Advertisement
ಸಾಮಾನ್ಯವಾಗಿ ಡಿಸೆಂಬರ್‌ನಲ್ಲಿ ಹೂ ಬಿಟ್ಟು, ಜನವರಿಯಲ್ಲಿ ಫಸಲು ತುಂಬಿಕೊಳ್ಳುವ ಗೇರು ಹಣ್ಣಿನ ಮರಗಳು, ಈ ಬಾರಿ ಅಕ್ಟೋಬರ್‌ವರೆಗೂ ನಿರಂತರ ಮಳೆ, ಆ ಬಳಿಕವೂ ಆಗಾಗ ಮಳೆ ಬರುತ್ತಿದ್ದುದರಿಂದ ಹೆಚ್ಚಿನೆಡೆಗಳಲ್ಲಿ ಹೂವು ಬಿಡುವ ಪ್ರಕ್ರಿಯೆಯೇ ಆಗಿಲ್ಲ. ಈಗಾಗಲೇ ಹೂವು ಬಿಟ್ಟಿದ್ದಕ್ಕೂ ಇತ್ತೀಚೆಗೆ ಬಂದ ಮಳೆಯಿಂದ ಕಂಟಕ ಎದುರಾಗಿದೆ.
ಉಡುಪಿ ಜಿಲ್ಲೆಯಲ್ಲಿ 17,386 ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ 34,772 ಮೆಟ್ರಿಕ್ ಟನ್ ಗೇರುಬೀಜ ಉತ್ಪಾದನೆಯಾಗುತ್ತಿದ್ದು, 15ರಿಂದ 20 ಸಾವಿರ ಗೇರು ಕೃಷಿಕರಿದ್ದು ಗೇರು ಕೃಷಿ ಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆಗಳಲ್ಲಿ ಒಂದಾಗಿದೆ. ಬೈಂದೂರು ಹಾಗೂ ಕುಂದಾಪುರ ಎರಡೂ ತಾಲೂಕುಗಳಲ್ಲಿ ಒಟ್ಟು 5,997 ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆಯಲಾಗುತ್ತಿದೆ. ವೈಪರೀತ್ಯದ ಪರಿಣಾಮವೇನು?
ವಾತಾವರಣದಲ್ಲಾಗುತ್ತಿರುವ ಬದಲಾವಣೆ ಯಿಂದಾಗಿ ಬೆಳೆ ವಿಳಂಬದ ಜತೆಗೆ ಕೀಟ ಬಾಧೆ ಸಹಿತ ಇನ್ನಿತರ ರೋಗಬಾಧೆಗಳು ಕಾಣಿಸಿಕೊಳ್ಳುತ್ತವೆ. ಸೆಪ್ಟಂಬರ್, ಅಕ್ಟೋಬರ್‌ವರೆಗೂ ನಿರಂತರ ಮಳೆ ಬಂದಿದ್ದರಿಂದ ಗೇರು ಮರದ ಕಾಂಡ ಒಣಗಿರಲಿಲ್ಲ. ಕಾಂಡ ಒಣಗದಿದ್ದರೆ ಮರ ಬೆಳೆಯುತ್ತಲೇ ಇರುತ್ತದೆ. ಕಾಂಡ ಒಣಗಿದರೆ ಮಾತ್ರ ಬೆಳೆಯುವಿಕೆ ನಿಲ್ಲಿಸಿ, ಹೂವು ಬಿಡುತ್ತದೆ. ಆದರೆ ಈ ಬಾರಿ ಮಳೆ ಹೆಚ್ಚಾಗಿದ್ದರಿಂದ ಹೂವು ಬಿಡುವ ಪ್ರಕ್ರಿಯೆ ವಿಳಂಬವಾಗಿದೆ. ಆ ಬಳಿಕ ಅಗತ್ಯದ ಚಳಿಯೂ ಇರಲಿಲ್ಲ. ಸೆಕೆ, ಮೋಡವೇ ಹೆಚ್ಚಿದ್ದುದರಿಂದ ಹೂವು ಬಿಡುವ ಪಕ್ರಿಯೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. ಹೂವು ಬಿಟ್ಟ ಕಡೆಗಳಲ್ಲಿ ಇತ್ತೀಚೆಗೆ ಮಳೆ ಬಂದಿದ್ದರಿಂದ ಹೂವು ಅರಳುವುದಿಲ್ಲ. ಅಲ್ಲಿಯೇ ಒಣಗಿ ಹೋಗುತ್ತದೆ.
Related Articles
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಈಗಾಗಲೇ ಕೆಲವೆಡೆಗಳಲ್ಲಿ ಗೇರು ಮರದಲ್ಲಿ ಹೂವು ಬಿಟ್ಟಿದ್ದು, ಅದೀಗ ಕರಟಿ ಹೋಗುವ ಸಂಭವವಿದ್ದು, ಇದರಿಂದ ಆರಂಭಿಕ ಹಂತದಲ್ಲಿ ಸಿಗುವ ಇಳುವರಿ ಮೇಲೂ ಹೊಡೆತ ಬಿದ್ದಂತಾಗಿದೆ. ಆರಂಭಿಕ ಹಂತದಲ್ಲಿ ಕಡಿಮೆ ಪ್ರಮಾಣದ ಇಳುವರಿ ಮಾರಾಟಕ್ಕೆ ಸಿಗುವುದರಿಂದ ಉತ್ತಮ ದರವಿರುತ್ತದೆ. ಆದರೆ ಈ ಬಾರಿ ಮಳೆ ಬಂದಿದ್ದರಿಂದ ಅದು ಸಹ ಬೆಳೆಗಾರರಿಗೆ ನಷ್ಟವನ್ನೇ ಉಂಟು ಮಾಡುವ ಸಾಧ್ಯತೆಗಳಿವೆ.
Advertisement
17,386 ಹೆಕ್ಟೇರ್ ಜಿಲ್ಲೆಯಲ್ಲಿ ಗೇರು ಬೆಳೆಯುವ ಪ್ರದೇಶ34,772 ಮೆಟ್ರಿಕ್ ಟನ್ ಜಿಲ್ಲೆಯಲ್ಲಿ ಒಟ್ಟು ಗೇರು ಬೀಜ ಉತ್ಪಾದನೆ
15 - 20 ಸಾವಿರ ಜಿಲ್ಲೆಯಲ್ಲಿರುವ ಗೇರು ಕೃಷಿಕರ ಸಂಖ್ಯೆ
5997 ಹೆಕ್ಟೇರ್ ಬೈಂದೂರು, ಕುಂದಾಪುರ ಎರಡೂ ತಾಲೂಕುಗಳಲ್ಲಿ ಗೇರು ಬೆಳೆಯುವ ಪ್ರದೇಶ ವಿಮೆ ವ್ಯಾಪ್ತಿಗೆ ಸೇರಿಸಿ
ಗೇರು ಕೃಷಿಕರು ಹವಾಮಾನ ವೈಪರೀತ್ಯದಿಂದಾಗಿ ಪ್ರತಿ ವರ್ಷ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಆದರೆ ಇತರ ತೋಟಗಾರಿಕಾ ಬೆಳೆಗಳಂತೆ ಗೇರು ಕೃಷಿಕರಿಗೆ ಯಾವುದೇ ರೀತಿಯ ವಿಮೆ ಸೌಲಭ್ಯಗಳು ಸಿಗುತ್ತಿಲ್ಲ. ಇನ್ನು ಮುಂದಿನ ದಿನಗಳಲ್ಲಿಯಾದರೂ ಗೇರು ಕೃಷಿಕರನ್ನು ಕೂಡ ವಿಮೆ ವ್ಯಾಪ್ತಿಯೊಳಗೆ ಸೇರಿಸಿದರೆ ನಷ್ಟದ ಸಂದರ್ಭದಲ್ಲಿ ಅಲ್ಪ – ಸ್ವಲ್ಪವಾದರೂ ಪ್ರಯೋಜನವಾಗಬಹುದು.
– ಕೆಂಚನೂರು ಚಂದ್ರಶೇಖರ ಉಡುಪ, ಗೇರು ಕೃಷಿಕರು ಒಕ್ಕೂಟ ರಚನೆಗೆ ಪ್ರಯತ್ನ
ಗೇರು ಬೆಳೆಗಾರರಿಗೆ ವಿಮೆ ನೀಡುವಂತೆ ಬೆಳೆಗಾರರಿಂದ ಪ್ರಬಲ ಹಕ್ಕೊತ್ತಾಯ ಆಗಬೇಕಿದೆ. ಈ ವರೆಗೆ ಆ ಕೆಲಸ ಆಗದ ಕಾರಣ ಇನ್ನೂ ಕೂಡ ವಿಮೆ ವ್ಯಾಪ್ತಿಯಲ್ಲಿ ಒಳಪಟ್ಟಿಲ್ಲ. ಇದಕ್ಕಾಗಿ ಅವರೊಳಗೆ ಒಂದು ಒಕ್ಕೂಟ ರಚಿಸಿ, ಆ ಮೂಲಕ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಪ್ರಯತ್ನಿಸಬಹುದು. ಇದಕ್ಕೆ ಇಲಾಖೆಯಿಂದಲೂ ಸಹಕಾರ ನೀಡಲಾಗುವುದು.
– ಸಂಜೀವ ನಾಯ್ಕ, ಸಹಾಯಕ ನಿರ್ದೇಶಕರು, ತೋಟಗಾರಿಕಾ ಇಲಾಖೆ