ವೆಲ್ಲಿಂಗ್ಟನ್: ಗೇಬ್ರಿಯಲ್ ಚಂಡಮಾರುತಕ್ಕೆ ತತ್ತರಿಸಿ ರಾಷ್ಟೀಯ ತುರ್ತು ಪರಿಸ್ಥಿತಿಯಲ್ಲಿರುವ ನ್ಯೂಜಿಲೆಂಡ್ ನಲ್ಲಿ ಬುಧವಾರ ಭೂಕಂಪನ ಸಂಭವಿಸಿದೆ.
ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರದ ಪ್ರಕಾರ, ರಿಕ್ಟರ್ ಮಾಪಕ 6.1 ತೀವ್ರತೆಯ ಪ್ರಮಾಣ ದಾಖಲಾಗಿದೆ. ವೆಲ್ಲಿಂಗ್ಟನ್ ಬಳಿಯ ಲೋವರ್ ಹಟ್‌ನ ವಾಯುವ್ಯಕ್ಕೆ 78 ಕಿಮೀ ದೂರದಲ್ಲಿ ಭೂಕಂಪ ಸಂಭವಿಸಿದೆ. 48 ಕಿಮೀ (30 ಮೈಲಿ) ಆಳದಲ್ಲಿ ಕಂಪನದ ಅನುಭವವಾಗಿದೆ ಎಂದು ಹೇಳಿದೆ.
ಸದ್ಯ ಭೂಕಂಪನದಿಂದ ನಷ್ಟ ಉಂಟಾದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಗೇಬ್ರಿಯಲ್ ಚಂಡಮಾರುತದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಲಕ್ಷಾಂತರ ಮನೆಗಳಿಗೆ ವಿದ್ಯುತ್ ಪೊರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಭಾರೀ ಮಳೆಯಿಂದ ಅಲ್ಲಲ್ಲಿ ಭೂಕುಸಿತ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಚಂಡಮಾರುತದ ನಡುವೆಯೇ ಭೂಕಂಪನ ಉಂಟಾಗಿರುವುದರಿಂದ ಜನರು ಭೀತಿಗೆ ಒಳಗಾಗಿದ್ದಾರೆ.