Advertisement

ವರದಾನದ ನಿರೀಕ್ಷೆಯಲ್ಲಿ ಹೆಮ್ಮಾಡಿ ಸೇವಂತಿಗೆ ಬೆಳೆಗಾರರು

06:57 PM Dec 22, 2021 | Team Udayavani |

ಹೆಮ್ಮಾಡಿ: ಆಗಾಗ ಸುರಿಯುತ್ತಿದ್ದ ಮಳೆಯಬ್ಬರ ಕೆಲವು ದಿನಗಳಿಂದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಈಗ ಕರಾವಳಿಯಾದ್ಯಂತ ಚಳಿ ಶುರುವಾಗಿದ್ದು, ಇದರಿಂದ ಹೆಮ್ಮಾಡಿ ಭಾಗದಲ್ಲಿ ಬೆಳೆಯುವ ಸೇವಂತಿಗೆ ಬೆಳೆಗೆ ಅನುಕೂಲದ ನಿರೀಕ್ಷೆ ಬೆಳೆಗಾರರದ್ದಾಗಿದೆ.

Advertisement

ಚಳಿ – ಇಬ್ಬನಿಯಿಂದ ಸೇವಂತಿಗೆ ಗಿಡ ಉತ್ತಮ ವಾಗಿ ಬೆಳೆಯುತ್ತದೆ. ಈಗ ಗಿಡ ಬೆಳೆದು, ಮೊಗ್ಗು ಬಿಡುವ ಸಮಯವಾಗಿದ್ದು, ಸಕಾಲದಲ್ಲಿ ಚಳಿಯೂ ಆರಂಭವಾಗಿರುವುದರಿಂದ ಸೂಕ್ತ ವಾತಾವರಣ ಇದ್ದಂತಿದೆ.

ನಿರಂತರ ಮಳೆ, ವಿಪರೀತ ಸೆಖೆ ಹೀಗೆ ಪ್ರತಿಕೂಲ ಹವಾಮಾನದಿಂದಾಗಿ ಆರಂಭದಲ್ಲಿ ಕಂಗೆಟ್ಟಿದ್ದ ಹೆಮ್ಮಾಡಿಯ ಸೇವಂತಿಗೆ ಬೆಳೆಗಾರರು ಈಗ ಚಳಿ ಆರಂಭಗೊಂಡಿರುವುದರಿಂದ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಹೆಮ್ಮಾಡಿ, ಕಟ್‌ಬೆಲೂ¤ರು ಗ್ರಾಮಗಳ ಸುತ್ತ ಮುತ್ತಲಿನ ಕಟ್ಟು, ಜಾಲಾಡಿ, ಸಂತೋಷನಗರ, ಬುಗರಿಕಡು, ಹರೇಗೋಡು, ಕೆಂಚನೂರು ಸಹಿತ ಇನ್ನಿತರ ಪ್ರದೇಶಗಳ ಸುಮಾರು 50- 60ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ 35ರಿಂದ 40 ಮಂದಿ ಬೆಳೆಗಾರರು ಸೇವಂತಿಗೆ ಹೂವನ್ನು ಬೆಳೆಯುತ್ತಾರೆ. ಇಲ್ಲಿನ ರೈತರು ಮುಂಗಾರಿನಲ್ಲಿ ಭತ್ತದ ಕೃಷಿಯನ್ನು ಅವಲಂಬಿಸಿದ್ದರೆ, ಹಿಂಗಾರಿನಲ್ಲಿ ಈ ಸೇವಂತಿಗೆ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ.

ಕಳೆ ಕಾಟ
ಪ್ರತೀ ಬಾರಿ ಜುಲೈ, ಆಗಸ್ಟ್‌ನಿಂದ ಸೇವಂತಿಗೆ ಹೂವಿನ ಗಿಡದ ಬೀಜ ಬಿತ್ತನೆ ಕಾರ್ಯ ಶುರು ವಾಗುವುದು ವಾಡಿಕೆ. ಜ. 14ರ ವೇಳೆಗೆ ಹೂವಿನ ಕೊಯ್ಲು ಶುರುವಾಗುತ್ತದೆ. ಆದರೆ ಈ ಬಾರಿ ತೀರಾ ಇತ್ತೀಚಿನವರೆಗೂ ಮಳೆ ಬರುತ್ತಿದ್ದುದರಿಂದ ಸೇವಂತಿಗೆ ಕೃಷಿಗೆ ಅಡ್ಡಿಯಾಗಿದೆ.

ಅದರಲ್ಲೂ ಮಳೆ ಪ್ರಮಾಣ ಜಾಸ್ತಿಯಾಗಿದ್ದರಿಂದ ಸೇವಂತಿಗೆ ಗಿಡದ ಜತೆ- ಜತೆಗೆ ಕಳೆ ಗಿಡಗಳು ಬೆಳೆದು, ತೊಂದರೆ ಉಂಟು ಮಾಡಿದೆ. ಕಳೆ ಗಿಡಗಳನ್ನು ತೆಗೆಯುವುದೇ ಬೆಳೆಗಾರರಿಗೆ ದೊಡ್ಡ ಸವಾಲಿನ ಕೆಲಸವಾಗಿದೆ.

Advertisement

ಬ್ರಹ್ಮಲಿಂಗೇಶ್ವರನಿಗೆ ಪ್ರಿಯ
ಜನವರಿ ತಿಂಗಳ ಮಕರ ಸಂಕ್ರಮಣದಂದು ನಡೆಯುವ ಮಾರಣಕಟ್ಟೆ ಜಾತ್ರೆಯಲ್ಲಿ ಹೆಮ್ಮಾಡಿ ಸೇವಂತಿಗೆಗೆ ಭಾರೀ ಬೇಡಿಕೆಯಿದೆ. ಬ್ರಹ್ಮಲಿಂಗೇಶ್ವರನಿಗೆ ಹೆಮ್ಮಾಡಿ ಸೇವಂತಿಗೆ ಅತ್ಯಂತ ಪ್ರಿಯವಾಗಿದ್ದು, ಈ ಹೂವನ್ನು ಅರ್ಪಿಸಿ, ಭಕ್ತಿಯಿಂದ ಕೇಳಿದರೆ, ಇಷ್ಟಾರ್ಥವೆಲ್ಲ ಈಡೇರುತ್ತದೆ ಎನ್ನುವ ಪ್ರತೀತಿಯಿದೆ. ಮಾರಣಕಟ್ಟೆ ಜಾತ್ರೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಹೆಮ್ಮಾಡಿ ಸೇವಂತಿಗೆಯು ಮಾರಾಟವಾಗುತ್ತಿದ್ದು, ಆ ಬಳಿಕ ಮಾರ್ಚ್‌ ವರೆಗೆ ಕುಂದಾಪುರ, ಬೈಂದೂರು ಭಾಗದೆಲ್ಲೆಡೆ ನಿತ್ಯವೂ ಜಾತ್ರೆ, ಕೆಂಡೋತ್ಸವಕ್ಕೆ ಹೂವು ಪೂರೈಕೆಯಾಗುತ್ತದೆ. ಮಾರಣಕಟ್ಟೆ ದೇವರ ಕೆಂಡ ಸೇವೆಗೆ ಈ ಹೂವನ್ನು ಮೊದಲಿಗೆ ಅರ್ಪಿಸಿದ ಬಳಿಕವೇ ಬಹುತೇಕ ಸೇವಂತಿಗೆ ಬೆಳೆಗಾರರು ಬೇರೆ – ಬೇರೆ ಕಡೆಗಳಿಗೆ ಮಾರಾಟ ಮಾಡಲು ಮುಂದಾಗುವುದು ವಾಡಿಕೆ.

ಉತ್ತಮ ಫಸಲು ನಿರೀಕ್ಷೆ
ದಿನೇ ದಿನೇ ಚಳಿ ತೀವ್ರತೆ ಏರುತ್ತಿದ್ದು, ಚಳಿ ಹೆಚ್ಚಾದಷ್ಟು ಸೇವಂತಿಗೆ ಹೂವಿನ ಬೆಳೆಗೆ ವರದಾನ. ಈಗ ನಿಧಾನಕ್ಕೆ ಒಂದೊಂದೇ ಗಿಡಗಳು ಮೊಗ್ಗು ಬಿಡಲಾರಂಭಿಸಿದ್ದು, ಹವಾ ಮಾನವು ಇದಕ್ಕೆ ಪೂರಕಯಾಗಿದೆ. ಈ ಬಾರಿ ಸೇವಂತಿಗೆ ಬೆಳೆಗಾರರು ಉತ್ತಮ ಫಸಲಿನ ನಿರೀಕ್ಷೆ ಯಲ್ಲಿದ್ದಾರೆ.
– ಪ್ರಶಾಂತ್‌ ಭಂಡಾರಿ ಹೆಮ್ಮಾಡಿ, ಸೇವಂತಿಗೆ ಬೆಳೆಗಾರರು

ಕರಟಿದ ಗಿಡ
ಈ ಬಾರಿ ನಿರಂತರ ಮಳೆಯಿಂದಾಗಿ ಕಳೆಗಿಡಗಳ ಕಾಟ ಹೆಚ್ಚಾಗಿತ್ತು. ಹೆಮ್ಮಾಡಿ ಭಾಗದಲ್ಲಿ ಬಹುತೇಕ ಎಲ್ಲ ಬೆಳೆಗಾರರು ಈ ಬಾರಿ ಸೇವಂತಿಗೆ ಕೃಷಿ ಮಾಡಿದ್ದಾರೆ. ಆದರೆ ಪ್ರತಿಕೂಲ ಹವಾಮಾನದಿಂದಾಗಿ ನಿರೀಕ್ಷಿತ ಮಟ್ಟದಲ್ಲಿ ಗಿಡ ಬೆಳೆದಿಲ್ಲ. ಅದರಲ್ಲೂ ಆಗಾಗ ಮಳೆ- ಬಿಸಿಲಿನ ಆಟದಿಂದಾಗಿ ಗಿಡಗಳು ಸಹ ಕರಟಿ ಹೋಗಿವೆ.
– ಮಹಾಬಲ ದೇವಾಡಿಗ, ಅಧ್ಯಕ್ಷರು, ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಘ

-ಪ್ರಶಾಂತ್‌ ಪಾದೆ

 

Advertisement

Udayavani is now on Telegram. Click here to join our channel and stay updated with the latest news.

Next