ಇಬ್ಬರು ಮಧ್ಯವಯಸ್ಸು ದಾಟಿದ ಗೆಳತಿಯರು ಮಾತನಾಡಿಕೊಳ್ಳುತ್ತಿದ್ದರು :
“”ಅಲ್ವೇನೆ, ನೀನು ಈಗ ಮಿಡಿ ಹಾಕುತ್ತೀಯಾ?”
“”ಇಲ್ಲ ಕಣೆ ! ನಾನು ಮಿಡಿ ಹಾಕೋದು ಬಿಟ್ಟು ತುಂಬ ವರ್ಷಗಳಾದವು. ಈಗ ಮಗಳು ಸ್ಪೆಷಲ್ ವೆಕೇಶನ್‌ಗೆ ಹಾಕ್ಕೊಂಡು ಹೋಗ್ತಾಳೆ”
“”ಅದಲ್ಲ, ನಾನು ಕೇಳಿದ್ದು ಮಿಡಿ ಮಾವಿನಕಾಯಿ ಉಪ್ಪಿಗೆ ಹಾಕಿಟ್ಟಿದ್ದೀಯಾ ಅಂತ !”
ಕಳೆದೊಂದು ತಿಂಗಳಿಂದಲೇ ಶುರುವಾದ ಈ ಆತಂಕ ಮಹಿಳೆಯರಿಗೆ ಮಾತ್ರಾ ತಟ್ಟಿದ್ದಲ್ಲವೆನ್ನುವ ವಾಸ್ತವ ಗಂಡಸರೂ ಆ ಬಗ್ಗೆ ವಿಚಾರಿಸುವುದು ಕಂಡಾಗ ಇದು ಕೇವಲ ಮಹಿಳೆಯರಿಗೆ ಸಂಬಂಧಿಸಿದ ವಿಷಯ ಅಂದರೆ ಸುಳ್ಳಾಗುತ್ತದೆ. ಪರಿಚಯ ಇದ್ದವರಲ್ಲಿ ಮಾತ್ರವಲ್ಲ; ಎದುರಾಗಿ ಸಿಕ್ಕಿದವರಲ್ಲಿ ಕಾತರದಿಂದಲೇ ಕೇಳುವುದು ಕಾಣಬಹುದು. ಹೆಚ್ಚಾಗಿ ಊರಿನ ಕಡೆಯವರು ಅಂದರೆ ಸತ್ಯ. ವರ್ಷ ಪೂರ್ತಾ ಖರ್ಚಿಗೆ ಬೇಕಾಗುವ ಮಾವಿನಮಿಡಿ ಉಪ್ಪಿನಕಾಯಿಯ ಬಗ್ಗೆ ಪ್ರಸ್ತಾಪ ಇದು. ಅನೇಕ ಮನೆಗಳಲ್ಲಿ ಬಿ.ಪಿ., ಡಯಾಬಿಟಿಸ್ ಅಂತ ಉಪ್ಪು, ಖಾರದ ಈ ಮಿಶ್ರಣವನ್ನು ದೂರವಿಟ್ಟವರಿದ್ದಾರೆ. ಆದರೆ ಉಳಿದವರಿಗೆ ಬೇಕೇಬೇಕು. ನಿತ್ಯದ ಬಳಕೆಗೆ, ಕಾಯಿಲೆ, ಜ್ವರ ಇತ್ಯಾದಿ ಸಂದರ್ಭಗಳಲ್ಲಿ ನಾಲ್ಕು ತುತ್ತು ಗಂಜಿ ಉಣ್ಣಬೇಕಾದರೆ ಅಲ್ಲಿ ಒಂದು ಉಪ್ಪಿನಕಾಯಿಯ ಮಿಡಿ ಇದ್ದರೇ ಸೈ. ಅದರ ಜೊತೆಗೆ ಮನೆ ಎಂದ ಮೇಲೆ ಸಣ್ಣ, ದೊಡ್ಡ ಸಮಾರಂಭಗಳಿರುತ್ತವೆ, ನೆಂಟರು, ಸ್ನೇಹಿತರು ಅಂತ ಅತಿಥಿಗಳ ಸತ್ಕಾರ ಆಗಬೇಕು. ಆಗೆಲ್ಲ ಉಪ್ಪಿನಕಾಯಿಗೆ ಇರುವ ಮರ್ಯಾದೆ ಜಾಸ್ತಿ. ಒಳ್ಳೆಯ ಘಮ ಘಮದ ಉಪ್ಪಿನಕಾಯಿ ಮನೆಯೊಡತಿಯ ಕೌಶಲದ ಗುರುತು. ಜನವರಿ, ಫೆಬ್ರವರಿ, ಮಾರ್ಚ್ ಅಂದರೆ ಊರ ಮನೆ-ಮನೆಗಳಲ್ಲಿ ವರ್ಷದ ದಾಸ್ತಾನಿನ ಏರ್ಪಾಡು ಅಗತ್ಯ. ಹಳ್ಳಿಯ ಮನೆ-ಮನೆಗಳ ಹಿಂದೆ, ಮುಂದೆ ಕಾಡುಮಾವಿನ ಮರಗಳು ಸಾಕಷ್ಟಿದ್ದ ಕಾಲ ಹಿಂದಾಗಿ ಈಗ ಇರುವವರ ಬಳಿ ಬುಕ್ ಮಾಡುವುದೇ ಹೆಚ್ಚು.
ಮನೆ-ಮನೆಗಳಲ್ಲಿದ್ದ ಮರಗಳು ಮರದ ಮಿಲ… ಸೇರಿ ಬಾಗಿಲು, ಪೀಠೊಪಕರಣಗಳಾಗಿ ರೂಪಾಂತರವಾಗುತ್ತದೆ. ಉಳಿದ ಕಡೆ ಇದೆಯೇನೋ ಎಂಬ ಹಂಬಲ. ಇಷ್ಟು ವರ್ಷಗಳಲ್ಲಿ ಈ ಬಾರಿ ಕಾಡುಮಾವಿನ ಮಿಡಿಗಳಿಗೆ ಬಂದ ಬರ ಆಘಾತ ಹುಟ್ಟಿಸಿದ್ದು ಸತ್ಯ. ಮನೆಯವರಲ್ಲದೆ ಇತರರಿಗೂ ಗಾಳಿ ಬೀಸಿದ ಕೂಡಲೇ ಕಾಡುಹಣ್ಣುಗಳ ಉದುರಿಸುವ ಮರಗಳು ಈಗ ಬೋಳು ಬೋಳು. ಹುಡುಕಿದರೂ ಒಂದೂ ಇಲ್ಲದ ಅಪಾಯಕಾರಿ ಸ್ಥಿತಿ. ಹಾಗೆಂದು ಕಸಿ ಜಾತಿಯ ಮಾವು ದೊರೆಯಬಹುದು. ಆದರೆ ಅದು ಕೇವಲ ಹಣ್ಣಿಗೆ ಮಾತ್ರ. ಒಮ್ಮೆ ಜೋಪಾನವಾಗಿ ತಯಾರಿಸಿ ಭರಣಿ ಬಿಗಿಯಾಗಿ ಕಟ್ಟಿ ಇಟ್ಟರೆ ವರ್ಷ, ಎರಡು ವರ್ಷವಾದರೂ ಹಾಳಾಗದೆ ಉಳಿಯುವುದು ಕಾಡುಮಾವಿನ ಉಪ್ಪಿನಕಾಯಿ. ಅದರಲ್ಲಿನ ಸೊನೆ, ಪರಿಮಳ, ಹುಳಿ ಬಾಳ್ವಿಕೆಗೆ ಪೂರಕ. ಮನೆ-ಮನೆಯ ಮಂದಿ ಎದುರು ಸಿಕ್ಕಿದವರನ್ನು “ಹ್ಯಾಗಿದ್ದೀರಿ?’ ಎನ್ನುವ ಬದಲಾಗಿ “ನಿಮ್ಮಲ್ಲಿ ಕಾಡುಮಾವಿನ ಮಿಡಿ ಸಿಗುತ್ತಾ?’ ಅಂತ ಕೇಳುವುದು ಸಣ್ಣಪುಟ್ಟದರಿಂದ ಹಿಡಿದು ಮದುವೆ ಮನೆಗಳಲ್ಲೂ ಗಮನಿಸಬಹುದು. ಅವರಷ್ಟೇ ಆತಂಕದಲ್ಲಿ ಗಂಡಸರೂ ಹುಡುಕಾಡುತ್ತಾರೆ. ಏಕೆ ಎಂದರೆ ಎಲೆ ತುದಿಗೆ ಮಿಡಿ ಉಪ್ಪಿನಕಾಯಿ ಇಲ್ಲದೆ ಊಟಕ್ಕೆ ತುತ್ತು ಎತ್ತದವರೇ ಕರಾವಳಿಯಲ್ಲಿ ಹೆಚ್ಚು. ಸೆಕೆೆಗಾಲದಲ್ಲಿ ಬಾಯಿಗೆ ತಿಂಡಿ ರುಚಿಸದು. ಬೆಳಗ್ಗೆ ಗಂಜಿ ತಯಾರಿಸಿದರೆ ಅದಕ್ಕೆ ಮಿಡಿ ಉಪ್ಪಿನಕಾಯಿ ಇಲ್ಲದೆ ಸೊಗಸಿರದು. “ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ ಹರದಾರಿಗಟ್ಟಲೆ ನಡೆದು ಮಾವಿನಮಿಡಿ ಕೊಯ್ಯಿಸಿ ಹೊತ್ತು ತಂದ ಸರಸೋತಿಯಂಥ ಮಹಿಳೆಯರು ಇಂದಿಗೂ ಇರಬಹುದು. ಅದರ ಹಿಂದೆ ಇರುವುದು ಈ ವಿಶಿಷ್ಟ ಪದಾರ್ಥದ ಅದ್ಭುತ ರುಚಿ. ಮಿಡಿಯನ್ನು ಕಡಿದು ಉಂಡ ರುಚಿ ಮತ್ತೆ ಗಂಟೆಯೇ ಕಳೆದರೂ ನಾಲಿಗೆಯಿಂದ ಹೋಗದು.
ಹಿರಿಯರನೇಕರು, “ಈ ದುರ್ಮುಖ ಸಂವತ್ಸರದ ಪ್ರಭಾವ ಇದು. ಬಾನು ಮುಟ್ಟುವ ಎತ್ತರದ ಮಾವಿನ ಮರಗಳಿವೆಯೇ ಹೊರತು ಒಂದೇ ಒಂದರಲ್ಲೂ ಮದ್ದಿಗೂ ಮಿಡಿ ಕಾಣದು’ ಎಂದು ಬೈಯ್ಯುತ್ತಾರೆ. “ಈ ಪರಿಯಲ್ಲಿ ಬರಗಾಲ ಬಂದದ್ದು ಕಂಡೇ ಇಲ್ಲ’ ಎನ್ನುತ್ತಾರೆ. ಹಾಗೆಂದು ಕುಂದಾಪುರ, ಸಿದ್ಧಾಪುರ, ಸಿರ್ಸಿ, ಬೈಂದೂರು ಶಿವಮೊಗ್ಗಗಳ ಕಡೆ ಲಭ್ಯವಿರುವ ಅಪ್ಪೆ ಮಿಡಿಗೆ ಇಲ್ಲಿಯ ಬರ ತಟ್ಟಿದೆಯೇ ಎಂದರೆ ತಿಳಿದಿಲ್ಲ ಎನ್ನಬೇಕು. ಅಪ್ಪೆಮಿಡಿಯ ಘಮಕ್ಕೆ ಸಾಟಿ ಅಪ್ಪೆ ಮಿಡಿಯೇ ಹೊರತು ಬೇರೇನಲ್ಲ. ಅದರ ಸೊನೆಯ ವಿಶಿಷ್ಟತಮ ಸುವಾಸನೆಗೆ ಹಸಿವಿಲ್ಲದವರಿಗೂ ಒಡಲು ಚುರ್ ಅನ್ನುತ್ತದೆ. ಸೊನೆ ಸಾರು ಎನ್ನುವ ಸಾರು ಉಂಡವ ಬದುಕು ಪೂರಾ ಮರೆಯಲಿಕ್ಕಿಲ್ಲ. ದುರ್ಮುಖ ಸಂವತ್ಸರ ಅಲ್ಲಿಗೆ ಪ್ರಭಾವ ಬೀರಿದರೆ ಇಲ್ಲಿಯದೇ ಅವಸ್ಥೆ.
ನಿಜಕ್ಕೂ ಈ ಪರಿಯಲ್ಲಿ ಕಾಡುಮಾವಿನ ಅಭಾವ ಅಪಾಯಕಾರಿ ಸೂಚನೆ ಅನ್ನುವುದು ನಿಜ. ಮರಗಳು ಸಾಕಷ್ಟಿವೆ; ಆದರೆ ಕಾಯಿ ಕನಸಲ್ಲಿ ಮಾತ್ರ. ಪಟ್ಟಣಗಳಲ್ಲಿ ಮಾವಿನಕಾಯಿ ಲಭ್ಯವಿದೆ. ಗಾತ್ರ ದೊಡ್ಡದು. ಇದು ಕಾಡುಮಾವೇ ಎಂದು ನಂಬಿಸಲು ನೋಡಿದರೆ ಅದರ ಬಗ್ಗೆ ಚೆನ್ನಾಗಿ ತಿಳಿದಿರುವ ಮಹಿಳೆಯರು ಅಷ್ಟು ಸುಲಭದಲ್ಲಿ ನಂಬುತ್ತಾರಾ? ಮಾರಾಟಗಾರನಿಗೆ ಗೊತ್ತಿದ್ದಕ್ಕಿಂತ ಹೆಚ್ಚಿಗೆ ಆ ಬಗ್ಗೆ ಅವರಿಗೆ ಮಾಹಿತಿ ಇದೆ. ಹೋದ ಬಂದ ಕಡೆ ಅರಸುತ್ತಲೇ ಇರುತ್ತಾರೆ. ಹದವಾದ ನಿಂಬೆ ಗಾತ್ರದ ಗೊಂಚಲು ಗೊಂಚಲಾಗಿ ತೂಗಾಡುವ ಕಾಡುಮಾವು ಮಹಿಳೆಯರ ನಿರೀಕ್ಷೆ. ಊಟಕ್ಕಿಲ್ಲದ ಉಪ್ಪಿನಕಾಯಿ ಅಂದರೆ ಅದು ದುರ್ಮುಖನಾಮ ಸಂವತ್ಸರದ ಕೊಡುಗೆ ಎಂದು ಗೊಣಗುತ್ತ ಪರ್ಯಾಯವಾಗಿ ಹುಳಿ, ಸೊನೆ, ಸುವಾಸನೆ ಕಮ್ಮಿ ಇರುವ ಹೈಬ್ರಿಡ್ ಮಾವನ್ನು, ನಿಂಬೆಯನ್ನು ಅವಲಂಬಿಸದೇ ಅನ್ಯ ಮಾರ್ಗವಿಲ್ಲ. ಹಾಸ್ಟೆಲ್‌ನಲ್ಲಿದ್ದು ಓದುವ ಮಕ್ಕಳಿಗೆ ಹಿಂದಿರುಗುವಾಗ ಒಯ್ಯಲು, ಆಪ್ತ ಸಂಬಂಧಿಕರು ಕೇಳಿದಾಗ, ಸಿಟಿಗಳಲ್ಲಿ ನೆಲೆಸಿದ ಮಗ, ಸೊಸೆ, ಮಗಳು, ಮೊಮ್ಮಕ್ಕಳ ಅಪೇಕ್ಷೆ ಮೇರೆಗೆ ಕೊಡಲು ಪರ್ಯಾಯ ವ್ಯವಸ್ಥೆಗೆ ಮನೆಯೊಡತಿ ಸಿದ್ಧತೆ ಮಾಡಿಕೊಳ್ಳಲೇಬೇಕು. ಯಾವುದು, ಏನೇ ಇದ್ದರೂ ಕಾಡುಮಾವಿನ ಮಿಡಿಗೆ ಸರಿಸಾಟಿಯಾಗದು.
– ಕೃಷ್ಣವೇಣಿ ಕಿದೂರು