Advertisement

ಸುಯ್ಯನೆ ಹಾರಿ ಬರುವ ಶಿಕಾರ ಗಿಡುಗ  

12:06 PM Sep 01, 2018 | |

ಎತ್ತರದ ಮರಗಳ ಮೇಲೆ ಅಟ್ಟಣಿಗೆ ನಿರ್ಮಿಸಿ, ದರ ಮೇಲೆ ಈ ಪಕ್ಷಿ  ನಾರು, ಚೇರುಗಳಿಂದ ಗೂಡು ಕಟ್ಟಿಕೊಳ್ಳುತ್ತದೆ. ಗೂಡು ಗಟ್ಟಿಯಾಗಿರಲಿ ಎಂಬು ಕಾರಣಕ್ಕೆ ಕೆಲವೊಮ್ಮೆ ಲೋಹದ ತಂತಿಯನ್ನು ಬಳಸುವುದೂ ಉಂಟು. ಮಿಂಚಿನಂತೆ ಹಾರಿಬಂದು ಬೇಟೆಯನ್ನು ಹಿಡಿಯುವುದಕ್ಕೆ ಈ ಗಿಡುಗಕ್ಕೆ ಪ್ರತಿ ಸ್ಪರ್ಧಿಯೇ ಇಲ್ಲ ಅನ್ನಬಹುದು… 

Advertisement

   ಶಿಕಾರ ಗಿಡುಗವನ್ನು ಶಿಕಾರಿ ಹಕ್ಕಿ ಎಂದೇ ಕರೆಯುತ್ತಾರೆ. ಬೇಟೆಯನ್ನು ಕ್ರೂರವಾಗಿ ಹಿಡಿದು ತಿನ್ನುವ ಹಕ್ಕಿ ಎಂಬ ಅರ್ಥದಲ್ಲಿ ಈ ಹೆಸರು ಬಂದಿದೆ. ಗಂಡು- ಹೆಣ್ಣು ಹಕ್ಕಿಗಳಿಗೆ ಬಣ್ಣದಲ್ಲಿ ವ್ಯತ್ಯಾಸವಿದೆ. ಗಂಡು ಹಕ್ಕಿಯನ್ನು ಶಿಕ್ರಾ ಎಂದೂ ಚಿಪ್ಕಾ  ಅಥವಾ ಚೀಪ್ಕಾ  ಎಂದು ಹಿಂದಿ, ಮರಾಠಿಯಲ್ಲಿ ಕರೆಯುತ್ತಾರೆ. ಚಿಪ್ಕಾ  ಎಂದರೆ ಅಡಗಿ ಕುಳಿತಿದೆ. ತಕ್ಷಣ ಎರಗಿ ಬೇಟೆಯಾಡುವ ಹಕ್ಕಿ ಅಂಥ ಅರ್ಥ. ಬಂಗಾಳದಲ್ಲಿ ಗಂಡು ಹಕ್ಕಿಯನ್ನು ಶಿಕ್ರೆ ಎಂದು, ನೇಪಾಳದಲ್ಲಿ ಹೆಣ್ಣು ಹಕ್ಕಿಯನ್ನು ಕುಟುØ ಎಂದು ಕರೆಯುತ್ತಾರೆ.  ಈ ಗಿಡುಗ 30-34 ಸೆಂ.ಮೀ.ನಷ್ಟು  ದೊಡ್ಡದಿದೆ.  “ಎಸಿಪ್ಟಿಡಿಯಾ’ ಕುಟುಂಬಕ್ಕೆ ಸೇರಿದ ಈ ಗಿಡುಗದ ಕಣ್ಣು ಸೂಕ್ಷ್ಮಾತಿ ಸೂಕ್ಷ.

 ಇದು ತುಂಬಾ ಎತ್ತರದಲ್ಲಿ ಹಾರುತ್ತಿರುವಾಗಲೇ ಭೂಮಿಯ ಮೇಲೆ ಇಲ್ಲವೇ -ಗಿಡದ ಮೇಲೆ ಇರುವ ತನ್ನ ಬೇಟೆಯನ್ನು ಗ್ರಹಿಸಿ- ತಟ್ಟನೆ ಎರಗಿ, ಕಾಲನ್ನು ಹಿಂದೆ ಮಾಡಿ, ರೆಕ್ಕೆಯನ್ನು ಮೇಲೆಮಾಡಿ- ತನ್ನ ಕಾಲಿನಲ್ಲಿರುವ ಹರಿತ ಉಗುರಿನ ಸಹಾಯದಿಂದ -ಪ್ರಾಣಿಗಳನ್ನು ಹಿಡಿದು ಎತ್ತಿಕೊಂಡು ಹಾರಿ ಬಿಡುತ್ತದೆ. ಹೀಗೆ ತಂದ ಬೇಟೆಯನ್ನು, ಮರದ ಮೇಲೆ ಇಲ್ಲವೇ ಬಂಡೆಯ ಮೇಲೆ ಕುಕ್ಕಿ, ಸಾಯಿಸಿ, ಹರಿದು ತಿನ್ನುತ್ತದೆ. 

  ಏಷಿಯಾ, ಆಫ್ರಿಕಾ ಖಂಡದಲ್ಲೂ ಈ ಪ್ರಬೇಧದ ಹಕ್ಕಿ ಇದೆ. ಆದರೆ ಇವುಗಳ ಬಣ್ಣಗಳಲ್ಲಿ ಸ್ವಲ್ಪ ವ್ಯತ್ಯಾಸ ಇದೆ. ಚಿಕ್ಕ ಗೆರೆಯ ಗಿಡುಗವನ್ನು ಶಿಕ್ರಾ ಗಿಡುಗದ ಉಪಜಾತಿ ಎಂದು ಹೆಸರಿಸಲಾಗಿದೆ.   ಶಿಕ್ರಾ ಗಿಡುಗ, ಯಾವಾಗಲೂ ಮರದ ತುದಿ ಇಲ್ಲವೇ ಟೊಂಗೆಯಮೇಲೆ ನೆಟ್ಟಗೆ ಸೆಟೆದಂತೆ ಕುಳಿತಿರುತ್ತದೆ. ಇದರಿಂದ ಇತರ ಹಕ್ಕಿಗಳಿಂದ ಇದನ್ನು ಪ್ರತ್ಯೇಕವಾಗಿ ಗುರುತಿಸಬಹುದು.

   ರೆಪ್ಟರ್‌ ಅಂದರೆ ಸರಿಸೃಪ ಜಾತಿಗೆ ಸೇರಿದ ಹಾವು, ಹರಣೆ, ಚಾಪ, ಓತಿಕ್ಯಾತಗಳನ್ನು ವಿಶೇಷವಾಗಿ ಬೇಟೆಯಾಡುತ್ತದೆ.  26 ರಿಂದ 30 ಸೆಂ.ಮೀ. ಚಿಕ್ಕ ಗಿಡುಗವೂ ಸಿಕ್ಕಿವೆ. ಇದರ ರೆಕ್ಕೆ ಸ್ವಲ್ಪ ಚಿಕ್ಕದಿದ್ದು ವರ್ತುಲಾಕಾರ ಇದೆ.  ಗಂಡು ಹಕ್ಕಿಯ ಬೆನ್ನು ,ರೆಕ್ಕೆಯ ಬಣ್ಣದಲ್ಲಿ ಕಪ್ಪು ಛಾಯೆಯ ಬೂದು ಬಣ್ಣವಿದೆ. ರೆಕ್ಕೆಯ ಮೇಲೆ ಕೆಲವೊಮ್ಮೆ ಬಿಳಿ ಚುಕ್ಕೆ ಸಹ ಇರುವುದು ಹೆಣ್ಣು ಹಕ್ಕಿಯಲ್ಲಿ ಕಂಡಿದೆ.

Advertisement

ಹೊಟ್ಟೆ , ಎದೆ, ದೇಹದ ಅಡಿ ಭಾಗ ಮಸಕು ಬಿಳಿ ಇದ್ದು, ಅದರಮೇಲೆ ಕಪ್ಪು ಛಾಯೆಯ ಕಂದು ಗೆರೆ ಇದೆ. ಹೆಣ್ಣು ಹಕ್ಕಿಯ ಬೆನ್ನು ಕಂದು ಗೆಂಪು ಇದ್ದು -ರೆಕ್ಕೆ ಹೊಟ್ಟೆ, ಬಾಲದ ಅಡಿಯಲ್ಲಿ ಕಂದು ಕೆಂಪು ತಿಳಿ ಬಣ್ಣವನ್ನು ಕೂಡಿದೆ. 
 ಗಂಡು ಹಕ್ಕಿಯ ಕೆನ್ನೆಯಲ್ಲಿ ಅಚ್ಚ ಕೆಂಪು ಕಂದು ಛಾಯೆಯ ಬಣ್ಣ ಇದೆ. ಹೆಣ್ಣು ಹಕ್ಕಿಯ ಕೆನ್ನೆಯಲ್ಲಿ ಈ ಬಣ್ಣ ತಿಳಿಯಾಗಿದೆ. ಕಾಲು ತಿಳಿ ಹಳದಿ ಇದ್ದು, ಮುಂದೆ ಮೂರು, ಹಿಂದೆ ಒಂದು ಬೆರಳಿದೆ.  ಬೆರಳಿನ -ಕಪ್ಪು ಬಣ್ಣದ ಹರಿತವಾದ ಉದ್ದ ಉಗುರಿದೆ. ದೃಢವಾದ ಕಾಲು ಇರುವುದರಿಂದ ಬೇಟೆಯಾಡಲು ಹಾಗೂ ಬೇಟೆಯನ್ನು ಎತ್ತಿ ಒಯ್ಯಲು ಅನುಕೂಲಕರವಾಗಿದೆ. ಗಂಡು -ಹೆಣ್ಣು ಎರಡೂ ಹಕ್ಕಿಗಳಲ್ಲಿ ಬೂದು ಬಣ್ಣದ ತುದಿಯಲ್ಲಿ ಬಾಗಿರುವ ಚಿಕ್ಕ ಕೊಕ್ಕಿದೆ.  ಕೊಕ್ಕಿನ ಬುಡದಲ್ಲಿ ತಿಳಿ ಹಳದಿ ಬಣ್ಣ ಇರುವುದು ಸೂಕ್ಷ್ಮವಾಗಿ ಗಮನಿಸಿದರೆ ಕಾಣುತ್ತದೆ. 

   ಬೂದು ವರ್ಣದ ಗಂಡು ಹಕ್ಕಿಯ ಕಣ್ಣು ಕೆಂಪಿದ್ದು ನಡುವೆ ಕಪ್ಪು-ಸ್ವಲ್ಪ ದೊಡ್ಡ ಪಾಪೆ ಇದೆ. ಹೆಣ್ಣು ಹಕ್ಕಿಗೆ ಕಣ್ಣಿನ ಪಾಪೆ ಸುತ್ತ ತಿಳಿ ಹಳದಿ ಬಣ್ಣ ಇರುವುದರಿಂದ, ಬೆಕ್ಕಿನ ಕಣ್ಣನ್ನು ಹೋಲುತ್ತದೆ. 

 ಕುತ್ತಿಗೆ ಭಾಗದಲ್ಲಿ ಗಂಡಿಗೆ ಮಸಕು ಬೂದು ಮಿಶ್ರಿತ ಬಿಳಿ ಬಣ್ಣವಿದೆ. ಹೆಣ್ಣು ಗಿಡುಗದಲ್ಲಿ ಒಟ್ಟಾರೆ ತಿಳಿ ಕಂದುಬಣ್ಣ ಪ್ರಧಾನವಾಗಿ ಕಾಣುತ್ತದೆ. ಗಂಡು ಹಕ್ಕಿಯಲ್ಲಿ ಕೆಳಭಾಗದ ಗೆರೆ ದಪ್ಪ ಮತ್ತು ಕಪ್ಪಾಗಿದ್ದರೆ, ಹೆಣ್ಣು ಹಕ್ಕಿಯ ಎದೆ ಮತ್ತು ಹೊಟ್ಟೆ, ರೆಕ್ಕೆಯ ಅಡಿಯ ಗೆರೆ ತಿಳುವಾಗಿ ಮತ್ತು ತಿಳಿ ಕಂದು ಬಣ್ಣ ಇದೆ.

  ಈ ಗಿಡುಗ ಎರೆಹುಳು, ಹೆಗ್ಗಣ, ಇಲಿ, ಮೊಲಗಳನ್ನೂ, ಚಿಕ್ಕ ಹಕ್ಕಿಗಳನ್ನೂ  ತಿನ್ನುತ್ತದೆ.  ಚಿಕ್ಕ ಎರೆಹುಳು, ಜೇಡಗಳನ್ನು -ತನ್ನ ಚಿಕ್ಕ ಮರಿಗೆ ಗುಟುಕಿನಂತೆ ನೀಡುತ್ತದೆ. ಈ ಗಿಡುಗದ ದನಿ  ಕರ್ಕಶ.  ಮಾರ್ಚ್‌ನಿಂದ ದಿಂದ ಮೇ ಅವಧಿಯಲ್ಲಿ ಎತ್ತರದ ಮಾವು , ನೇರಳ, ಮತ್ತಿ ಮರಗಳ ಮೇಲೆ ಬಿಡಿಬಿಡಿಯಾಗಿರುವ ಕೋಲನ್ನು ಇರಿಸಿ, ಅಟ್ಟಣಿಗೆ ನಿರ್ಮಿಸಿ ,ಅದರಮೇಲೆ ಬೇರು, ನಾರು, ಹಾಕಿ ಕಾಗೆಯ ಗೂಡನ್ನು ಹೋಲುವ ಗೂಡನ್ನು ನಿರ್ಮಿಸುತ್ತದೆ.  ಗೂಡು ಕಟ್ಟಲು ಕೆಲವೊಮ್ಮೆ ಲೋಹದ ತಂತಿಯನ್ನೂ ಉಪಯೋಗಿಸುವುದುಂಟು.  ಒಂದು ವರ್ಷದಲ್ಲಿ ಇದು 7 ಮೊಟ್ಟ ಇಟ್ಟ ದಾಖಲೆಯೂ ಇದೆ. 

ಪಿ. ವಿ. ಭಟ್‌ ಮೂರೂರು

Advertisement

Udayavani is now on Telegram. Click here to join our channel and stay updated with the latest news.

Next