ಬೆಳಗಾವಿ/ಚಿಕ್ಕೋಡಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಹಾಗೂ ಕೊಂಕಣ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿ ತೀರದ ಜನರಲ್ಲಿ ಆತಂಕ ಶುರುವಾಗಿದ್ದು, ಅನೇಕ ಸೇತುವೆಗಳು ಜಲಾವೃತಗೊಂಡಿವೆ.
ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವು ಹೆಚ್ಚಳವಾಗಿ ಚಿಕ್ಕೋಡಿ ಉಪವಿಭಾಗದ ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ. ಚಿಕ್ಕೋಡಿ ಉಪವಿಭಾಗದ ಯಡೂರ-ಕಲ್ಲೋಳ, ಜತ್ರಾಟ-ಭೀವಶಿ, ಅಕ್ಕೋಳ-ಸಿದ್ದನಾಳ, ಭೋಜವಾಡಿ-ಕುನ್ನೂರ, ಕಾರದಗಾ-ಭೋಜ, ಹುನ್ನರಗಿ- ಭೋಜವಾಡಿ ನಡುವಿನ ಸಂಪರ್ಕ ಸೇತುವೆಗಳು ಮುಳುಗಿದ್ದು, ಮುಂಜಾಗ್ರತಾ ಕ್ರಮವಾಗಿ ಸೇತುವೆಗಳ ಎರಡು ಬದಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್ ನಿಂದ 1.2 ಲಕ್ಷ ಕ್ಯೂಸೆಕ್ ಹಾಗೂ ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ 29 ಸಾವಿರ ಕ್ಯೂಸೆಕ್ ಒಟ್ಟು 1.31 ಲಕ್ಷ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರಲಾರಂಭಿಸಿದೆ.
ಚಿಕ್ಕೋಡಿ ಉಪವಿಭಾಗದ ಕೆಳಹಂತದ ಆರು ಸೇತುವೆಗಳು ಜಲಾವೃತ
ಚಿಕ್ಕೋಡಿ ಉಪವಿಭಾಗದ ನದಿ ತೀರದ ಗ್ರಾಮಸ್ಥರಲ್ಲಿ ಪ್ರವಾಹದ ಆತಂಕ ಎದುರಾಗಿದೆ. ಪ್ರಯಾಣಿಕರು ಪರ್ಯಾಯ ರಸ್ತೆ ಮಾರ್ಗದಿಂದ ಸಂಚಾರ ನಡೆಸುತ್ತಿದ್ದಾರೆ. ಬುಧವಾರ ರಾತ್ರಿಯಿಂದ 7 ಅಡಿಗೂ ಹೆಚ್ಚು ನೀರು ಕೃಷ್ಣಾ ನದಿಗೆ ಹರಿದು ಬಂದಿದೆ.
ನದಿ ನೀರಿನ ಮಟ್ಟ ಹೆಚ್ಚಾಗುತ್ತಿರುವುದರಿಂದ ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿಗಳು ಉಕ್ಕಿ ಹರಿಯುತ್ತಿದೆ. ನೀರಿನ ಮಟ್ಟ ಹೆಚ್ಚಳವಾಗುತ್ತಿರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಚಿಕ್ಕೋಡಿ ಉಪ ವಿಭಾಗದ ಅನೇಕ ಸೇತುವೆಗಳು ಮುಳುಗಡೆ ಆಗಿವೆ. ನಿಪ್ಪಾಣಿಯ ಸೇತುವೆ ಜಲಾವೃತ ಆಗಿದ್ದರಿಂದ ಸಂಚಾರ ಬಂದ್ ಮಾಡಲಾಗಿದೆ.
ನಿಪ್ಪಾಣಿ ತಾಲೂಕಿನ ಸದಲಗಾ-ಬೋರಗಾಂವ ಜಲಾವೃತಗೊಂಡ ರಸ್ತೆಯಲ್ಲಿ ಕೊಚ್ಚಿ ಹೊಗುತಿದ್ದ ಬೈಕ್ ಸವಾರರನ್ನು ಸ್ಥಳೀಯರಿಂದ ರಕ್ಷಣೆ ಮಾಡಲಾಗುತ್ತಿದೆ.
ನಿಪ್ಪಾಣಿ ತಾಲೂಕಿನ ಜತ್ರಾಟ ಗ್ರಾಮ ಬಳಿ ವೇದಗಂಗಾ ನದಿ ನೀರು ಹೊಲಗದ್ದೆಗಳಿಗೆ ನುಗ್ಗಿದ ಪರಿಣಾಮ ನೂರಾರು ಎಕರೆ ಬೆಳೆ ಹಾನಿಯಾಗಿದೆ.
ಮುಜಾಗ್ರತಾ ಕ್ರಮವಾಗಿ ಸೇತುವೆಗಳ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿದೆ. ಕೃಷ್ಣಾ ನದಿಗೆ ನೀರು ಹೆಚ್ಚಳ ಹಿನ್ನಲೆ ರಾತೋರಾತ್ರಿ ನದಿ ತೀರಕ್ಕೆ ತಾಲೂಕಾಡಳಿತ ಭೇಟಿ ನೀಡಿದೆ. ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ ಹಾಗೂ ತಾಲೂಕಾ ಅಧಿಕಾರಿಗಳು ಕೃಷ್ಣಾ ನದಿ ತೀರದ ಯಡೂರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರವಾಹ ಮುಂಜಾಗ್ರತ ಕ್ರಮವಾಗಿ ಆಗಮಿಸಿದ ಎನ್.ಡಿಆರ್.ಎಫ್ ತಂಡದ ಜೊತೆ ಚರ್ಚೆನಡೆಸಿ, ಪ್ರವಾಹ ಮುಂಜಾಗೃತ ಕ್ರಮಕ್ಕೆ ರೆಡಿಯಾಗುವಂತೆ ಎಸಿ ಸೂಚನೆ ನೀಡಿದ್ದಾರೆ.