ಬೆಂಗಳೂರು: ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ರಾಜಧಾನಿ ಬೆಂಗಳೂರಿಗೆ ಭಾರಿ ಸಂಕಟ ಎದುರಾಗುತ್ತಿದ್ದು, ಮಂಡ್ಯದ ಟಿಕೆ ಹಳ್ಳಿಯ ನೀರಿನ ಘಟಕ ಮುಳುಗಿ ಹೋಗಿದೆ. ಇದರಿಂದ ಬೆಂಗಳೂರಿಗೆ ನೀರು ಪೂರೈಕೆ ವ್ಯತ್ಯಯವಾಗುವ ಸಾಧ್ಯತೆಯಿದೆ.
ಅರ್ಧ ಬೆಂಗಳೂರಿಗೂ ಹೆಚ್ಚು ಭಾಗ ನೀರು ಪೂರೈಕೆಗೆ ಈ ಘಟಕವನ್ನು ಅವಲಂಭಿಸಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಮಧ್ಯಾಹ್ನ ಮಂಡ್ಯಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಸುಮಾರು ಎರಡು ಘಟಕಗಳು ನೀರಿನಲ್ಲಿ ಮುಳುಗಿ ಹೋಗಿದೆ. ಹೀಗಾಗಿ ಯಂತ್ರೋಪಕರಣಗಳು ಕಾರ್ಯಾಚರಣೆ ನಿಲ್ಲಿಸಿದೆ ಎಂದು ಬೆಂಗಳೂರು ಜಲ ಮಂಡಳಿ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ:ನೀರು ಹರಿಯುವ ಸ್ಥಳವನ್ನು ಯಾರೂ ಬಂದ್ ಮಾಡಬೇಡಿ: ಸರ್ಕಾರ, ಸಾರ್ವಜನಿಕರಿಗೆ ಮಾಧುಸ್ವಾಮಿ ಮನವಿ
ಭಾರಿ ಪ್ರಮಾಣದಲ್ಲಿ ಜನರಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಖುದ್ದು ಬೊಮ್ಮಾಯಿ ಅವರೇ ಪರಿಶೀಲನೆಗೆ ತೆರಳಿದ್ದಾರೆ.
ಈ ಸಂಬಂಧ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಯಂಕಾಲದ ವೇಳೆಗೆ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.