Advertisement

Queen Elizabeth 2 ship-ದುಬೈ ಕಡಲಿನ ಮೇಲೆ ತೇಲಾಡುವ: ಅರಮನೆ ಕ್ವೀನ್‌ ಎಲಿಝಬೆತ್‌-2

02:34 PM Apr 06, 2024 | Team Udayavani |

ದುಬೈಯ ಕಡಲತೀರ ಪೋರ್ಟ್‌ ರಾಶೀದ್‌ನಲ್ಲಿ ತೇಲಾಡುವ ಅರಮನೆಯಂತಿರುವ ಬೃಹತ್‌ ಐಶಾರಾಮಿ ಹಡಗು ಕ್ವೀನ್‌ ಎಲಿಝಬೆತ್‌-2. ವಿಶ್ವದಾದ್ಯಂತ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಹಾಗೂ ವೈಭವ ಪೂರಿತ ತೇಲಾಡುವ ಹೊಟೇಲ್‌ ಕ್ವೀನ್‌ ಎಲಿಝಬೆತ್‌-2 ಹಲವಾರು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.

Advertisement

ಕ್ವೀನ್‌ ಎಲಿಝಬೆತ್‌-2 ಹಡಗಿನ ಹಿನ್ನೆಲೆಯನ್ನು ಅವಲೋಕಿಸುವುದಾದರೆ, 1967ರಲ್ಲಿ ಸ್ಕಾಟ್‌ಲ್ಯಾಂಡ್‌ನ‌ ಜಾನ್‌ಬ್ರೌನ್‌ ಶಿಪ್‌ ಯಾರ್ಡ್‌ನಲ್ಲಿ ನಿರ್ಮಾಣವಾಗಿ ಇಂಗ್ಲೆಂಡ್‌ ಮಹಾರಾಣಿ ಕ್ವೀನ್‌ ಎಲಿಝಬೆತ್‌-2 ರಾಣಿಯ ತನ್ನದೇ ಹೆಸರಿನ ಐಶಾರಾಮಿ ಹಡಗನ್ನು ಉದ್ಘಾಟಿಸಿದ್ದರು. ಸಾಗರದ ಮೇಲೊಂದು ಬೃಹತ್‌ ಹಡಗು ಹಲವು ವಿಶೇಷತೆಗಳಿಂದ ಪ್ರವಾಸಿಗರನ್ನು ಆಕರ್ಷಿಸಿ ತನ್ನ ಯಾನವನ್ನು ಪ್ರಾರಂಭಿಸಿತ್ತು.

1969ರಲ್ಲಿ ಸೌತ್‌ ಹ್ಯಾಂಪ್ಟನ್‌ನಿಂದ ನ್ಯೂಯಾರ್ಕ್‌ಗೆ ಕ್ವೀನ್‌ ಎಲಿಝಬೆತ್‌-2 ರಾಣಿ ಸಹ ಪ್ರಯಾಣ ಮಾಡಿದ್ದರು.
1982ರಲ್ಲಿ ಪಾಲ್ಕ್ಲ್ಯಾಂಡ್‌ ಯುದ್ಧ ಸಂದರ್ಭದಲ್ಲಿ ಸುರಕ್ಷೆಯ ದೃಷ್ಟಿಯಿಂದ ಕೆಲವು ಸಮಯ ಹಡಗಿನ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿತ್ತು. 1987ರಲ್ಲಿ ಕ್ವೀನ್‌ ಎಲಿಝಬೆತ್‌-2ನ ಹಳೆಯ ಸ್ಟೀಮ್‌ ಎಂಜಿನ್‌ಗಳನ್ನು ತೆಗೆದು ಡೀಸೆಲ್‌ ಎಲೆಕ್ಟ್ರಿಕ್‌ ಎಂಜಿನ್‌ ಅಳವಡಿಸಿ ನವೀಕರಿಸಲಾಗಿತ್ತು.

2002ಕ್ಕೆ ಕ್ವೀನ್‌ ಎಲಿಝಬೆತ್‌-2 ತನ್ನ ಯಾನದಲ್ಲಿ ಐದು ಮಿಲಿಯನ್‌ ಮೈಲುಗಳನ್ನು ಪ್ರಯಾಣಿಸಿ ವಿಶ್ವ ದಾಖಲೆಯನ್ನು ಮಾಡಿರುವ ಪ್ರಥಮ ಐಶಾರಾಮಿ ಹಡಗು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Advertisement

2008ರಲ್ಲಿ ಕ್ವೀನ್‌ ಎಲಿಝಬೆತ್‌-2 ತನ್ನ ಪ್ರಯಾಣಿಕರ ಕೊನೆಯ ಪ್ರಯಾಣದ ಅನಂತರ ಡಿ ಕಮಿಷನ್‌x ಎಂದು ಘೋಷಣೆ ಮಾಡಿತ್ತು. ಕೊನೆಯ ಪ್ರಯಾಣ ದುಬೈಗೆ ಪ್ರಯಾಣಿಸುವ ಸಲುವಾಗಿ ಮುಂಗಡ ಕಾಯ್ದಿರಿಸುವ ಟಿಕೆಟ್‌ ಕೇವಲ 20 ನಿಮಿಷದಲ್ಲಿಯೇ ಭರ್ತಿಯಾಗಿ ಇನ್ನೊಂದು ದಾಖಲೆಯನ್ನು ಪಡೆದುಕೊಂಡಿತ್ತು. ರಾಯಲ್‌ ನೇವಿ, ಎಚ್‌.ಎಂ.ಎಸ್‌. ಲಾಂಚೆಸ್ಟರ್‌ ಡ್ನೂಕ್‌ ಕ್ಲಾಸ್‌ ಬೋಟ್‌ಗಳು ಕ್ವೀನ್‌ ಎಲಿಝಬೆತ್‌-2ನ್ನು ಬೆಂಗಾವಲು ಪಡೆಗಳಾಗಿ ಎಸ್ಕಾರ್ಟ್‌ ಮಾಡಿಕೊಂಡು ದುಬೈಯ ಪೋರ್ಟ್‌ ರಾಶೀದ್‌ನಲ್ಲಿ ಗೌರವ ಪೂರ್ವಕವಾಗಿ ಬೀಳ್ಕೊಡಲಾಗಿತ್ತು.

2018ರಲ್ಲಿ ದುಬೈಯ ಪೋರ್ಟ್‌ ರಾಶೀದ್‌ನಲ್ಲಿ ನಿಲುಗಡೆಯಾಗಿದ್ದ ಕ್ವೀನ್‌ ಎಲಿಝಬೆತ್‌-2 ಹಡಗನ್ನು ಅತ್ಯಾಧುನಿಕವಾಗಿ ಹಾಗೂ ಆಕರ್ಷಣೀಯವಾಗಿ ತೇಲಾಡುವ ಐಶಾರಾಮಿ ವಿಲಾಸಿ ಹೊಟೇಲ್‌ನ್ನಾಗಿ ನವೀಕರಿಸಲಾಯಿತು.
ಕಡಲಿನ ಮೇಲೆ ಅರಮನೆಯಂತಿರುವ ಐಷಾರಾಮಿ ಕ್ವೀನ್‌ ಎಲಿಝಬೆತ್‌-2 ಹಡಗು ವಿಶ್ವದಾದ್ಯಂತ ಪ್ರವಾಸಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಒಳಾಂಗಣ ಪ್ರವೇಶಿಸುವಾಗ ಭವ್ಯ ವಾಸ್ತುಶಿಲ್ಪಗಳ ದೃಶ್ಯ ಸೊಬಗಿನ ದರ್ಶನವಾಗುತ್ತದೆ.

ವೀಕ್ಷಿಸಲು ಬರುವ ವೀಕ್ಷಕರು ಮತ್ತು ಹೆರಿಟೆಜ್‌ ಟೂರ್‌ ಪ್ಯಾಕೇಜ್‌ನಲ್ಲಿ ಬರುವ ಪ್ರವಾಸಿಗರು ನಿಗದಿತ ದರದಲ್ಲಿ ಒಳಾಂಗಣ ಪ್ರವೇಶ ಪಡೆದು ಒಂದೆರಡು ಗಂಟೆಯಲ್ಲಿ ಸಂಪೂರ್ಣವಾಗಿ ವೀಕ್ಷಿಸಬಹುದಾಗಿದೆ. ರಾತ್ರಿ ಉಳಿದುಕೊಳ್ಳಲು ಹೆಚ್ಚಿನ ದರ ಪಾವತಿಸಿ ಕೊಠಡಿಯನ್ನು ಪಡೆದುಕೊಳ್ಳಬಹುದಾಗಿದೆ. ರಾತ್ರಿಯ ಭೋಜನ ಮತ್ತು ಬೆಳಗಿನ ಉಪಹಾರ ಉಚಿತವಾಗಿ ದೊರೆಯುತ್ತದೆ.

ಕ್ವೀನ್‌ ಎಲಿಝಬೆತ್‌-2 ಹಡಗಿನಲ್ಲಿ 447 ಐಷಾರಾಮಿ ಕೊಠಡಿಗಳಿದ್ದು, ಕ್ಲಾಸಿಕ್‌, ಸುಪಿರಿಯರ್‌ ಮತ್ತು ಡಿಲಕ್ಸ್‌ ಎಂದು ವರ್ಗೀಕರಿಸಲಾಗಿದೆ. ಡಿಕಮಿಷನ್ಡ್ ಆಗುವ ಮೊದಲು 515 ಮಂದಿ ಆಸೀನರಾಗಲು ವ್ಯವಸ್ಥೆ ಇದ್ದ ಸಿನೆಮಾ ಹಾಲ್‌ ಇವಾಗ ಯಾವುದೇ ಸಭೆ ಸಮಾರಂಭಗಳನ್ನು, ಕಂಪೆನಿ ಮೀಟಿಂಗ್‌, ಕಾನ್ಫರೆನ್ಸ್‌ ನಡೆಸಬಹುದಾಗಿದೆ.‌

ಇನ್ನು ವಿಶೇಷವಾದ ವೈಭವಪೂರಿತ ಕ್ವೀನ್‌ ಹಾಲ್‌ ಸಹ ಇದೆ. ಈ ಹಾಲ್‌ನಲ್ಲಿ ವಿವಾಹ ಸಮಾರಂಭ, ರಾಯಲ್‌ ವೆಡ್ಡಿಂಗ್‌ ಸಹ ನಡೆಯುತ್ತಿರುತ್ತದೆ. ಈ ಕ್ವೀನ್‌ ಹಾಲ್‌ನಲ್ಲಿ ಕೆಲವು ಭಾರತೀಯರ ವಿವಾಹ ಸಹ ನಡೆದಿದೆ. ವಿಶ್ವ ದರ್ಜೆಯ ಭೋಜನ ಹಾಲ್‌ ಮತ್ತು ವೈವಿಧ್ಯಮಯ ಭಕ್ಷ್ಯ ಭೋಜನಗಳು ದೊರೆಯುತ್ತದೆ. ಅತ್ಯಂತ ದುಬಾರಿ ಮದ್ಯಪಾನೀಯಗಳ ಕೌಂಟರ್‌ ಸಹ ಇದೆ.
ಕ್ವೀನ್‌ ಎಲಿಝಬೆತ್‌-2 ಹಡಗಿನ ಸನ್‌ ಡೆಕ್‌ನಲ್ಲಿ ಕ್ಯಾಪ್ಟನ್‌ ಕೊಠಡಿ, ವಿಶಾಲವಾದ ಬಾಲ್ಕನಿ, ಮತ್ತು ಹಡಗಿನ ನೌಕಾ ಅಧಿಕಾರಿಗಳ ಕೊಠಡಿಗಳನ್ನು ವೀಕ್ಷಿಸಬಹುದು.

ಹಡಗಿನ ಅಮೂಲ್ಯ ವಸ್ತುಗಳ ಸಂಗ್ರಹಾಲಯ ವಿಭಾಗ ಆಕರ್ಷಣೀಯವಾಗಿದ್ದು ಮೊದಲು ಪ್ರಯಾಣಿಸುವ ಸಂದರ್ಭದಲ್ಲಿ ಉಪಯೋಗಿಸಿದ್ದ ಕ್ಯಾಪ್ಟನ್‌ರವರ ಯೂನಿಫಾರ್ಮ್ ಸಹ ಪ್ರದರ್ಶನದಲ್ಲಿದೆ. ಹಡಗಿನ ಬೃಹತ್‌ ಎಂಜಿನ್‌ ರೂಮ್‌ ಇನ್ನಿತರ ಹಡಗಿಗೆ ಸಂಬಧಿಸಿದ ಸ್ಟೋರ್‌ ರೂಮ್‌ ಸಹ ವೀಕ್ಷಿಸುವ ಅವಕಾಶವಿದ್ದು. ‌

ಹಲವು ದಾಖಲೆಗಳನ್ನು ನಿರ್ಮಿಸಿಸಿರುವ ದುಬೈ, ಕ್ವೀನ್‌ ಎಲಿಝಬೆತ್‌-2 ನ್ನು ತನ್ನ ವಿಶಾಲ ಕಡಲ ಕಿನಾರೆಯಲ್ಲಿ ಲಂಗರು ಹಾಕಿ ನಿಲ್ಲಿಸಿ ಪ್ರವಾಸಿಗರನ್ನು ಕೈ ಬೀಸಿ ಕರೆಯುವಲ್ಲಿ ಯಶಸ್ವಿಯಾಗಿದೆ.

ಬಿ. ಕೆ. ಗಣೇಶ್‌ ರೈ, ದುಬೈ

Advertisement

Udayavani is now on Telegram. Click here to join our channel and stay updated with the latest news.

Next