ಬೆಂಗಳೂರು: ಪಟಾಕಿ ಸಿಡಿತದಿಂದ ನಗರದ 12 ವರ್ಷದ ಬಾಲಕಿಯ ಮುಖ, ಕೈ ಹಾಗೂ ಕಣ್ಣುಗಳಿಗೆ ತೀವ್ರ ಹಾನಿಯಾಗಿದ್ದು, ಪ್ಲಾಸ್ಟಿಕ್ ಸರ್ಜರಿಗೆ ವೈದ್ಯರು ಸೂಚಿಸಿದ್ದಾರೆ.
ಭಾನುವಾರ ರಾತ್ರಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಏಕಾಏಕಿ ಹೂಕುಂಡ ಸಿಡಿದು ಬಾಲಕಿಯ ಬಹುತೇಕ ಮುಖ ಸುಟ್ಟಿದ್ದು, ಕೈಗೆ ತೀವ್ರ ಗಾಯವಾಗಿದೆ. ಜತೆಗೆ ಕಣ್ಣಿಗೂ ಶೇ.50 ರಷ್ಟು ಹಾನಿಯಾಗಿದೆ. ಕೂಡಲೇ ನಗರದ ಮಿಂಟೋ ಕಣ್ಣಿನ ಆಸ್ಪತ್ರೆಗೆ ಕರೆತರಲಾಗಿದೆ.
ಪ್ರಾಥಮಿಕ ತಪಾಸಣೆ ನಡಿಸಿದ ವೈದ್ಯರು ಕೈ ಮತ್ತು ಕಣ್ಣಿಗೆ ತ್ವರಿತ ಚಿಕಿತ್ಸೆ ನೀಡಿ, ಸಂಪೂರ್ಣ ಮುಖಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕೆಂದು ತಿಳಿಸಿದ್ದಾರೆ. ಹೀಗಾಗಿ, ಬಾಲಕಿಯನ್ನು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗಕ್ಕೆ ವರ್ಗಾಯಿಸಲಾಗಿದೆ.
ಇದನ್ನೂ ಓದಿ:ಬಿಹಾರ ಚುನಾವಣೆಯಲ್ಲಿ ರಾಹುಲ್ ಪ್ರಚಾರ ಮಾಡಿದ್ದಲ್ಲ, ಪಿಕ್ ನಿಕ್ ಮಾಡಿದ್ದರು: ಆರ್ ಜೆಡಿ ನಾಯಕ
ಸದ್ಯ ಸರ್ಕಾರದ ಸೂಚನೆಯಂತೆ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಕೋವಿಡ್ ಸೋಂಕು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಬೇಕಿದೆ. ಸದ್ಯ ಬಾಲಕಿಯ ಗಂಟಲು ದ್ರವ ಮಾದರಿ ತೆಗೆದು ಆರ್ ಟಿಪಿಸಿಆರ್ ಪರೀಕ್ಷೆಗೆ ಕಳಿಸಿದ್ದು, ವರದಿಗಾಗಿ ವೈದ್ಯರು ಕಾಯುತ್ತಿದ್ದಾರೆ.
ಇದಲ್ಲದೆ, ತಡರಾತ್ರಿ ಪಟಾಕಿ ಹಾನಿಗೊಳಗಾಗಿ ಮಿಂಟೋ ಆಸ್ಪತ್ರೆಯಲ್ಲಿಯೇ ಇಬ್ಬರು ಮಕ್ಕಳು, ನಾರಾಯಣ ನೇತ್ರಾಲಯದಲ್ಲಿ 40 ವರ್ಷದ ಮಹಿಳೆ ಚಿಕಿತ್ಸೆ ಪಡೆದಿದ್ದಾರೆ.
ನಗರದ ಒಟ್ಟಾರೆ ಪಟಾಕಿ ಹಾನಿ ಪ್ರಕರಣಗಳ ಸಂಖ್ಯೆ 15 ಕ್ಕೆ ಹೆಚ್ಚಳವಾಗಿವೆ. ಈ ಪೈಕಿ ಹಬ್ಬದ ಮೊದಲ ದಿನ ಎರಡು, ಎರಡನೇ ದಿನ 13 ಮಂದಿಯ ಕಣ್ಣಿಗೆ ಹಾನಿಯಾಗಿದೆ.