ಭವಿಷ್ಯದಲ್ಲಿ ಜಲ ಸಂಕಷ್ಟ ಎದುರಿಸಲಿರುವ ವಿಶ್ವದ ಪ್ರಮುಖ ನೂರು ನಗರಗಳ ಪಟ್ಟಿಯನ್ನು ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್ (ಡಬ್ಲ್ಯೂ ಡಬ್ಲ್ಯೂ ಎಫ್) ಬಿಡುಗಡೆ ಮಾಡಿದೆ. ಈ ಪೈಕಿ 30 ಭಾರತದಲ್ಲೇ ಇದ್ದು, ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಸೇರಿದಂತೆ ರಾಜ್ಯದ ಎರಡು ಮಹಾನಗರಗಳು ಈ ಅಪಾಯದ ಅಂಚಿನಲ್ಲಿರುವುದು ಆತಂಕಕಾರಿ ಬೆಳವಣಿಗೆ. ಇದು ಎಚ್ಚರಿಕೆ ಗಂಟೆಯಾಗಿದ್ದು, ಇದರಿಂದ ಹೊರಬರಲು ನಮ್ಮ ಮುಂದಿರುವ ಏಕೈಕ ದಾರಿ ನೀರಿನ ಸಂರಕ್ಷಣೆಗೆ ಬಹುವಿಧ ಮಾದರಿಗಳ ಅನುಸರಣೆ ಮತ್ತು ಸ್ವಾವಲಂಬನೆ.
ನೀರು ಒಂದು ಅಮೂಲ್ಯ ಸಂಪತ್ತು ಎನ್ನುವುದು ನಮಗೆ ಯಾವತ್ತೂ ಅನಿಸುವುದೇ ಇಲ್ಲ. ಈ ಅರಿವಿನ ಕೊರತೆಯೇ ಇಂದು “ಜಲ ಸಂಕಷ್ಟ’ಕ್ಕೆ ತಂದು ನಿಲ್ಲಿಸಿದೆ. ಪಟ್ಟಿಯಲ್ಲಿರುವ ಎರಡೂ ನಗರಗಳು ಹೆಚ್ಚು-ಕಡಿಮೆ ಪ್ರತೀ ವರ್ಷ “ದಿಢೀರ್ ನೆರೆ’ಗೆ ತುತ್ತಾಗುತ್ತವೆ. ಅದನ್ನು ಹಿಡಿದಿಡಲು ಇದುವರೆಗೆ ವೈಜ್ಞಾನಿಕ ಮತ್ತು ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿಲ್ಲ. ಕೇವಲ ಕಾಟಾಚಾರಕ್ಕೆ ಅನುಸರಿಸಲಾಗುತ್ತಿದೆ ಎಂಬುದು ಪಟ್ಟಿಯಿಂದ ಬಯಲಾಗಿದೆ.
90ರ ದಶಕದಲ್ಲಿ ಇಂಧನ ಕ್ಷೇತ್ರದಲ್ಲಿ ಇಂತಹದ್ದೇ ಕೊರತೆ ಉಂಟಾಗಿತ್ತು. ಆಗ, ನಾವು ಕಂಡುಕೊಂಡಿದ್ದು ಇದೇ ಸ್ವಾವಲಂಬನೆ ಮಾರ್ಗ. ಎಂದಿಗೂ ನಶಿಸಿಹೋಗದ ಹಾಗೂ ನವೀಕರಿಸಬಹುದಾದ ಸೌರ ವಿದ್ಯುತ್. ಈ ವ್ಯವಸ್ಥೆ ಅಳವಡಿಸಿಕೊಂಡವರಿಗೆ ಆರಂಭಿಕ ದಿನಗಳಲ್ಲಿ ಹಲವು ವಿನಾಯಿತಿಗಳನ್ನು ಸರಕಾರ ನೀಡಿತು. ಜತೆಗೆ ವಿದ್ಯುತ್ ಬಳಕೆ ಆಧಾರದ ಮೇಲೆ ಬಿಲ್ಲಿಂಗ್ ಪದ್ಧತಿಯನ್ನು ಅಳವಡಿಸಿತು. ಪರಿಣಾಮ ಸ್ವಾವ ಲಂಬನೆ ಸಾಧಿಸಲು ಸಾಧ್ಯವಾಯಿತು. ಇದೇ ಮಾದರಿಯಲ್ಲಿ ನೀರಿನ ಬಳಕೆಗೂ ಸ್ಲಾಬ್‌ಗಳನ್ನು ವಿಧಿಸಬೇಕು. ಇದಕ್ಕೂ ಮುನ್ನ ನೀರಿನ ಆಡಿಟ್ ಆಗಬೇಕು.
ನಗರದ ಒಳಗೆ ಬರುವುದು ಮಾತ್ರವಲ್ಲ; ಹೊರಹೋಗುವ ನೀರಿನ ಲೆಕ್ಕವೂ ಈ ಆಡಿಟ್ ಒಳಗೊಂಡಿರಬೇಕು. ಇದರಿಂದ ಯಾವ ನೀರು ಎಷ್ಟು ಪ್ರಮಾಣದಲ್ಲಿ ಹೊರಹೋಗುತ್ತಿದೆ ಎಂಬುದು ಗೊತ್ತಾಗುತ್ತದೆ. ಇದರಿಂದ ಮರುಬಳಕೆ ಮಾಡ ಬಹುದಾದ ನೀರನ್ನು ಪ್ರತ್ಯೇಕಿಸಲು ಅನುಕೂಲ ಆಗುತ್ತದೆ. ಆ ನೀರನ್ನು ಆಟೋಮೊಬೈಲ್‌ನಂತಹ ಕೈಗಾರಿಕೆಗಳು, ಕೃಷಿ, ಹೊಟೇಲ್, ಚಿಕನ್-ಮಟನ್ ಸೆಂಟರ್, ಉದ್ಯಾನಗಳು, ಸಾರ್ವಜನಿಕ ಶೌಚಾಲಯ ಮತ್ತಿತರ ಉದ್ದೇಶಗಳಿಗೆ ಬಳಸಬಹುದು. ಇದರ ಜತೆಗೆ ಪ್ರತೀ ಕ್ಷೇತ್ರಕ್ಕೂ ನೀರಿನ ಬಳಕೆಯ ನಿರ್ದಿಷ್ಟ ಪ್ರಮಾಣ ನಿಗದಿಪಡಿಸಬೇಕು. ಸದ್ಯಕ್ಕೆ ಎಲ್ಲ ಉದ್ದೇಶಗಳಿಗೂ ಈ ಎರಡೂ ನಗರಗಳು ಕಾವೇರಿ ಅಥವಾ ಮಲಪ್ರಭೆಯನ್ನೇ ಅವಲಂಬಿಸಿವೆ. ಇನ್ನು ಪ್ರತೀ ವರ್ಷ ಮಳೆಗಾಲದಲ್ಲಿ ಬೀಳುವ ನೀರನ್ನು ಇಂಗು ಗುಂಡಿಗಳ ಮೂಲಕ ಅಂತರ್ಜಲ ಮರುಪೂರಣ, ಮಳೆನೀರುಗಾಲುವೆ ಜಾಲವನ್ನು ವ್ಯವಸ್ಥಿತವಾಗಿ ರೂಪಿಸಿ, ನೇರವಾಗಿ ಕೆರೆಗಳಿಗೆ ಸಂಪರ್ಕ ಕಲ್ಪಿಸಬೇಕು. ಇದಕ್ಕಾಗಿ ಉಪಗ್ರಹದ ನೆರವು ಪಡೆಯಬೇಕು. ಉಬ್ಬು-ತಗ್ಗುಗಳು ಇರುವ ಪ್ರದೇಶಗಳನ್ನು ಗುರುತಿಸಿ, ಉದ್ಯಾನ ಸೇರಿದಂತೆ ಸಾಧ್ಯವಿರುವ ಕಡೆಗಳಲ್ಲಿ ಸುರಂಗದಲ್ಲಿ ಕೆರೆಗಳನ್ನು ನಿರ್ಮಿಸಬೇಕು. ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡಲು 2 ಮತ್ತು 3ನೇ ಹಂತದ ನಗರಗಳನ್ನು ಅಭಿವೃದ್ಧಿ ಪಡಿಸಬೇಕು. ಹೀಗೆ ವಿವಿಧ ರೀತಿಯ ವಿಧಾನಗಳನ್ನು ಅನುಸರಿಸುವ ಅಗತ್ಯವಿದೆ. ಶಾಲಾ ಹಂತದಲ್ಲಿಯೇ ಮಕ್ಕಳಿಗೆ ನೀರಿನ ಬಗ್ಗೆ ಅರಿವು ಮೂಡಿಸಬೇಕು. (ಇಸ್ರೇಲ್‌ನಲ್ಲಿ ಈ ವ್ಯವಸ್ಥೆ ಇದೆ).
ಮಳೆನೀರನ್ನು ಹಿಡಿದಿಡುವವರಿಗೆ ಆಸ್ತಿ ತೆರಿಗೆಯಲ್ಲಿ ವಿನಾಯಿತಿ ಅಥವಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಧನ ರೂಪದಲ್ಲಿ ನೆರವು ಮತ್ತಿತರ ಕ್ರಮಗಳನ್ನು ಕೈಗೊಳ್ಳಬೇಕು. ಜಲಮಂಡಳಿಗಳಲ್ಲಿ ಸದ್ಯ ಯಾವೊಬ್ಬ ಜಲ ತಜ್ಞರೂ ಇದ್ದಂತಿಲ್ಲ. ಅಲ್ಲಿ ತಜ್ಞರನ್ನು ನೇಮಿಸಬೇಕು. ಈ ತಜ್ಞರ ಮೂಲಕ ಗುತ್ತಿಗೆದಾರರು, ಡೆವಲಪರ್‌ಗಳು ಮನೆಗಳನ್ನು ನಿರ್ಮಿಸುವಾಗ ಮಳೆನೀರು ಸಂಗ್ರಹಕ್ಕೆ ಸಂಬಂಧಿಸಿದಂತೆ ಕೆಲವು ಮಾದರಿಗಳನ್ನು ಮುಂದಿಡಬೇಕು. ಇದು ಸಾಧ್ಯವಾದರೆ, ನೀರಿನ ಸ್ವಾವಲಂಬನೆಗೆ ರಹದಾರಿ ಆಗಲಿದೆ.