Advertisement

ವಿದ್ಯಾಲಯವೋ ಚರಂಡಿಯೋ!

03:57 PM Dec 26, 2018 | |

ಸೇಡಂ: ಕೂಲಿ ಮಾಡುವವರು ತಮ್ಮ ಮಕ್ಕಳನ್ನು ಎಷ್ಟೇ ಕಷ್ಟ ಬಂದರೂ ಖಾಸಗಿ ಶಾಲೆಗೆ ಕಳಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟ ಬಂದರೂ ಹೆದರದೆ ಸಾಲ ಮಾಡಿಯಾದರೂ ಶಿಕ್ಷಣ ಕೊಡಿಸುತ್ತಿದ್ದಾರೆ. ಹಾಗೆಂದು ಖಾಸಗಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎನ್ನುವ ಭ್ರಮೆ ನಿಮ್ಮದಾದರೆ ಅದು ತಪ್ಪು. ಇದಕ್ಕೆ ಸರ್ಕಾರಿ ಶಾಲೆಗಳ ದುಸ್ಥಿತಿಯೂ ಬಹುದೊಡ್ಡ ಕಾರಣವಾಗಿದೆ. ಇದಕ್ಕಿದೆ ಇಲ್ಲಿದೆ ಉದಾಹರಣೆ. ಪಟ್ಟಣದ ಕೆಇಬಿ ಕಾಲೋನಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶೌಚಾಲಯ, ಗಬ್ಬು ನಾರುವ ಕೇಂದ್ರ ಎನ್ನುವ ಬಿರುದನ್ನು ಪಡೆದುಕೊಂಡಿದೆ. ಯಾಕೆ ಅಂತೀರಾ. ಒಮ್ಮೆ ಈ ಶಾಲೆಗೆ ಭೇಟಿ ಕೊಟ್ಟರೆ ಸಾಕು ಚರಂಡಿಗೂ, ಶಾಲೆಗೂ ವ್ಯತ್ಯಾಸ ಅರಿಯುವುದು ಕಷ್ಟ. ಹಂದಿಗಳ ಆವಾಸಸ್ಥಾನವಾಗಿದೆ ಸುತ್ತಲಿನ ವಾತಾವರಣ.

Advertisement

24 ಗಂಟೆ ಕಾಲವೂ ಇಲ್ಲಿ ದುರ್ವಾಸನೆ ಮೂಗಿಗೆ ರಾಚುತ್ತಲೇ ಇದೆ. ಇಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗೆ ಕೇವಲ ಉಚಿತ ಶಿಕ್ಷಣವಲ್ಲ, ಜೊತೆಗೆ ರೋಗಗಳು ಪುಕ್ಕಟೆಯಾಗಿ ಬರುತ್ತವೆ. ಅಲ್ಲದೆ ಇದೆ ಶಾಲೆಯಲ್ಲಿ ಸ್ವತ್ಛ ಭಾರತದ ಬಗ್ಗೆಯೂ ಬೋಧನೆ ಮಾಡಲಾಗುತ್ತಿದೆ. ಒಂದೆಡೆ ಗಬ್ಬೆದ್ದು ನಾರುವ ಚರಂಡಿಗಳು, ಎಲ್ಲೆಂದರಲ್ಲಿ ಶೌಚ ಮಾಡುವ ಜನ. ಹಂದಿಗಳ ಬಿಡಾರ. ಇವುಗಳ ಮಧ್ಯೆ ಶಾಲೆ ಪ್ರಾಂಗಣದಲ್ಲೇ ಕಂಬಗಳನ್ನು ಹೂಡಿ ಒತ್ತುವರಿ ಮಾಡಲು ಮುಂದಾಗಿರುವ ಖಾಸಗಿ ವ್ಯಕ್ತಿಗಳು. ಶಾಲೆಯ ದುಸ್ಥಿತಿಯನ್ನೇ ಸರಿಮಾಡದ ಶಿಕ್ಷಣ ಇಲಾಖೆ, ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳುವರೇ ಎನ್ನುವ ಪ್ರಶ್ನೆ ಮೂಡಬಹುದು.

ನಿಜವಾಗಿಯೂ ಈ ಶಾಲೆ ಸ್ಥಿತಿಗತಿ ಕುರಿತು ಯೋಚಿಸುವವರೇ ಇಲ್ಲದಾಗಿದೆ. ಇಲ್ಲಿನ ಮಕ್ಕಳ ಸ್ಥಿತಿ ದೇವರಿಗೇ ಪ್ರೀತಿ. ಶಿಕ್ಷಣ ಇಲಾಖೆ ದಿವ್ಯ ಮೌನ: ಇಂತಹ ದುಸ್ಥಿತಿ ಬಗ್ಗೆ ಹಲವು ಬಾರಿ ಸ್ಥಳೀಯರು ಮಾಹಿತಿ ನೀಡಿದ್ದರೂ ಕಿಂಚಿತ್ತೂ ಕಾಳಜಿ ತೋರದ ಶಿಕ್ಷಣ ಇಲಾಖೆ ಅಧಿಕಾರಿಗಳು ದಿವ್ಯ ಮೌನ ವಹಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ಕರೆಯನ್ನೇ ಪಡೆಯಲ್ಲ ಎಂದು ಸುತ್ತಮುತ್ತಲಿನ ನಿವಾಸಿಗಳು ‘ಉದಯವಾಣಿ’ ಎದುರು ದೂರಿದ್ದಾರೆ.

ಸೊಳ್ಳೆ ಕಡಿಸಿಕೊಳ್ಳದೆ ಮನೆಗೆ ಹೋಗಲ್ಲ
ಇಲ್ಲಿ ಶಾಲೆ ಕಲಿಯುವ ಮಕ್ಕಳು ಪ್ರತಿನಿತ್ಯ ಸೊಳ್ಳೆ ಕಡಿಸಿಕೊಳ್ಳದೆ ಮನೆಗೆ ಹೋದ ದಿನವೇ ಇಲ್ಲ. ಸುತ್ತಲೂ ದೊಡ್ಡ ಚರಂಡಿಯಿದ್ದು ಕೊಳಚೆ ನೀರು ಹರಿಯುತ್ತಿರುತ್ತದೆ. ಕೆಲವೊಮ್ಮೆ ಶಾಲೆ ಆವರಣಕ್ಕೆ ಕೊಳಚೆ ನೀರು ನುಗ್ಗುತ್ತದೆ. ಈ ಕುರಿತು ಮಾಹಿತಿ ಇದ್ದರೂ ಪುರಸಭೆ ಮತ್ತು ಶಿಕ್ಷಣ ಇಲಾಖೆ ಸುಮ್ಮನಿದೆ. ಶಿಕ್ಷಣ ಇಲಾಖೆ ಶಾಲೆಗಳನ್ನು ಶಿಕ್ಷಣ ನೀಡಲು ತೆರೆದಿದೆಯೋ ಅಥವಾ ರೋಗಗಳನ್ನು ನೀಡಲು ತೆರೆದಿದೆಯೋ ಅರ್ಥವಾಗುತ್ತಿಲ್ಲ.
 ಉಮರ್‌, ನಿವಾಸಿ

ಹೆದರಿ ಬದುಕುವಂತಾಗಿದೆ
ಸ್ವಚ್ಛತೆ ಬಗ್ಗೆ ಮಾತನಾಡಿದರೆ ನಾಚಿಕೆಯಾಗುತ್ತೆ ಸರ್‌. ಏಕೆಂದರೆ ಅಷ್ಟರ ಮಟ್ಟಿಗೆ ಶಾಲೆ ವಾತಾವರಣ ಹದಗೆಟ್ಟಿದೆ. ಇದರ ಮಧ್ಯೆ ಸ್ಥಳೀಯ ಕೆಲ ಖಾಸಗಿ ಜನರು ಹೆದರಿಸಿ ಆವರಣವನ್ನು ಒತ್ತುವರಿ ಮಾಡಲು ಮುಂದಾಗುತ್ತಿದ್ದಾರೆ. ಪ್ರಶ್ನಿಸಿದರೆ ದಬ್ಟಾಳಿಕೆ ನಡೆಸುತ್ತಿದ್ದಾರೆ. ಈಗಲಾದರೂ ಕ್ರಮ ಕೈಗೊಳ್ಳಿ. ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಿ.
ಶಾಲೆ ಶಿಕ್ಷಕಿ

Advertisement

ಶಿವಕುಮಾರ ಬಿ. ನಿಡಗುಂದಾ

Advertisement

Udayavani is now on Telegram. Click here to join our channel and stay updated with the latest news.

Next