Advertisement
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರವೇ ರಾಜ್ಯದ ಏಳು ಜಿಲ್ಲೆಗಳಲ್ಲಿ ಏಳು ದಿನಗಳಲ್ಲಿ 516 ಮಿ.ಮೀ.ಮಳೆ ಬಿದ್ದಿದೆ. ಇದರ ಜತೆಗೆ ಮಹಾರಾಷ್ಟ್ರದಿಂದಲೂ ಹತ್ತಾರು ಟಿಎಂಸಿ ನೀರು ಏಕಕಾಲದಲ್ಲಿ ರಾಜ್ಯಕ್ಕೆ ಹರಿದಿದೆ. ಪರಿಣಾಮ ಬರದ ನಾಡು ಬಹುತೇಕ ಜಲಾವೃತಗೊಂಡಿದೆ. ಆದರೆ, ಈಗಲೂ ಹಲವಾರು ಕೆರೆ-ಕುಂಟೆಗಳು, ಕೊಳವೆಬಾವಿಗಳು ಬರಿದಾಗಿವೆ. ಈ ಹಿನ್ನೆಲೆ ಯಲ್ಲಿ ಒಂದೆಡೆ ನೆರೆ ಪರಿಹಾರ ಕ್ರಮಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದರೆ, ಇಷ್ಟೇ ತೀವ್ರ ಗತಿಯಲ್ಲಿ ನೀರನ್ನು ಹಿಡಿದಿಡುವ ಕಾರ್ಯವೂ ಏಕಕಾಲದಲ್ಲಿ ಆಗಬೇಕಿತ್ತು. ಇದು ಆಗಲೇ ಇಲ್ಲ ಎಂಬ ಬೇಸರದ ಮಾತುಗಳು ತಜ್ಞರಿಂದ ಕೇಳಿ ಬರುತ್ತಿವೆ.
Related Articles
Advertisement
ಕಳೆದ ಹತ್ತು ದಿನಗಳಲ್ಲಿ ರಾಜ್ಯದಲ್ಲಿ ಸರಿ ಸುಮಾರು ಸಾವಿರ ಟಿಎಂಸಿ ನೀರು ಹರಿದಿದೆ. ಇನ್ನೊಂದೆಡೆ, ನಮ್ಮಲ್ಲಿ 35 ಸಾವಿರಕ್ಕೂ ಅಧಿಕ ಕೆರೆಗಳಿವೆ. ಅಬ್ಬಬ್ಟಾ ಎಂದರೆ, ಇವುಗಳನ್ನು ತುಂಬಿಸಲು 150 ಟಿಎಂಸಿ ನೀರು ಬೇಕಾಗುತ್ತದೆ. ಜಲಾಶಯಗಳಿಗೆ 400 ಟಿಎಂಸಿ ಹೋಗುತ್ತದೆ ಎಂದರೂ ಉಳಿದ ಸಾಕಷ್ಟು ನೀರನ್ನು ಹಿಡಿದಿಡಬಹುದಿತ್ತು. ಬಹುಶಃ ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಕೆಲಸ ಆಗುತ್ತಿದೆ ಎಂದು ಅವರು ಹೇಳುತ್ತಾರೆ.
ಇದೊಂದು ಒಳ್ಳೆಯ ಆಲೋಚನೆ. ವ್ಯವಸ್ಥಿತವಾಗಿ ಯೋಜನೆ ರೂಪಿಸಿದರೆ, ಖಂಡಿತವಾಗಿಯೂ ಬೇಸಿಗೆ ನೀಗಿಸುವ ಮಟ್ಟಿಗಾದರೂ ನೀರು ಸಂಗ್ರಹಿಸಬಹುದು. 30ರಿಂದ 31 ಸಾವಿರ ಸಣ್ಣ ಕೆರೆಗಳು (40 ಹೆಕ್ಟೇರ್ ಒಳಗಿರುವ) ಮತ್ತು 3,600 ಕೆರೆಗಳು (40ರಿಂದ 2 ಸಾವಿರ ಹೆಕ್ಟೇರ್) ರಾಜ್ಯದಲ್ಲಿವೆ. ಇವುಗಳಲ್ಲಿ ನೂರಕ್ಕೂ ಹೆಚ್ಚು ಟಿಎಂಸಿ ನೀರನ್ನು ಸಂಗ್ರಹಿಸಿಡಬಹುದು. ಬರಿದಾದ ಬಾವಿಗಳು, ಕೊಳವೆಬಾವಿಗಳ ಮರುಪೂರಣ, ಜಮೀನುಗಳಲ್ಲಿ ಸಾಂಪ್ರದಾಯಿಕ ನೀರಾವರಿ ವ್ಯವಸ್ಥೆ, ಗಟ್ಟಿಭೂಮಿ ಇರುವ ಕಡೆಗಳಲ್ಲಿ ಕೃತಕವಾಗಿ ಅಂತರ್ಜಲ ಮರುಪೂರಣ ಮತ್ತಿತರ ಕ್ರಮಗಳಿಂದ ನೀರನ್ನು ಹಿಡಿದಿಡಬಹುದು. ಆದರೆ, ಇದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಇದಕ್ಕಾಗಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದು ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಅವಕಾಶಗಳು ಕಡಿಮೆ: ಕಡಿಮೆ ವಿಸ್ತೀರ್ಣವುಳ್ಳ ಪ್ರದೇಶದಲ್ಲಿ ಅತ್ಯಧಿಕ ಮಟ್ಟದಲ್ಲಿ ನೀರು ಏಕಕಾಲದಲ್ಲಿ ನುಗ್ಗಿದಾಗ, ಸಂಗ್ರಹಿಸುವ ಸಾಧ್ಯತೆಗಳು ವಿರಳ. ಅದರಲ್ಲೂ ಕರ್ನಾಟಕದಂತಹ ಭೌಗೋಳಿಕ ಪ್ರದೇಶದಲ್ಲಿ ಭೂಮಿಯ ಒಳಗೆ ನೀರು ಇಂಗುವಿಕೆ ಪ್ರಮಾಣ ಇನ್ನೂ ಕಡಿಮೆ ಇರುತ್ತದೆ. ದಿನಕ್ಕೆ 50ರಿಂದ 60 ಮಿ.ಮೀ.ನಷ್ಟು ನೀರು ಮಾತ್ರ ಭೂಮಿಯೊಳಗೆ ಇಳಿಯುತ್ತದೆ ಎಂದು “ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಎಕಾಲಜಿ ಆ್ಯಂಡ್ ದಿ ಎನ್ವಿರಾನ್‌ಮೆಂಟ್’ ಪ್ರೊಫೆಸರ್ ಹಾಗೂ “ಸೆಂಟರ್ ಫಾರ್ ಎನ್ವಿರಾನ್‌ಮೆಂಟಲ್ ಆ್ಯಂಡ್ ಡೆವಲಪ್‌ಮೆಂಟ್’ ಫೆಲೊ ಡಾ.ಶ್ರೀನಿವಾಸ ಬಡಿಗೇರ ಅಭಿಪ್ರಾಯಪಡುತ್ತಾರೆ.
* ವಿಜಯಕುಮಾರ್ ಚಂದರಗಿ