Advertisement

“ಮಂಗಳೂರಿನಲ್ಲಿ’ ಸಿದ್ಧವಾಗುತ್ತಿದೆ “ತೇಲುವ ಜೆಟ್ಟಿ’! ದೇಶದಲ್ಲೇ ನಿರೀಕ್ಷಿತ ಯೋಜನೆ

11:44 PM Jun 22, 2024 | Team Udayavani |

ಮಂಗಳೂರು: ಮೀನುಗಾರಿಕೆಗಾಗಿ “ತೇಲುವ ಜೆಟ್ಟಿ’ಯು ದೇಶದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ನಿರ್ಮಿಸಲಾಗುತ್ತಿದೆ.

Advertisement

ಮೀನುಗಾರಿಕೆ ಇಲಾಖೆ ವತಿಯಿಂದ ಮಂಗ ಳೂರಿನ ಮೂರನೇ ಹಂತದ ಮೀನುಗಾರಿಕೆ ಜೆಟ್ಟಿ ಇರುವ ಹೊಗೆ ಬಜಾರ್‌ ಭಾಗದಲ್ಲಿ ಕಾಮಗಾರಿ ಪ್ರಾರಂಭವಾಗಿದ್ದು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ)ವು ಅನುಷ್ಠಾನ ದ ಹೊಣೆ ಹೊತ್ತಿದೆ. ಉಡುಪಿಯ ಮಲ್ಪೆಯಲ್ಲೂ ಇಂಥದ್ದೇ ಜೆಟ್ಟಿ ನಿರ್ಮಿಸುವ ಉದ್ದೇಶವಿದೆ.

ಈಗಾಗಲೇ ಮಂಗಳೂರಿನಲ್ಲಿ ಒಂದು “ಕಾಂಕ್ರೀಟ್‌ ಫಾಂಟೂನ್ಸ್‌’ ನಿರ್ಮಿಸಿ ನಿಲುಗಡೆ (ಆ್ಯಂಕರ್‌) ಮಾಡಲಾಗಿದೆ. ಇನ್ನೆರಡು ಫಾಂಟೂನ್ಸ್‌ ಆಗಬೇಕಿದ್ದು, ಜೆಟ್ಟಿಯು ನೀರಿನ ಮಧ್ಯಭಾಗ ದಲ್ಲಿರುತ್ತದೆ. ಅಲ್ಲಿಂದ ನದಿ ದಡಕ್ಕೆ ಅಗಲದ ರಸ್ತೆ ಸ್ವರೂಪದ ಸಂಪರ್ಕ (ರೋಪ್‌) ಕಲ್ಪಿಸಲಾಗುತ್ತದೆ. ಇದರ ಮೂಲಕ ಜೆಟ್ಟಿಗೆ ಸಣ್ಣ ಗಾತ್ರದ ವಾಹನಗಳ ಸಂಚಾರಕ್ಕೂ ಅವಕಾಶವಾಗಲಿದೆ. ಸಣ್ಣ ದೋಣಿ ಗಳಲ್ಲಿ ತಂದ ಮೀನನ್ನು ಈ ಜೆಟ್ಟಿಯಲ್ಲಿ ಇಳಿಸಿ ಅದನ್ನು ವಾಹನದ ಮೂಲಕ ದಡಕ್ಕೆ ತರಬಹುದು. ರೋಪ್‌ನ ಇಕ್ಕೆಲಗಳಲ್ಲಿ ದೋಣಿ ನಿಲ್ಲಿಸಬಹುದು.

ಯಾಕಾಗಿ?
ಬಂದರಿನಲ್ಲಿ ಪ್ರಸ್ತುತ ಬೋಟುಗಳ ನಿಲುಗ ಡೆಗೆ ಸ್ಥಳವಿಲ್ಲ. ಸಾಂಪ್ರದಾಯಿಕ ನಾಡದೋಣಿಗಳಿಗೆ ಇದರಿಂದ ಹೆಚ್ಚು ಸಮಸ್ಯೆ. ಇದರ ನಿವಾರಣೆಗೆ ತೇಲುವ ಜೆಟ್ಟಿ ನಿರ್ಮಾಣವನ್ನು “ಪೈಲೆಟ್‌ ಪ್ರಾಜೆಕ್ಟ್’ ಆಗಿ ಕೈಗೊಳ್ಳಲು 2019-20ರ ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿತ್ತು.

“ಮೀನುಗಾರಿಕೆ ಬಂದರನ್ನು ಸ್ಮಾರ್ಟ್‌ಸಿಟಿ ಸ್ವರೂಪದಲ್ಲಿ ಅಭಿವೃದ್ಧಿಪಡಿಸಿ ನಾಡದೋಣಿಗಳಿಗೆ ಅನುಕೂಲ ಕಲ್ಪಿಸಲು ಮೊದಲ ತೇಲುವ ಜೆಟ್ಟಿ ನಿರ್ಮಿಸಲಾಗುತ್ತಿದೆ. ಈ ಮೂಲಕ ಮೀನುಗಾರಿಕೆ ಕ್ಷೇತ್ರದಲ್ಲಿ ಹೊಸ ಬದಲಾವಣೆ ಕಾಣಲಾಗುತ್ತಿದೆ’ ಎನ್ನುತ್ತಾರೆ ಶಾಸಕ ಡಿ. ವೇದವ್ಯಾಸ ಕಾಮತ್‌.

Advertisement

ಸದ್ಯ ನಾಡದೋಣಿಗಳು ಬೆಂಗ್ರೆಯಲ್ಲಿ ನಿಲ್ಲುತ್ತದೆ. ಆದರೆ ಮೀನು ಇಳಿಸಲು ಅವರು ಮಂಗಳೂರಿನ ಮೀನುಗಾರಿಕೆ ಬಂದರಿಗೆ ಆಗಮಿಸಿ ಯಾಂತ್ರೀಕೃತ ಬೋಟ್‌ಗಳ ಹಿಂಬದಿಯಲ್ಲಿ ನಿಂತು ಅಲ್ಲಿಂದ ಇತರ ಬೋಟ್‌ಗಳಿಗೆ ಹತ್ತಿ ಸಾಹಸಕರ ರೀತಿಯಲ್ಲಿ ಮೀನನ್ನು ದಕ್ಕೆಗೆ ತರಬೇಕಿದೆ. ತೇಲುವ ಜೆಟ್ಟಿ ಈ ಸಮಸ್ಯೆಗೆ ಪೂರ್ಣವಿರಾಮ ಹಾಕಲಿದೆ.

ಲಾಭ ಹೇಗೆ?
ಹೊಸ ಜೆಟ್ಟಿಗೆ ಭೂಮಿಯ ಅಗತ್ಯ ಇದ್ದು, ಭೂಸ್ವಾಧೀನ/ಜಾಗದ ಸಮಸ್ಯೆ ಇದೆ. ಆದರೆ ನೀರಿನಲ್ಲೇ ಜೆಟ್ಟಿ ನಿರ್ಮಿಸಲು ಈ ಸಮಸ್ಯೆ ಇಲ್ಲ. ಹೊಸ ಜೆಟ್ಟಿಯಾದರೆ ನಾಡದೋಣಿ, ಸಾಂಪ್ರದಾಯಿಕ ದೋಣಿಗಳ ನಿಲುಗಡೆಗೆ ಸ್ಥಳ ಸಿಗಲಿದೆ. ಪ್ರಸ್ತುತ ಇರುವ ಮೀನುಗಾರಿಕೆ ಜೆಟ್ಟಿಯಲ್ಲಿ ನೀರಿನ ಮಟ್ಟ ಏರಿಳಿತ ಆಗುವಾಗ ಬೋಟ್‌ಗಳೂ ಎತ್ತರ/ತಗ್ಗು ಆಗಿ ಮೀನು ಇಳಿಸಲು ಸಮಸ್ಯೆಯಾಗುತ್ತದೆ. ತೇಲುವ ಜೆಟ್ಟಿಯು ನೀರಿನ ಮಟ್ಟದಲ್ಲೇ ಇರುವ ಕಾರಣ ಈ ಸಮಸ್ಯೆ ಇರದು. ಮೀನು ತರುವ ಬೋಟ್‌ಗಳಿಗೆ ಕೆಲವೊಮ್ಮೆ ಮೀನು ಇಳಿಸಲು ದಕ್ಕೆಯಲ್ಲಿ ಸ್ಥಳ ಸಿಗದೇ ಕಾಯಬೇಕು. ದೊಡ್ಡ ಬೋಟ್‌ಗಳಲ್ಲಿ ಮಂಜುಗಡ್ಡೆ ಇರುವುದರಿಂದ ಮೀನು ಹಾಳಾಗದು. ಆದರೆ ನಾಡದೋಣಿ ಸಹಿತ ಸಣ್ಣ ಬೋಟ್‌ಗಳಿಗೆ ಮಂಜುಗಡ್ಡೆ ಇರದ್ದರಿಂದ ಬೇಗನೆ ಇಳಿಸಲು ಹೊಸ ಜೆಟ್ಟಿ ಸಹಾಯಕ. ಜತೆಗೆ ಅಗತ್ಯವಿದ್ದರೆ ತೇಲುವ ಜೆಟ್ಟಿಯನ್ನು ಬಿಚ್ಚಿಕೊಂಡು ಇನ್ನೊಂದು ಕಡೆಗೆ ಸಾಗಿಸಲು ಬಹುದು.

ತೇಲುವ ಜೆಟ್ಟಿ ವಿಶೇಷತೆ
-ಜೆಟ್ಟಿಗಾಗಿ ನಿರ್ಮಿಸಿದ ಫಾಂಟೂನ್ಸ್‌ನ ಹೊರಭಾಗ ಕಾಂಕ್ರೀಟ್‌ ಸ್ವರೂಪದಲ್ಲಿದೆ.
-ಫಾಂಟೂನ್ಸ್‌ ಒಳಗೆ ಇಪಿಎಸ್‌ (ಎಕ್ಸ್‌ ಪಾಂಡೆಡ್‌ ಪಾಲಿಸ್ಟೈನರ್‌) ಬಳಕೆ.
-ಪ್ರತಿ ಫಾಂಟೂನ್ಸ್‌ 20 ಮೀ. ಉದ್ದ ಇರ ಲಿದ್ದು, 3 ಫಾಂಟೂನ್ಸ್‌ ಸೇರಿ 60 ಮೀ. ಉದ್ದ ಹಾಗೂ 6 ಮೀ. ಅಗಲ ಇರಲಿದೆ.
-30 ನಾಡದೋಣಿಗಳಿಗೆ ಅವಕಾಶ.
-ಒಂದು ಫಾಂಟೂನ್ಸ್‌ ಸುಮಾರು 180 ಟನ್‌ ತೂಕ
-360 ಟನ್‌ ಭಾರವನ್ನು ಸುಲಭವಾಗಿ ಹೊರುವ ಸಾಮರ್ಥ್ಯ ಇದಕ್ಕಿದೆ.

ಕಾಮಗಾರಿ ಆರಂಭ
ಮೀನುಗಾರಿಕೆ ಬಂದರಿನ ಬೋಟ್‌ ದಟ್ಟಣೆಯನ್ನು ಕಡಿಮೆಗೊಳಿಸಲು ಹಾಗೂ ನಾಡದೋಣಿಗಳ ಅನುಕೂಲಕ್ಕೆ ಮೊದಲ ಬಾರಿಗೆ ತೇಲುವ ಜೆಟ್ಟಿಯನ್ನು ಮಂಗಳೂ ರಿನಲ್ಲಿ ನಿರ್ಮಿಸಲಾಗುತ್ತಿದೆ. ಪ್ರಥಮ ಹಂತದ ಕಾಮಗಾರಿ ನಡೆಯುತ್ತಿದೆ.
-ಕೆ.ಗಣೇಶ್‌., ಎಂಡಿ, ಕೆಎಫ್‌ಡಿಸಿ

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next