ಜಮ್ಮು: ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಸುರಿಯುತ್ತಿರುವ ಅಗಾಧ ಮಳೆ ಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸತತ ಮಳೆಯಿಂದಾಗಿ, ದೋಡಾ, ಹಾಗೂ ರಾಮ್‌ಬನ್ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಝೇಲಂ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಚೇನಾಬ್ ನದಿ ಮತ್ತು ಅದರ ಉಪ ನದಿಗಳ ಸಮೀಪದ ಪ್ರದೇಶಗಳಲ್ಲೂ ರೆಡ್ ಅಲರ್ಟ್ ಘೋಷಿಸ ಲಾಗಿದೆ.
ರಾಮ್‌ಬನ್ ಜಿಲ್ಲೆಯಲ್ಲಿ ಮನೆ ಯೊಂದು ಕುಸಿದಿದೆ ಯಾದರೂ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ರೇಸಿ ಜಿಲ್ಲೆಯಲ್ಲಿ ಆ್ಯನ್ಸ್ ನದಿಯ ಪ್ರವಾಹದಿಂದ ಹಲವಾರು ಜನರು ಆಸರೆ ಕಳೆದುಕೊಂಡಿದ್ದಾರೆ. ಇವರಲ್ಲಿ ಹಲವರನ್ನು ಸ್ಥಳೀಯ ಪೊಲೀಸರು ರಕ್ಷಿಸಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಉಂಟಾಗುತ್ತಿರು ವುದರಿಂದ, ಬೆಟ್ಟ ಗುಡ್ಡಗಳ ಪ್ರದೇಶವಾದ ದೋಡಾ ಜಿಲ್ಲಾಡಳಿತವು, ನಾಗರಿಕರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.
ಹೆದ್ದಾರಿಗೆ ಹಾನಿ: ಉಧಮ್‌ಪುರ ಜಿಲ್ಲೆಯ ತೋಲ್ಡಿ ನಲ್ಲಾ ಎಂಬಲ್ಲಿ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ 150 ಅಡಿಯಷ್ಟು ರಸ್ತೆಯು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಇದೇ ಹೆದ್ದಾರಿಯಲ್ಲಿ ನಿರ್ಮಿಸಲಾಗುತ್ತಿದ್ದ ಪುಟ್ಟ ಸೇತುವೆಯೊಂದು ಕೊಚ್ಚಿಕೊಂಡು ಹೋಗಿದೆ.