Advertisement

ಪ್ರವಾಹದಿಂದ ಆಯುರ್ವೇದ ಉದ್ಯಮಕ್ಕೆ ಹೊಡೆತ

06:00 AM Aug 29, 2018 | |

ಹುಬ್ಬಳ್ಳಿ: ಮಹಾಮಳೆಯಿಂದಾಗಿ ಕೇರಳದ ಜನಜೀವನ ಅಸ್ತವ್ಯಸ್ತಗೊಂಡಂತೆ ಸಸ್ಯಸಂಪತ್ತು ಕೂಡ ಹಾಳಾಗಿದೆ. ಆಯುರ್ವೇದ ಔಷಧಗಳ
ತಯಾರಿಕೆಗೆ ಖ್ಯಾತಿ ಪಡೆದಿರುವ ಕೇರಳದಲ್ಲಿ ಆಯುರ್ವೇದ ವನಗಳು ಕೊಚ್ಚಿ ಹೋಗಿದ್ದು, ಇದು ಆಯುರ್ವೇದ ಉದ್ಯಮಕ್ಕೆ ಧಕ್ಕೆ ಉಂಟು
ಮಾಡಿದೆ.

Advertisement

ಉತ್ತರ ಭಾರತದಲ್ಲಿ ಹಿಮಾಲಯ ಆಯುರ್ವೇದ ಸಸ್ಯವೈವಿಧ್ಯ ಸಿಗುವಂತೆ ದಕ್ಷಿಣ ಭಾರತದಲ್ಲಿ ಕೇರಳ ಆಯುರ್ವೇದ ಸಸ್ಯಗಳ ಕಣಜ. ದೇವರನಾಡು ಕೇರಳದಲ್ಲಿ ಸಸ್ಯಸಿರಿ ಮಳೆ ಹಾಗೂ ಭೂ ಕುಸಿತದಿಂದ ಹಾಳಾಗಿದೆ. ಇದರಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಮೇಲೆ ಅವಲಂಬನೆ ಹೆಚ್ಚಾಗಲಿದೆ. ಕೆಲವು ಗಿಡಗಳು ಒಂದು ವರ್ಷದಲ್ಲಿ ಬೆಳೆದು ಫ‌ಲ ನೀಡಿದರೆ, ಇನ್ನು ಕೆಲವು ಹತ್ತಾರು ವರ್ಷ ಮರಗಳಾಗಿ ಬೆಳೆದ ನಂತರ ಆಯುರ್ವೇದ ಔಷಧಗಳಿಗೆ ಬಳಕೆಯಾಗುತ್ತವೆ. ಆಯುರ್ವೇದ ವನಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿಯೇ ಮಳೆಯಿಂದ ಹಾನಿ ಪ್ರಮಾಣ
ಹೆಚ್ಚಾಗಿರುವುದರಿಂದ ಆತಂಕ ಹೆಚ್ಚಾಗಿದೆ. ಆಯುರ್ವೇದಕ್ಕೆ ಆದ್ಯತೆ ನೀಡಿದ ಕೇರಳ ಸರ್ಕಾರ ಆಯುರ್ವೇದವನ್ನು ಪ್ರವಾಸೋದ್ಯಮದ ಭಾಗವಾಗಿಸಿದೆ. ಆಯುರ್ವೇದ ಉತ್ತೇಜನಕ್ಕೆ ಆದ್ಯತೆ ನೀಡುತ್ತಿದೆ. ಮನೆ ಮನೆಯಲ್ಲೂ ಆಯುರ್ವೇದವಿದೆ. ಪಂಚಕರ್ಮ ಚಿಕಿತ್ಸೆಗಾಗಿಯೇ ಕೇರಳಕ್ಕೆ
ಹೋಗುವವರಿದ್ದಾರೆ. ಮತ್ತೆ ಆಯುರ್ವೇದ ಪ್ರವಾಸೋದ್ಯಮ ಚೇತರಿಸಿಕೊಳ್ಳಲು ಹಲವು ತಿಂಗಳುಗಳೇ ಬೇಕು.

ಕೇರಳದಲ್ಲಿ ಹಲವಾರು ಆಯುರ್ವೇದ  ಕಂಪನಿಗಳಿವೆ. ಅವುಗಳಲ್ಲಿ ಕೇರಳ ಆಯುರ್ವೇದ ಫಾರ್ಮಾ ಲಿಮಿಟೆಡ್‌, ಕೊಟ್ಟಾಯಂ ಆಯುರ್ವೇದ, ನಾಗಾರ್ಜುನ ಹರ್ಬಲ್ಸ್‌, ಮಲಬಾರ್‌ ಆಯುರ್ವೇದ, ಆರ್ಯವೈದ್ಯ ನಿಲಯಂ (ಎವಿಎಂ) ಪ್ರಮುಖ ಕಂಪನಿಗಳು. ಕೇರಳದ ಆಯುರ್ವೇದ ಉತ್ಪನ್ನಗಳಿಗೆ ಬ್ರ್ಯಾಂಡ್‌ ವ್ಯಾಲ್ಯು ಇದೆ. ಕೇರಳ ಆಯುರ್ವೇದ ಎಂದೇ ಹಲವು ಆಯುರ್ವೇದ ಔಷಧಗಳ ಮಾರಾಟ ನಡೆಯುತ್ತದೆ. ರಾಜ್ಯದಲ್ಲಿ ಸಹಸ್ರಾರು ಜನರು ಕೇರಳ ಕಂಪನಿಗಳ ಆಯುರ್ವೇದ ಉತ್ಪನ್ನಗಳನ್ನು ಬಳಕೆ ಮಾಡುತ್ತಾರೆ. 

ಪಶ್ಚಿಮ ಘಟ್ಟದ ಮೇಲೆ ಭಾರ: ಕೇರಳದ ನೆರೆ ಹಾವಳಿಯಿಂದಾಗಿ ಆಯುರ್ವೇದ ಗಿಡ-ಮರಗಳು ಕೊಚ್ಚಿ ಹೋಗಿದ್ದರಿಂದ ಮುಂದೆ ಆಯುರ್ವೇದ ಉತ್ಪನ್ನಗಳ ದರ ಹೆಚ್ಚಳ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಲ್ಲದೇ ಔಷಧ ತಯಾರಿಕೆಯಲ್ಲಿ ಬೇಕಾದ ಎಲ್ಲ ದ್ರವ್ಯಗಳು ಸಿಗದಿದ್ದರೆ ಕಲಬೆರಕೆ ಕೂಡ ಮಾಡಬಹುದು ಇಲ್ಲವೇ 10 ದ್ರವ್ಯಗಳ ಔಷಧಿಗಳಲ್ಲಿ 7-8 ದ್ರವ್ಯಗಳನ್ನು ಮಾತ್ರ ಬಳಕೆ ಮಾಡಬಹುದು. ಮಹತ್ವದ ದ್ರವ್ಯಗಳನ್ನು ಔಷಧಿ
ಒಳಗೊಳ್ಳದಿದ್ದರೆ ಔಷಧಗಳ ಗುಣಮಟ್ಟ ಸಹಜವಾಗಿಯೇ ಕಡಿಮೆಯಾಗುತ್ತದೆ ಎನ್ನುತ್ತಾರೆ ಆಯುರ್ವೇದ ತಜ್ಞರು.

ದರ ಹೆಚ್ಚಳ ಸಾಧ್ಯತೆ
ಕೇರಳದ ಆಯುರ್ವೇದ ಸಸ್ಯಸಂಕುಲ ಸಹಜ ಸ್ಥಿತಿಗೆ ಬರಲು ಕನಿಷ್ಠ 20 ವರ್ಷಗಳಾದರೂ ಬೇಕು ಎಂದು ಆಯುರ್ವೇದ ತಜ್ಞರು ಅಂದಾಜಿಸಿದ್ದಾರೆ. ಇದರಿಂದ ಪಶ್ಚಿಮ ಘಟ್ಟ ಸೇರಿ ಉತ್ತರ ಭಾರತದ ಆಯುರ್ವೇದ ವನಗಳ ಮೇಲೆ ಅವಲಂಬನೆ ಹೆಚ್ಚಾಗಲಿದೆ. ಕೇರಳ ಪ್ರವಾಹದಿಂದಾಗಿ ಹಲವು ಆಯುರ್ವೇದ ಔಷಧಗಳ ದರದಲ್ಲಿ ಹೆಚ್ಚಳವಾದರೂ ಅಚ್ಚರಿಯಿಲ್ಲ ಎಂದು ಆಯುರ್ವೇದ ತಜ್ಞರಾದ ಡಾ| ಎ.ಎಸ್‌.ಪ್ರಶಾಂತ, ಡಾ| ಜೆ.ಆರ್‌.ಜೋಶಿ,
ಡಾ| ಬಿ.ಬಿ.ಜೋಶಿ ಅಭಿಪ್ರಾಯಪಡುತ್ತಾರೆ. 

Advertisement

● ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next