಚಕ್ರವರ್ತಿ ಸೂಲಿಬೆಲೆ, ಮಿತ್ರರೇ ಅಧಿಕಾರಿಗಳೊಂದಿಗೆ ಗಲಾಟೆ ಮಾಡಬೇಡಿ. ನಾನು ಎಲೆಕ್ಷನ್ ಕಮಿಷನ್ ಸಮಯದ ವಿರುದ್ಧ ಹೋಗಲ್ಲ. ಮಿತ್ರರೇ ನಾವೆಲ್ಲ ಸಂಕಲ್ಪ ಮಾಡೋಣ. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರೆ ಎಂಬ ಹೆದರಿಕೆಯಿಂದ ಹೀಗೆ ಮಾಡಲಾಗುತ್ತಿದೆ. ಈ ವಿರೋಧಕ್ಕೆ ಭಾಷಣ ಮೂಲಕ ಉತ್ತರ ನೀಡಬೇಕಾಗಿಲ್ಲ. ಮತದಾನದ ಮೂಲಕ ಉತ್ತರ ನೀಡಿ. 26ರಂದು ಬೆಳಿಗ್ಗೆಯೇ ಮತದಾನ ಮಾಡಿ. ಚಾಮರಾಜನಗರ ಸಭ್ಯರನ್ನು ಆಯ್ಕೆ ಮಾಡಿ ಕಳುಹಿಸಿದ ಅಪರೂಪದ ಜಾಗ. ಹೀಗಾಗಿ ಸಭ್ಯರನ್ನು, ಸಮರ್ಥರನ್ನು, ಸಮಾಜವನ್ನುಮುನ್ನಡೆಸ ಬಲ್ಲ ನಾಯಕರನ್ನು ಆಯ್ಕೆ ಮಾಡುತ್ತೇವೆ. ಯಾರು ಸಮಾಜಕ್ಕೆ ತೊಂದರೆ ಕೊಡುತ್ತಾರೋ ಅವರನ್ನು ಆಯ್ಕೆ ಮಾಡಬೇಡಿ. ನಾನು ಕೂಡ ಈ ಕ್ಷೇತ್ರದಲ್ಲಿ ನೋವುಂಡವನು. ಯಾಕೆಂದರೆ ಟಿ ನರಸೀಪುರದಲ್ಲಿ ನಮ್ಮ ಕಾರ್ಯಕರ್ತನನ್ನು ಕಳೆದುಕೊಂಡಿದ್ದೇವೆ. ಯಾರು ನಮ್ಮ ಕಾರ್ಯಕರ್ತನನ್ನು ಕೊಂದಿದ್ದಾರೋ, ಅವರು ಪ್ರಚಾರ ಮಾಡಿಕೊಂಡು ತಿರುಗುತ್ತಿದ್ದಾರೋ, ಅವರಿಗೆ ಇವಿಎಂ ಮೂಲಕ ಉತ್ತರ ನೀಡೋಣ. ನರೇಂದ್ರ ಮೋದಿಯವರ ಜೊತೆ ಬಲವಾಗಿ ನಿಲ್ಲೋಣ ಎಂದರು.

ಚಾಮರಾಜನಗರದ ಕಾಡಿನಲ್ಲಿ, ರಾಜ್‌ಕುಮಾರ್ ಮತ್ತು ವೀರಪ್ಪನ್ ಇಬ್ಬರೂ ಇದ್ದರು. ನಮ್ಮ ನೇತೃತ್ವವನ್ನು ರಾಜ್‌ಕುಮಾರ್ ತರದವರು ವಹಿಸಬೇಕೋ, ವೀರಪ್ಪನ್ ತರದವರು ವಹಿಸಬೇಕೋ ಎಂಬುದನ್ನು ನಿಶ್ವಯ ಮಾಡಿ, ಓಟು ಮಾಡಿ ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next