Advertisement

ಉತ್ತರದಲ್ಲಿ ತಗ್ಗದ ನೆರೆ ; 8 ಸಾವಿರ ಮಂದಿ ಅತಂತ್ರ, 7 ಸಾವು

12:05 AM Oct 16, 2020 | mahesh |

ಹುಬ್ಬಳ್ಳಿ/ ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಕೃಷ್ಣಾ, ಭೀಮಾ, ಮಲಪ್ರಭಾ, ಕಾಗಿಣಾ, ಡೋಣಿ, ತುಂಗಾ, ಭದ್ರಾ, ಹೇಮಾವತಿ ಸಹಿತ ಪ್ರಮುಖ ನದಿಗಳು ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮತ್ತೆ ಉಕ್ಕಿ ಹರಿಯುತ್ತಿವೆ. ನೂರಾರು ಮನೆಗಳು ಧರೆಗುರುಳಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸೇತುವೆಗಳು ಮುಳುಗಿದ್ದರಿಂದ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಬಳಿ ಕೊಡದಮನೆಯ ಹೊಳೆಗೆ ಕಾರು ಉರುಳಿ ಬಿದ್ದು ನಾಲ್ವರ ಸಹಿತ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.

Advertisement

ಸಿದ್ದಾಪುರ ತಾಲೂಕಿನ ಊಂಚಳ್ಳಿ ಜಲಪಾತ ವೀಕ್ಷಣೆಗೆ ತೆರಳಿದ್ದ ಹುಬ್ಬಳ್ಳಿ ಕೇಶ್ವಾಪುರದ ನೀಶು, ರೋಶನ್‌, ಸುಷ್ಮಾ, ಅಕ್ಷತಾ ಹಿರೇಮಠ ಅವರಿದ್ದ ಕಾರು ಹೆಗ್ಗರಣಿ ಸಮೀಪದ ಕೊಡದಮನೆಯ ಹೊಳೆಗೆ ಬಿದ್ದ ಪರಿಣಾಮ ನಾಲ್ವರೂ ಮೃತಪಟ್ಟಿದ್ದಾರೆ. ಬುಧವಾರ ಸಂಜೆ ಹುಬ್ಬಳ್ಳಿಗೆ ವಾಪಸಾಗುತ್ತಿದ್ದ ವೇಳೆ ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಕಾರು ಹೊಳೆಗೆ ಬಿದ್ದಿದ್ದು, ಗುರುವಾರ ಬೆಳಗ್ಗೆ ಗಮನಕ್ಕೆ ಬಂದಿದೆ. ವಿಜಯಪುರ ಜಿಲ್ಲೆಯಲ್ಲಿ ರೈತನೊಬ್ಬ ಹಳ್ಳದಲ್ಲಿ ಕೊಚ್ಚಿಹೋಗಿದ್ದಾನೆ. ಕಲಬುರಗಿ ಜಿಲ್ಲೆಯಲ್ಲಿ ಬುಧವಾರ ಕೊಚ್ಚಿಹೋಗಿದ್ದ ಯುವಕನ ಶವ ಗುರುವಾರ ಪತ್ತೆಯಾಗಿದೆ. ಕೊಪ್ಪಳದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಮಳೆ ತಗ್ಗಿದ್ದರೂ ಮಹಾರಾಷ್ಟ್ರದ ಮಳೆಗೆ ಹೈರಾಣಾಗಿದೆ. ಉಜಿನಿ ಮತ್ತು ವೀರ್‌ ಜಲಾಶಯದಿಂದ ಭೀಮಾ ನದಿಗೆ 7.50 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ತೀರ ಪ್ರದೇಶದ 148 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬೀದರ್‌-ಬೆಂಗಳೂರು- ಹುಬ್ಬಳ್ಳಿ ನಡುವಿನ ಹೆದ್ದಾರಿಯಲ್ಲಿರುವ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಬಳಿ ಸೇತುವೆ ಸಂಚಾರ ಸ್ಥಗಿತಗೊಳಿಸಲಾಗಿದೆ. ಗುಂಡಗುರ್ತಿ ಬಳಿ ಸೇತುವೆಗೆ ಹಾನಿಯಾಗಿ ಕಲಬುರಗಿಯಿಂದ ಸೇಡಂ, ಹೈದರಾಬಾದ್‌ಗೆ ಹೋಗುವ ರಸ್ತೆ ಸಂಚಾರ ಬಂದ್‌ ಆಗಿದೆ.

8 ಸಾವಿರ ಜನರು ಅತಂತ್ರ
ಕಲಬುರಗಿ ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ಜನ ಅತಂತ್ರರಾಗಿ ದ್ದಾರೆ. ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ. ಜಿಲ್ಲಾದ್ಯಂತ 50 ಕಾಳಜಿ ಕೇಂದ್ರ ತೆರೆಯಲಾಗಿದೆ. ಐತಿಹಾಸಿಕ ಖಾಜಾ ಬಂದೇನವಾಜ್‌ ದರ್ಗಾ ಆವರಣದಲ್ಲಿ 600 ವರ್ಷಗಳ ಹಿಂದೆ ಬಹಮನಿ ಸಂಸ್ಥಾನದ ರಾಜ ಅಲ್ಲಾವುದ್ದೀನ್‌ ಬಹಮನಿ ಕಾಲದಲ್ಲಿ ನಿರ್ಮಿಸಿದ್ದ ಪುರಾತನ ಗೋಡೆ ಕುಸಿದು ಬಿದ್ದಿದೆ.

ತುಂಬಿದ ಕಾರಂಜಾ
ಬೀದರ್‌ನಲ್ಲಿ ಕಾರಂಜಾ ಜಲಾಶಯ 5 ವರ್ಷಗಳ ಬಳಿಕ ಭರ್ತಿ ಯಾಗಿದೆ. ನಾರಾಯಣಪುರ ಜಲಾಶಯದಿಂದ 1.61 ಲಕ್ಷ ಕ್ಯುಸೆಕ್‌ ನೀರನ್ನು ಹೊರ ಹರಿಸಲಾಗುತ್ತಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.

Advertisement

ಬೆಳಗಾವಿಯಲ್ಲಿ ಮತ್ತೆ “ನೆರೆ’
ಬೆಳಗಾವಿಯ ಕೃಷ್ಣಾ, ದೂಧ್‌ಗಂಗಾ, ವೇದ್‌ಗಂಗಾ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಕಲ್ಲೋಳ- ಯಡೂರ, ಮಲಿಕವಾಡ- ದತ್ತವಾಡ ಸೇತುವೆ ಮುಳುಗಡೆಯಾಗಿವೆ.

ಇಂದು ಅಶೋಕ್‌ ಭೇಟಿ
ಕಲಬುರಗಿ, ಯಾದಗಿರಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ಇಂದಿನಿಂದ  ಮಳೆ ಕಡಿಮೆ?
ಉತ್ತರ ಒಳನಾಡು ಮತ್ತು ಕರಾವಳಿ ಯಲ್ಲಿ ಶುಕ್ರವಾರದಿಂದ ಮಳೆ ಬಿಡುವು ನೀಡುವ ಸಾಧ್ಯತೆ ಇದೆ. ಆದರೂ ಕೆಲವು ಜಿಲ್ಲೆಗಳಲ್ಲಿ ಎಲ್ಲೊ ಅಲರ್ಟ್‌ ಮುಂದುವರಿಸಲಾಗಿದೆ. ಅ. 19ಕ್ಕೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಾಧ್ಯತೆ ಇದೆ. ಆದರೆ, ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಇಂದು ಸಿಎಂ ವೀಡಿಯೋ ಕಾನ್ಫರೆನ್ಸ್‌
ಅನಾಹುತ ತಡೆಗಟ್ಟಲು ಹೆಚ್ಚಿನ ನಿಗಾ ವಹಿಸು ವಂತೆ ವಿವಿಧ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಡಿಸಿಗಳಿಗೆ ಸಿಎಂ ಬಿಎಸ್‌ವೈ ಸೂಚನೆ ನೀಡಿದ್ದಾರೆ. ಶುಕ್ರವಾರ ಅವರು ವೀಡಿಯೋ ಕಾನ್ಫರೆನ್ಸ್‌ ನಡೆಸಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮಡಿಕೇರಿ ಸಹಿತ ಪ್ರವಾಹಪೀಡಿತ ಜಿಲ್ಲೆಗಳ ಡಿಸಿಗಳಿಂದ ನಷ್ಟದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.

ದಕ್ಷಿಣ ಕನ್ನಡ ಮಳೆ: ಪರಿಹಾರಕ್ಕೆ ಮನವಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹಾನಿ ಯುಂಟಾಗಿದ್ದು, ಸೂಕ್ತ ಪರಿಹಾರ ಒದಗಿಸು  ವಂತೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಶಾಸಕರು ಸಿಎಂ ಯಡಿಯೂರಪ್ಪ ಅವರಿಗೆ ಗುರುವಾರ ಮನವಿ ಮಾಡಿದರು. ಬಳಿಕ ಮಾತನಾಡಿದ ಸಚಿವ ಕೋಟ, ತತ್‌ಕ್ಷಣಕ್ಕೆ 25 ಕೋಟಿ ರೂ. ತುರ್ತು ಅನುದಾನ ಬಿಡುಗಡೆಗೆ ಸಿಎಂ ಆದೇಶ ನೀಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next