Advertisement

Legislative Council Election: ಅಂತಿಮಗೊಳ್ಳದ ಅಭ್ಯರ್ಥಿಗಳು

01:44 AM Sep 27, 2024 | Team Udayavani |

ಮಂಗಳೂರು: ವಿಧಾನ ಪರಿಷತ್‌ಗೆ ದ.ಕ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಡೆಯುವ ಉಪಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರೆತಿದ್ದರೂ ಇದುವರೆಗೆ ಕಾಂಗ್ರೆಸ್‌ ಮತ್ತು ಬಿಜೆಪಿ ತಮ್ಮ ಅಭ್ಯರ್ಥಿಯನ್ನು ಪ್ರಕಟಿಸಿಲ್ಲ. ನಾಮಪತ್ರ ಸಲ್ಲಿಸಲು ಅಕ್ಟೋಬರ್‌ 3 ಕೊನೆಯ ದಿನವಾಗಿದೆ.

Advertisement

ಬಿಜೆಪಿಯ ನಿರ್ಧಾರ ವರಿಷ್ಠರ ಕೈಯಲ್ಲೇ ಇದ್ದು, ಕೆಲವೇ ದಿನಗಳಲ್ಲಿ ಅಭ್ಯರ್ಥಿ ಹೆಸರು ಪ್ರಕಟವಾಗಲಿದೆ ಎನ್ನುತ್ತಾರೆ ಸ್ಥಳೀಯ ನಾಯಕರು. ಕಾಂಗ್ರೆಸ್‌ ಈ ಬಾರಿ ಉಡುಪಿ ಜಿಲ್ಲೆಯವರಿಗೆ ಅವಕಾಶ ಕೊಡುವುದು ಖಚಿತವಾಗಿದೆ. ಉಡುಪಿಯ ಸಹಕಾರಿ ಧುರೀಣ ಎಸ್‌.ರಾಜು ಪೂಜಾರಿ, ಭುಜಂಗ ಶೆಟ್ಟಿ ಹಾಗೂ ಕಾರ್ಕಳದ ಟಿ.ಆರ್‌.ರಾಜು ಅವರ ಹೆಸರು ಕೇಳಿಬರುತ್ತಿದೆ.

ಬಿಜೆಪಿಯಿಂದ ಯಾರು ಎನ್ನು ವುದು ಕುತೂಹಲದ ವಿಚಾರ. ಕೋಟ ಶ್ರೀನಿವಾಸ ಪೂಜಾರಿ ಪ್ರತಿನಿಧಿಸಿದ್ದ ಕ್ಷೇತ್ರವಾದ್ದರಿಂದ ಉಡುಪಿ ಭಾಗದವರಿಗೇ ಕೊಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಹಾಗಿದ್ದರೆ ಪ್ರಮೋದ್‌ ಮಧ್ವರಾಜ್‌ ಹೆಸರು ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕೋರ್‌ ಕಮಿಟಿ ಸಭೆಯಲ್ಲಿ ಚರ್ಚೆ
ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯ ಬಿಜೆಪಿ ಕೋರ್‌ ಕಮಿಟಿ ಸಭೆ ನಡೆದಿದ್ದು, ಅದರಲ್ಲಿ ಪರಿಷತ್‌ ಚುನಾವಣೆ ಕುರಿತು ಚರ್ಚೆ ನಡೆದಿದೆ. ಅದರಲ್ಲಿ ಮಾಜಿ ಸಂಸದ ನಳಿನ್‌ ಕುಮಾರ್‌ ಕಟೀಲು ಕೂಡ ಪಾಲ್ಗೊಂಡಿದ್ದರು. ನಳಿನ್‌ ಕುಮಾರ್‌ ಹಾಗೂ ಬಿಜೆಪಿ ದ.ಕ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಅವರ ಹೆಸರು ಕೂಡ ಕೇಳಿಬಂದಿದೆ. ಲಭ್ಯ ಮಾಹಿತಿ ಪ್ರಕಾರ ಇಬ್ಬರೂ ಆಸಕ್ತಿ ತೋರಿಸಿದ್ದು ಹೌದು. ಆದರೆ ಇದುವರೆಗೆ ಯಾರಿಗೆ ಟಿಕೆಟ್‌ ನೀಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.

ಇದು ದ್ವಿಸದಸ್ಯ ಕ್ಷೇತ್ರವಾಗಿದ್ದು, 2021ರಲ್ಲಿ ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಗೆಲುವು ಸಾಧಿಸಿದ್ದರು.

Advertisement

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಿಜೆಪಿ ಸ್ಪಷ್ಟ ಮೇಲುಗೈ ಹೊಂದಿದೆ. ಇದರಿಂದ ದ.ಕ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸುಲಭ ಎನ್ನಲಾಗುತ್ತಿದೆ.

6,037 ಮತದಾರರು
ಪ್ರಸ್ತುತ ದ.ಕ.ದಲ್ಲಿ 234 ಮತಗಟ್ಟೆಗಳು ಹಾಗೂ 3,551 ಮತದಾರರು, ಉಡುಪಿ ಜಿಲ್ಲೆಯಲ್ಲಿ 158 ಮತಗಟ್ಟೆ ಹಾಗೂ 2,486 ಮತದಾರರು ಇದ್ದಾರೆ. ಉಪ ಚುನಾವಣೆ ಒಂದೇ ಸ್ಥಾನಕ್ಕೆ ನಡೆಯುವ ಕಾರಣ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next