Advertisement
ಸಾರ್ವಜನಿಕರಲ್ಲಿ ತೋಟಗಾರಿಕೆಯ ಬಗ್ಗೆ ಅಭಿರುಚಿ, ಮಕ್ಕಳಲ್ಲಿ ಜ್ಞಾನ ಹೆಚ್ಚಿಸುವ, ಬೆಳೆಗಾರರಿಗೆ ಪ್ರೋತ್ಸಾಹ ನೀಡುವ, ಒಂದೆಡೆ ದೇಶ-ವಿದೇಶದ ವಿವಿಧ ಬಗೆಯ ಹೂವು, ಅಲಂಕಾರಿಕ ಗಿಡಗಳ ಪ್ರದರ್ಶಿಸುವ ತೋಟಗಾರಿಕೆ ಇಲಾಖೆಯ ಉದ್ದೇಶ ಸಾಫಲ್ಯಕ್ಕೆ ಅನುಗುಣವಾಗಿ ಫಲ-ಪುಷ್ಪ ಪ್ರದರ್ಶನ ನಡೆಯುತ್ತಿದೆ.
Related Articles
Advertisement
ಹತ್ತು ಹಲವು ತಳಿಯ 15 ಸಾವಿರ ಗಿಡಗಳನ್ನು ಪ್ಲಾಸ್ಟಿಕ್ ಕುಂಡಗಳಲ್ಲಿ ಬೆಳೆಸಲಾಗಿದೆ. ಹಳದಿ, ಕೇಸರಿ, ಬಿಳಿ, ಕೆಂಪು, ಪರ್ಪಲ್, ಬಣ್ಣದ ಹೂವುಗಳ ಸಾಲ್ವಿಯಾ, ಮ್ಯಾರಿಗೋಲ್ಡ್, ಕಲರ್ ಪೆಟ್ಯುನಿಯಾ, ಪೆರಿವಿಂಕಲ್, ಸೆಲ್ಯುಷಿಯಾ, ಜೀನಿಯಾ, ಟೆಟ್ಯುನಿಯಾ, ಬಾಲ್ಸ್‌ಮ್, ವೆರ್ಬೇನಿಯಾ, ಆಸ್ಟರ್ ಮುಂತಾದ ಹೂವಿನ ಗಿಡಗಳ ಪ್ರದರ್ಶನ ಚಿತ್ತಾಕರ್ಷಕ.
ಜಿಲ್ಲೆಯ ವಿವಿಧ ತಾಲೂಕುಗಳ ರೈತರು ಬೆಳೆದಿರುವ ಐದಾರು ಬಗೆಯ ಹೈಬ್ರಿಡ್ ತೆಂಗಿನ ಕಾಯಿಗಳು, ಕಾಳು ಮೆಣಸು, ನಿಂಬೆ, ಅಡಿಕೆ, ತಾಳೆ ಹಣ್ಣು, ಸಪೋಟ, ಸೀತಾಫಲ, ತೋತಾಪುರಿ ಮಾವಿನಕಾಯಿ, ಪಪ್ಪಾಯಿ, ಹಲಸು, ಏಲಕ್ಕಿ ಬಾಳೆ, ದಾಳಿಂಬೆ, ತರಕಾರಿಗಳಾದ ಕ್ಯಾರೆಟ್, ಗೆಣಸು, ಟೊಮಾಟೋ ಸೀಮೆ ಬದನೆ, ಬದನೆ, ಹಾಗಲಕಾಯಿ, ಎಲೆ ಕೋಸು….ನಾನಾ ಬಗೆಯ ತೋಟಗಾರಿಕೆ ಬೆಳೆಗಳ ಪ್ರದರ್ಶನ ಎಲ್ಲರನ್ನೂ ಆಕರ್ಷಿಸುತ್ತಿದೆ.
ಫಲಪುಷ್ಪ ಪ್ರದರ್ಶನದ ಅಂಗವಾಗಿ ತೋಟಗಾರಿಕೆ ಇಲಾಖೆಯಿಂದ ನಡೆಸಿದ ರಂಗೋಲಿ ಸ್ಪರ್ಧೆಯಲ್ಲಿ ದೇಶದ ಭಾವೈಕ್ಯತೆ ಸೂಸುವ ಭಾರತ ಧ್ವಜಾರೋಹಣ…, ಸ್ವಚ್ಛ ಭಾರತ ಪರಿಕಲ್ಪನೆ…, ಶಿಕ್ಷಣದ ಮಹತ್ವ ಸಾರುವ ರಂಗೋಲಿಯ ಸೊಬಗೇ ಸೊಬಗು. ಈಚೆಗೆ ಲಿಂಗೈಕ್ಯರಾದ ತುಮಕೂರು ಸಿದ್ಧಗಂಗಾ ಶ್ರೀಗಳ ಭಾವಚಿತ್ರ ರಂಗೋಲಿಯಲ್ಲಿ ಒಡಮೂಡಿಸಿರುವುದು ಎಲ್ಲರ ಗಮನ ಸೆಳೆಯುತ್ತಿದೆ.
ರಂಗೋಲಿಯಲ್ಲಿ ಮೂಡಿರುವ ಗಾನಯೋಗಿ ಪಂ| ಪುಟ್ಟರಾಜ ಗವಾಯಿ, ರಾಷ್ಟ್ರಕವಿ ಕುವೆಂಪು, ತೋಟಗಾರಿಕೆ ಪಿತಾಮಹಾ ಡಾ| ಎಂ.ಎಚ್. ಮರಿಗೌಡ ಇತರರ ಭಾವಚಿತ್ರಗಳು ಸೊಗಸಾಗಿವೆ. ಸಿರಿಧಾನ್ಯದಲ್ಲಿ ಮೂಡಿದ ಅಂಬೇಡ್ಕರ್ ಅವರ ಪ್ರತಿಕೃತಿ ಕಲಾವಿದರ ಕಲಾ ನೈಪುಣ್ಯತೆಗೆ ಸಾಕ್ಷಿಯಾಗಿದೆ.
ಫಲ-ಪುಷ್ಟ ಪ್ರದರ್ಶನದ ಹಿನ್ನೆಲೆಯಲ್ಲಿ ಗಾಜಿನ ಮನೆಯ ಒಳ ಆವರಣದಲ್ಲಿರುವ ಎಲ್ಲಾ ಮರಗಳಿಗೂ ಬಗೆ ಬಗೆಯಾದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಬೆಳಕಿನಲ್ಲಿ ರಾರಾಜಿಸುವ ಬೊನ್ಸಾಯ್… ಗಿಡಗಳನ್ನ ನೋಡುವುದೇ ಒಂದು ಸಂತೋಷ. ಅಕ್ವೇರಿಯಂನಲ್ಲಿನ ವಿವಿಧ ಮೀನುಗಳ ಪ್ರದರ್ಶನ ಚಿಕ್ಕಮಕ್ಕಳಾದಿಯಾಗಿ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ.
ಪ್ರದರ್ಶನದ ಅಂಗವಾಗಿ ಮಕ್ಕಳಿಗೆ ಅಮ್ಯೂಸ್‌ಮೆಂಟ್ ಪಾರ್ಕ್ ಇದೆ. ಗಾಜಿನಮನೆ, ವಿವಿಧ ಫಲ-ಪುಷ್ಪ ನೋಡಿದ ನಂತರ ಜಿಹ್ವಾ ಚಾಪಲ್ಯಕ್ಕಾಗಿ ವಿಶೇಷ ಬಗೆ ಬಗೆಯ ತಿಂಡಿ ತಿನಿಸುಗಳ ಮಳಿಗೆಗಳು ಇವೆ. ಫೆ. 4ರ ವರೆಗೆ ಪ್ರತಿನಿತ್ಯ ಸಂಜೆ 6 ರಿಂದ ರಾತ್ರಿ 9 ರವರೆಗೆ ಪ್ರದರ್ಶನ ನಡೆಯಲಿದೆ.
ಫಲ-ಪುಷ್ಪ ಪ್ರದರ್ಶನದ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಉತ್ತಮ ಉದ್ಯಾನ ವನ ನಿರ್ಮಾಣ, ಬೆಳೆಗಾರರು ಬೆಳೆದ ವಿವಿಧ ಹಣ್ಣು, ತರಕಾರಿ, ಸಾಂಬಾರು ಮತ್ತು ತೋಟದ ಬೆಳೆಗಳ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಟ್ಟು ಉತ್ತಮ ಪ್ರದರ್ಶನಕ್ಕೆ ಬಹುಮಾನ ವಿತರಣೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಗಾಜಿನಮನೆ, ಫಲ-ಪುಷ್ಪ ಪ್ರದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ರಸ್ತೆ, ಸಂಚಾರ ದಟ್ಟಣೆಗೆ ಕ್ರಮ ಕೈಗೊಂಡಲ್ಲಿ ಫಲ-ಪುಷ್ಪ ಪ್ರದರ್ಶನ ಇನ್ನಷ್ಟು ಯಶಸ್ವಿಯಾಗಲಿದೆ.