Advertisement
ಶಿವಮೊಗ್ಗ ಜಿಲ್ಲೆಯಲ್ಲಿ ಹೂವಿನ ಕೃಷಿಯೇ ವಿರಳ. ಬದಲಾಗಿ ಭತ್ತದ ಕಟಾವಿನ ನಂತರ ಬೇಸಿಗೆ ಬೆಳೆಯಾಗಿ ಉದ್ದು, ಹೆಸರುಕಾಳು, ತರಕಾರಿ ಕೃಷಿ ಕಾಣುತ್ತದೆ. ಹೀಗಿರುವಾಗಲೇ, ಸಾಗರ ತಾಲೂಕಿನ ಭೀಮನಕೋಣೆ ಗ್ರಾಮದ ಹರಿವರಿಕೆಯ ರೈತ ಗಣಪತಿ, ಕಳೆದ 4 ವರ್ಷಗಳಿಂದ ಬೇಸಿಗೆ ಬೆಳೆಯಾಗಿ ಪುಷ್ಪ ಕೃಷಿಯ ಮೂಲಕ ಸುತ್ತಮುತ್ತಲ ರೈತರ ಗಮನ ಸೆಳೆಯುತ್ತಿದ್ದಾರೆ.
ಸಾಗರ-ಹೆಗ್ಗೋಡು ಮಾರ್ಗದಲ್ಲಿ ಸಿಗುವ ಹರಿವರಿಕೆ ಎಂಬಲ್ಲಿ ಇವರ ಹೊಲವಿದೆ. ಹೂವಿನ ಕೃಷಿಯಲ್ಲಿ ಅದೃಷ್ಟ ಪರೀಕ್ಷಿಸಲು ನಿರ್ಧರಿಸಿದ ಗಣಪತಿ, ನಾಲ್ಕು ವರ್ಷದ ಹಿಂದೆ, ಡಿಸೆಂಬರ್ ಸುಮಾರಿಗೆ ಭತ್ತದ ಕಟಾವು ಮುಗಿದ ನಂತರ ಚೆಂಡು ಹೂವಿನ ಕೃಷಿ ಬಗ್ಗೆ ತಂತ್ರ ರೂಪಿಸಿಕೊಂಡರು. ಸುಮಾರು 1.5 ಎಕರೆ ವಿಸ್ತೀರ್ಣದ ಗದ್ದೆಯನ್ನು ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿ ಹದಗೊಳಿಸಿಕೊಂಡರು. ದೊಡ್ಡಬಳ್ಳಾಪುರದ ನರ್ಸರಿಯಿಂದ ಚೆಂಡು ಹೂವಿನ ಸಸಿ ಖರೀದಿಸಿ ತಂದು ನಾಟಿ ಮಾಡಿದರು. ಜನವರಿ ಮೊದಲನೇ ವಾರದ ಕೊನೆಯಲ್ಲಿ ಪಟ್ಟೆಸಾಲು ನಿರ್ಮಿಸಿ, ಗಿಡ ನಾಟಿ ಮಾಡಿದರು. ಗಿಡ ನೆಟ್ಟ 15 ದಿನಕ್ಕೆ ಗೊಬ್ಬರ ಹಾಕಿದರು. ತೆರೆದ ಬಾವಿಗೆ ಅಳವಡಿಸಿದ್ದ ಮೋಟಾರು ಬಳಸಿ, 4 ದಿನಕ್ಕೊಮ್ಮೆ ಹಾಯ್ ನೀರಿನ ಮೂಲಕ ನೀರು ಹರಿಸಿದರು. ಪ್ರತಿ 15 ದಿನಕ್ಕೆ ಒಮ್ಮೆಯಂತೆ 19:19 ಕಾಂಪ್ಲೆಕ್ಸ್ ಗೊಬ್ಬರ ನೀಡುತ್ತಾ ಕೃಷಿ ಮುಂದುವರೆಸಿದರು. ಮಾರ್ಚ್ ಮೊದಲವಾರದಿಂದ ಹೂವಿನ ಫಸಲು ಕಟಾವಿಗೆ ಸಿದ್ಧವಾಯಿತು. ಲಾಭದ ಲೆಕ್ಕಾಚಾರ
ಗಣಪತಿ ಅವರು ಒಂದೂವರೆ ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ಚೆಂಡು ಹೂವಿನ ಸಸಿ ಬೆಳೆಸಿದ್ದಾರೆ. ಸಸಿಯೊಂದಕ್ಕೆ ರೂ. 3 ರಂತೆ, ಒಟ್ಟು 10 ಸಾವಿರ ಸಸಿ ಬೆಳೆಸಿದ್ದಾರೆ. ಮಾರ್ಚ್ ಮೊದಲವಾರದಿಂದ, ಎರಡು ದಿನಕ್ಕೆ ಒಂದು ಬಾರಿಯಂತೆ ಹೂವಿನ ಫಸಲು ಕಿತ್ತು ಮಾರಿದ್ದಾರೆ. ಈವರೆಗೆ ಸುಮಾರು 40 ಕ್ವಿಂಟಾಲ್ ಹೂವು ಮಾರಾಟವಾಗಿದೆ. ಕ್ವಿಂಟಾಲ್ ಒಂದಕ್ಕೆ ಸರಾಸರಿ ರೂ.3000 ದರ ದೊರೆತಿದೆ. 40 ಕ್ವಿಂಟಾಲ್ ಹೂವಿನ ಮಾರಾಟದಿಂದ ಈ ವರೆಗೆ ಇವರಿಗೆ ರೂ.1 ಲಕ್ಷದ 20 ಸಾವಿರದ ಆದಾಯ ದೊರೆತಿದೆ. ಇನ್ನೂ ಒಂದು ತಿಂಗಳು ಚೆಂಡು ಹೂವಿನ ಫಸಲು ದೊರೆಯಲಿದ್ದು, 20 ಕ್ವಿಂಟಾಲ್ ಹೂವು ಮಾರಾಟವಾಗಲಿದೆ. ಇದರಿಂದ ಸುಮಾರು ರೂ.60 ಸಾವಿರ ಆದಾಯ ದೊರೆಯಲಿದೆ. ಒಟ್ಟು ಲೆಕ್ಕ ಹಾಕಿದರೆ ರೂ.1 ಲಕ್ಷದ 80 ಸಾವಿರ ಆದಾಯವಾಗುತ್ತದೆ. ಹೊಲ ಹದಗೊಳಿಸಿದ್ದು, ಸಸಿ ಖರೀದಿ, ನೀರಾವರಿ ,ಗೊಬ್ಬರ, ಕೃಷಿ ಕೂಲಿ ಇತ್ಯಾದಿ ಎಲ್ಲ ಬಗೆಯ ಖರ್ಚುಗಳನ್ನು ಲೆಕ್ಕ ಹಾಕಿದರೂ 75 ಸಾವಿರ ರೂ. ಹೂಡಿಕೆಯಾಗಿದೆ. ಹೂವಿನ ಮಾರಾಟದಲ್ಲಿ ಸಿಗುವ ಹಣದಲ್ಲಿ ಈ ಖರ್ಚುಗಳನ್ನೆಲ್ಲ ಕಳೆದರೂ ಸಹ ರೂ.1 ಲಕ್ಷ ಲಾಭವಾಗುತ್ತದೆ.
Related Articles
Advertisement
— ಎನ್.ಡಿ.ಹೆಗಡೆ ಆನಂದಪುರಂ