Advertisement
ವರಮಹಾಲಕ್ಷ್ಮೀ ಪೂಜೆಗೆ ಮುಖ್ಯವಾಗಿ ಬೇಕಾಗಿರುವುದೇ ಹೂವು, ಹಣ್ಣುಗಳು. ನಗರದ ಗಲ್ಲಿಗಲ್ಲಿಗಳಲ್ಲಿ ವ್ಯಾಪಾರಸ್ಥರು ಹೂ ಮಾರಾಟದಲ್ಲಿ ತೊಡಗಿದ್ದಾರೆ. ಮಲ್ಲಿಗೆ, ಕನಕಾಂಬರ, ಗುಲಾಬಿ ಹೀಗೆ ನಾನಾ ರೀತಿಯ ಹೂವುಗಳ ಖರೀದಿ ಪ್ರಕ್ರಿಯೆಯೂ ಜೋರಾಗಿದೆ. ಜತೆಗೆ ಮಾವಿನ ಹಣ್ಣು, ಆ್ಯಪಲ್, ಪಪ್ಪಾಯಿ, ಕಿತ್ತಳೆ, ಬಾಳೆಹಣ್ಣು ಮುಂತಾದ ಹಣ್ಣುಗಳ ವ್ಯಾಪಾರವೂ ನಡೆಯುತ್ತಿದೆ.
ಮಾವಿನಹಣ್ಣು, ಆ್ಯಪಲ್‌ಗಳನ್ನು ಬೆಂಗಳೂರು, ಚಿತ್ರದುರ್ಗ, ಮೈಸೂರು ಕಡೆಗಳಿಂದ ತರಿಸಲಾಗುತ್ತಿದೆ. ಆದರೆ ಶಿರಾಡಿ ಮತ್ತು ಸಂಪಾಜೆ ಘಾಟಿ ಬಂದ್ ಆಗಿರುವುದರಿಂದ ಚಾರ್ಮಾಡಿ ಘಾಟಿಯೊಂದೇ ಪರ್ಯಾಯ ದಾರಿ. ಅಲ್ಲಿ ವಾಹನ ದಟ್ಟಣೆಯೂ ಇರುವುದರಿಂದ ಹಣ್ಣು, ತರಕಾರಿ ನಗರಕ್ಕೆ ತಲುಪುವಾಗ ಅರ್ಧ ದಿನ ತಡವಾಗುತ್ತದೆ ಎನ್ನುತ್ತಾರೆ ಹಾಪ್ ಕಾಮ್ಸ್ ಸಿಬಂದಿ ಸುರೇಶ್. ಹೂವು-ತರಕಾರಿಗೂ ಸಮಸ್ಯೆ
ಹೂವಿನ ವ್ಯಾಪಾರಿ ಸಂತೋಷ್ ಹೇಳುವ ಪ್ರಕಾರ, ಗದಗ, ಮೈಸೂರು, ಸೇಲಂ, ಕುಣಿಗಲ್ ಮುಂತಾದ ಕಡೆಗಳಿಂದ ಹೂವು ಆಮದು ಮಾಡಲಾಗುತ್ತದೆ. ಸುಮಾರು ಎರಡು ಗಂಟೆಗಳಷ್ಟು ತಡವಾಗಿ ಮಂಗಳೂರು ತಲುಪುತ್ತಿವೆ ಎನ್ನುತ್ತಾರೆ. ಮಾವಿನಹಣ್ಣಿನ ದರ 60 ರೂ. ಗಳಿಂದ 70 ರೂ.ಗಳಿಗೆ ಏರಿಸಿದ್ದರೆ, ಉಳಿದೆಲ್ಲ ಹಣ್ಣುಗಳ ಬೆಲೆಯಲ್ಲಿ ಅಷ್ಟೇನು ವ್ಯತ್ಯಾಸವಾಗಿಲ್ಲ.
Related Articles
ಕ್ಯಾರೆಟ್, ಟೊಮೇಟೊ, ಬೆಂಡೆ, ಸೌತೆ, ಬದನೆ, ಹೀರೆ ಮುಂತಾದ ತರಕಾರಿಗಳನ್ನು ಚಿಕ್ಕಮಗಳೂರು, ಬೆಂಗಳೂರು, ಹಾಸನ ಕಡೆಯಿಂದ ತರಿಸಲಾಗುತ್ತದೆ. ಕೆಲವು ತರಕಾರಿಗಳಿಗೆ ಬೆಲೆ ಏರಿಸಲಾಗಿದ್ದರೂ, ಬೇಡಿಕೆ ಕುಸಿತವಾಗಿಲ್ಲ ಎಂದು ತರಕಾರಿ ಅಂಗಡಿ ಮಾಲಕರು ಹೇಳುತ್ತಾರೆ.
Advertisement
ದೇಗುಲಗಳಲ್ಲಿ ವಿಶೇಷ ಪೂಜೆ ವರಮಹಾಲಕ್ಷ್ಮೀ ಹಬ್ಬದಂದು ವಿವಿಧ ದೇವಸ್ಥಾನಗಳಲ್ಲಿಯೂ ಲಕ್ಷ್ಮೀ ದೇವಿಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ವಿಶೇಷವಾಗಿ ದೇವಿ ದೇವಸ್ಥಾನಗಳಲ್ಲಿ ಹೆಣ್ಣು ಮಕ್ಕಳು ಭಾಗಿಯಾಗುತ್ತಾರೆ. ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನ, ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನ ಮತ್ತಿತರ ದೇವಸ್ಥಾನಗಳಲ್ಲಿಯೂ ಪೂಜೆ ನಡೆಯಲಿದೆ. ಮಹಿಳೆಯರು ಸೇರಿ, ದೇವಸ್ಥಾನಕ್ಕೆ ಆಗಮಿಸುವ ಹೆಣ್ಣು ಮಕ್ಕಳಿಗೆ ಬಳೆ, ಕುಂಕುಮ ನೀಡಿ ಲಕ್ಷ್ಮೀದೇವಿ ಅನುಗ್ರಹಿಸಲಿ ಎಂದು ಪ್ರಾರ್ಥಿಸುವುದು ವಿಶೇಷ. ಲಕ್ಷ್ಮೀ ದೇವಿಯ ಪ್ರತಿಷ್ಠಾಪನೆ
ವರಮಹಾಲಕ್ಷ್ಮೀ ಹಬ್ಬ ಮಹಿಳೆಯರ ಹಬ್ಬ. ಹಬ್ಬಕ್ಕಾಗಿಯೇ ಹೊಸ ದಿರಿಸು ಖರೀದಿಸಿ ತೊಡುವುದು ವಾಡಿಕೆ. ಅಲ್ಲದೆ ಮನೆಗಳಲ್ಲಿ ಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದು, ಸುತ್ತಮುತ್ತಲಿನ ಮನೆಗಳ ಹೆಣ್ಮಕ್ಕಳನ್ನು ಕರೆದು ಬಾಗಿನ ನೀಡುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದಕ್ಕಾಗಿಯೇ ಹೆಂಗಳೆಯರು ಬಿರುಸಿನ ಖರೀದಿಯಲ್ಲಿ ತೊಡಗಿದ್ದಾರೆ.