ಹೊಸದಿಲ್ಲಿ: ಭಾರತದ ಪ್ರಮುಖ ಇ-ಕಾಮರ್ಸ್ ಕಂಪೆನಿ ಫ್ಲಿಪ್ ಕಾರ್ಟ್ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ನಿರ್ಧರಿಸಿದೆ.
ಕಂಪೆನಿಯು 2030ರ ವೇಳೆಗೆ ಸಂಪೂರ್ಣವಾಗಿ ತನ್ನೆಲ್ಲಾ ವಹಿವಾಟು ವಾಹನಗಳನ್ನು ಎಲೆಕ್ಟ್ರಿಕ್ ಮಾದರಿಗೆ ಬದಲಾಯಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದೆ.
ಈ ಮೂಲಕ ಕ್ಲೈಮೇಟ್ ಗ್ರೂಪಿನ ಜಾಗತಿಕ ಎಲೆಕ್ಟ್ರಿಕ್ ಪರಿವರ್ತನಾ ಅಭಿಯಾನವಾಗಿರುವ EV100ನಲ್ಲಿ ಭಾಗಿಯಾಗಲು ಫ್ಲಿಪ್ ಕಾರ್ಟ್ ಸಂಕಲ್ಪ ಮಾಡಿದೆ.
ಈ ನಿರ್ಧಾರವನ್ನು ಕೈಗೊಳ್ಳುವ ಮೂಲಕ EV100 ಸಮೂಹಕ್ಕೆ ಸೇರಿದ ಭಾರತದ ಮೊದಲ ಇ-ಕಾಮರ್ಸ್ ಕಂಪೆನಿ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಸಕ್ತಿಯನ್ನು ತೋರುವ ಕಂಪೆನಿಗಳನ್ನು ಒಗ್ಗೂಡಿಸುವ ಪ್ರಯತ್ನ EV100 ಅಭಿಯಾನದ ಮೂಲ ಉದ್ದೇಶವಾಗಿದೆ.
2030ರ ವೇಳೆಗೆ ತನ್ನ ವ್ಯವಹಾರಗಳನ್ನು ಎಲೆಕ್ಟ್ರಿಕ್ ಮಾದರಿಯ ವಾಹನಗಳ ಮೂಲಕವೇ ಮಾಡುವ ನಿರ್ಧಾರವನ್ನು ಫ್ಲಿಪ್ ಕಾರ್ಟ್ ಮಾಡಿದ್ದು ಇದಕ್ಕಾಗಿ ಸಂಪೂರ್ಣ ವಿದ್ಯುತ್ ಚಾಲಿತ ವಾಹನಗಳನ್ನು ಖರೀದಿಸುವ ಮತ್ತು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಇಂಗಿತವನ್ನೂ ಸಹ ಕಂಪೆನಿ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದೆ.
ದೇಶಾದ್ಯಂತವಿರುವ ತನ್ನ 1,400 ಪೂರೈಕೆ ಆವರಣಗಳಲ್ಲಿ ಈ ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಗೆ ಅಗತ್ಯವಿರುವ ಚಾರ್ಜಿಂಗ್ ಪಾಯಿಂಟ್ ಗಳನ್ನೂ ಸಹ ನಿರ್ಮಿಸಲು ಬೆಂಗಳೂರು ಮೂಲದ ಈ ಕಂಪೆನಿ ನಿರ್ದಾರ ಮಾಡಿದೆ.
ಇಷ್ಟು ಮಾತ್ರವಲ್ಲದೇ ತನ್ನ ಸಂಸ್ಥೆಯ ಉತ್ಪನ್ನ ವಿತರಕ ಉದ್ಯೋಗಿಗಳಿಗೆ ಈ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವ ಮಾದರಿಯ ತರಬೇತಿ ಮತ್ತು ಅರಿವು ಕಾರ್ಯಕ್ರಮಗಳನ್ನೂ ಸಹ ನಡೆಸಲು ಪ್ಲಿಪ್ ಕಾರ್ಟ್ ಯೋಜನೆಯನ್ನು ಹಾಕಿಕೊಂಡಿದೆ ಎಂದು ಸಂಸ್ಥೆ ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.