ಬಳ್ಳಾರಿ: ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮದ ಅಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮೂಳೆ ಫ್ಲೋರೊಸಿಸ್‌ನಿಂದ ಗುರುತಿಸಲ್ಪಟ್ಟ ರೋಗಿಗಳಿಗೆ ಗಾಲಿ ಕುರ್ಚಿ ವಿತರಣಾ ಕಾರ್ಯಕ್ರಮವನ್ನು ಮಂಗಳವಾರದಂದು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ| ಎಚ್.ಎಲ್.ಜನಾರ್ಧನ್ ಅವರು ಮೂಳೆ ಫ್ಲೋರೊಸಿಸ್‌ನಿಂದ ಗುರುತಿಸಲ್ಪಟ್ಟ ರೋಗಿಗಳಿಗೆ ಗಾಲಿ ಕುರ್ಚಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಲ್ಲಿ ನೀರಿನಲ್ಲಿ ಕಂಡುಬರುವಂಥ ಫ್ಲೊರೋಸಿಸ್ ಪ್ರಮಾಣವನ್ನು ಪರೀಕ್ಷೆ ಮಾಡಲಾಗುತ್ತಿದ್ದು, ನಿರಂತರವಾಗಿ ಆರೋಗ್ಯ ಜಾಗೃತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ವಿಶೇಷವಾಗಿ ಮೂಳೆ ಮತ್ತು ದಂತ ಫ್ಲೋರೊಸಿಸ್‌ನ ತೊಂದರೆಯನ್ನು ನಿರ್ವಹಿಸಲು ಹಾಗೂ ಅದನ್ನು ನಿಯಂತ್ರಿಸಲು ಸಾರ್ವಜನಿಕರು ಶುದ್ಧೀಕರಿಸಿದ ನೀರನ್ನು ಕುಡಿಯಬೇಕು ಹಾಗೂ ಕಿತ್ತಳೆ, ನಿಂಬೆ, ಹಸಿರು ಸೊಪ್ಪು, ಮೊಳಕೆಕಾಳು, ಹಾಲು, ಬೆಲ್ಲ ಸೇವನೆಯಿಂದ ಫ್ಲೋರೊಸಿಸ್‌ನನ್ನು ಕಾಯಿಲೆಯನ್ನು ನಿಯಂತ್ರಿಸಬಹುದು ಹಾಗೂ ವಿಶೇಷವಾಗಿ ಹೆಚ್ಚು ಫ್ಲೋರೈಡ್‌ಯುಕ್ತ ಆಳವಾದ ಕೊಳವೆ ಬಾವಿಯ ನೀರನ್ನು ಕುಡಿಯದಂತೆ ಮುಂಜಾಗ್ರತೆ ವಹಿಸಬೇಕು. ಆಹಾರದಲ್ಲಿ ಕಪ್ಪು ಟೀ, ಅಡಿಕೆ, ಕಪ್ಪು ಉಪ್ಪು ಮತ್ತು ಹೆಚ್ಚು ಫ್ಲೋರೈಡ್ ಅಂಶವಿರುವ ಟೂತ್‌ಪೇಸ್ಟ್/ ಬಾಯಿ ಸ್ವಚ್ಛಗೊಳಿಸುವ ದ್ರಾವಣಗಳನ್ನು ಬಳಸಬಾರದು ಎಂದು ತಿಳಿಸಿದರು. ಈ ಕಾರ್ಯಕ್ರಮದ ಅಡಿಯಲ್ಲಿ ಸಿರುಗುಪ್ಪ ತಾಲ್ಲೂಕಿನ ಉತ್ತನೂರು ಗ್ರಾಮದ ಮಲ್ಲಯ್ಯ ತಂದೆ ಅಂಜಿನಪ್ಪ ಇವರಿಗೆ ಗಾಲಿ ಕುರ್ಚಿಯನ್ನು ಹಾಗೂ ಮೂರು ತಿಂಗಳುವರೆಗೂ ಆಗುವಷ್ಟು ವಿಟಮಿನ್ ಸಿ ಮತ್ತು ವಿಟಮಿನ್ ಡಿ3, ಕ್ಯಾಲ್ಸಿಯಮ್ ಮಾತ್ರೆಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳಾದ ಡಾ| ಅನಿಲ್ ಕುಮಾರ್, ಸಂಡೂರಿನ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ| ಕುಶಲ್ ರಾಜ್, ಜಿಲ್ಲಾ ಫ್ಲೋರೊಸಿಸ್ ಸಲಹೆಗಾರರಾದ ಡಾ| ಆನಂದ್ ಹಾಗೂ ಇತರರು ಹಾಜರಿದ್ದರು.