ಬಾಗಲಕೋಟೆ: ಕೇಂದ್ರ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಇರಬಹುದು. ಅದಕ್ಕಾಗಿಯೇ ಪ್ರವಾಹ ಪರಿಹಾರ ನೀಡುವಲ್ಲಿ ವಿಳಂಬ ಆಗಿರಬಹುದು. ಇದರಿಂದ ನನಗೂ ಸ್ವಲ್ಪ ಆತಂಕವಾಗಿದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟಿದ್ದಾರೆ.
ಜಮಖಂಡಿ ತಾಲೂಕಿನ ಮುತ್ತೂರಿನಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮಾತ್ರವಲ್ಲ ಗುಜರಾತ್, ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ವೀಕ್ಷಣೆ ಮಾಡಿದೆ.
ಆದರೆ, ಎಲ್ಲೂ ಪರಿಹಾರ ಘೋಷಣೆ ಮಾಡಿಲ್ಲ. ಇದಕ್ಕೆ ಆರ್ಥಿಕ ಕೊರತೆ ಇರಬಹುದು, ಇಲ್ಲವೇ ಬೇರೆ ಏನಾದರೂ ಸಮಸ್ಯೆ ಇದೆಯೇ ಎಂಬುದು ವಿಚಾರ ಮಾಡದೇ ತಿಳಿಯುವುದಿಲ್ಲ. ಆದರೆ, ಕರ್ನಾಟಕದ ಜನತೆ ಕೇಂದ್ರದ ನೆರವಿನ ನಿರೀಕ್ಷೆಯಲ್ಲಿದ್ದಾರೆ ಎಂಬುದನ್ನು ಪತ್ರದ ಮೂಲಕ ಪ್ರಧಾನಿಯವರ ಗಮನಕ್ಕೆ ತಂದಿದ್ದೇನೆ ಎಂದರು.
ಪ್ರಧಾನಿ ಮೋದಿ ದೇಶದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಹಲವಾರು ಒಳ್ಳೆಯ ಯೋಜನೆ ನೀಡಿದ್ದಾರೆ. ದೇಶದಲ್ಲಿ ಹಲವು ಒಳ್ಳೆಯ ಹಾಗೂ ಉಪಯುಕ್ತ ಕೆಲಸ ಆಗಿವೆ. ಈಗ ಪ್ರವಾಹ ಸಂತ್ರಸ್ತರಿಗೂ ಸ್ಪಂದಿಸಬೇಕು ಎಂಬುದು ರಾಜ್ಯದ ಜನತೆಯ ನಿರೀಕ್ಷೆಯಾಗಿದೆ.
ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಕಟ್ಟಿ ಹಾಕುವ ಕೆಲಸ ನಡೆದಿದೆ ಎಂದು ನನಗೆ ಅನಿಸಿಲ್ಲ. ಯಡಿಯೂರಪ್ಪ ಮತ್ತು ಸಂಘ-ಪರಿವಾರದ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ಇದನ್ನು ಪರಿವಾರದವರೇ ಹೇಳಿಕೊಂಡಿದ್ದಾರೆ. ಹೀಗಾಗಿ, ಯಾವುದೇ ತೊಂದರೆ ಆಗಿಲ್ಲ ಎಂದರು.