Advertisement

ಉಕ್ರೇನ್‌ಗೆ ವಿಮಾನ ರದ್ದು; ಹೆಚ್ಚಿದ ರಷ್ಯಾ ದಾಳಿ ಭೀತಿ

08:48 PM Feb 13, 2022 | Team Udayavani |

ಮಾಸ್ಕೋ/ವಾಷಿಂಗ್ಟನ್‌: ಉಕ್ರೇನ್‌ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣವಾಗಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಯುದ್ಧ ಸಂಭವಿಸಬಹುದು ಎಂದೇ ಹೇಳಲಾಗುತ್ತಿದೆ. ಇದರ ಮಧ್ಯೆಯೇ ಉಕ್ರೇನ್‌ ವಿರುದ್ಧ ಯಾವುದೇ ರೀತಿಯ ದಾಳಿಗೆ ಮುಂದಾದರೆ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಅಮೆರಿಕ ರಷ್ಯಾಗೇ ನೇರವಾಗಿಯೇ ಎಚ್ಚರಿಕೆ ನೀಡಿದೆ.

Advertisement

ಶನಿವಾರ ರಾತ್ರಿಯಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ನಡುವೆ ಒಂದು ಗಂಟೆ ದೂರವಾಣಿ ಸಂಭಾಷಣೆ ನಡೆದಿದೆ. ಈ ವೇಳೆಯಲ್ಲೇ ಬೈಡೆನ್‌, ಪುಟಿನ್‌ಗೆ ಈ ರೀತಿ ಎಚ್ಚರಿಕೆ ನೀಡಿದ್ದಾರೆ. ಬೈಡೆನ್‌ ಎಚ್ಚರಿಕೆಯ ನಡುವೆಯೂ ಉಕ್ರೇನ್‌ ಗಡಿ ಸಮೀಪ ರಷ್ಯಾ ಹೆಚ್ಚುವರಿಯಾಗಿ ಸೇನೆ ನಿಯೋಜಿಸಿದೆ ಎಂದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ. ಇದೇ ವೇಳೆ, 21 ರಾಷ್ಟ್ರಗಳ ಸರ್ಕಾರಗಳು ತಮ್ಮ ಪ್ರಜೆಗಳನ್ನು ಕರೆಯಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿವೆ.

ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡುವ ಆತಂಕ ಹೆಚ್ಚಾಗುತ್ತಿದ್ದಂತೆಯೇ ಹಲವು ರಾಷ್ಟ್ರಗಳು ಆ ದೇಶಕ್ಕೆ ವಿಮಾನ ಸಂಚಾರ ರದ್ದುಗೊಳಿಸಿವೆ ಮತ್ತು ಕೆಲವು ವಿಮಾನಗಳ ಮಾರ್ಗ ಬದಲಿಸಲು ಮುಂದಾಗಿದೆ. ನೆದರ್ಲೆಂಡ್‌ನ‌ ವಿಮಾನಯಾನ ಸಂಸ್ಥೆ ಮುಂದಿನ ಆದೇಶದ ವರೆಗೆ ಉಕ್ರೇನ್‌ ರಾಜಧಾನಿ ಕೀವ್‌ ಮತ್ತು ಇತರ ನಗರಗಳಿಗೆ ವಿಮಾನ ಹಾರಾಟ ಸ್ಥಗಿತಗೊಳಿಸಿದೆ. ಇದರ ಜತೆಗೆ ಉಕ್ರೇನ್‌ನದ್ದೇ ಆಗಿರುವ ಸ್ಕೈಅಪ್‌ ಸಂಸ್ಥೆ ಮ್ಯಾಡ್ರಿಯಾ, ಪೋರ್ಚುಗಲ್‌ನಿಂದ ಬರುವ ವಿಮಾನಗಳನ್ನು ದೇಶಕ್ಕೆ ಬರದಂತೆ ಸೂಚಿಸಿದೆ.

ಜಮಾವಣೆ ಹೆಚ್ಚಳ:
ಬೆಲಾರೂಸ್‌ಗೆ ಹೊಂದಿಕೊಂಡಿರುವ ಗಡಿ ಪ್ರದೇಶದಲ್ಲಿ ರಷ್ಯಾ ಉಕ್ರೇನ್‌ ವಿರುದ್ಧ ದಾಳಿಗೆ ಸಿದ್ಧತೆ ಬಿರುಸುಗೊಳಿಸಿದೆ ಮತ್ತು ಹೆಚ್ಚುವರಿಯಾಗಿ ಪಡೆಗಳನ್ನು ನಿಯೋಜಿಸಿದೆ. ಈ ಬಗ್ಗೆ ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ.

ಝಾಬ್ರ್ಯಾವೊಕಾ ವಾಯುನೆಲೆಯಲ್ಲಿ ಹೊಸತಾಗಿ ಹೆಲಿಕಾಪ್ಟರ್‌ಗಳು, ಕ್ಷಿಪಣಿಗಳು ಬಂದಿಳಿದಿವೆ. ಅಮೆರಿಕದ ಕೊಲೆರೊಡೋದಲ್ಲಿ ಪ್ರಧಾನ ಕಚೇರಿ ಹೊಂದಿರುವ ಮಾಕ್ಸರ್‌ ಟೆಕ್ನಾಲಜೀಸ್‌ ಬೆಲಾರೂಸ್‌ ವ್ಯಾಪ್ತಿಯಲ್ಲಿ ರಷ್ಯಾ ಸೇನೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡಿರುವ ಬಗ್ಗೆ ಫೋಟೋಗಳನ್ನು ಬಿಡುಗಡೆ ಮಾಡಿದೆ. ಐರೋಪ್ಯ ಒಕ್ಕೂಟದ ಪೂರ್ವ ಭಾಗದ ಕ್ರೀಮಿಯಾದಲ್ಲಿ ರಷ್ಯಾ ಹೊಸತಾಗಿ ಶಸ್ತ್ರಾಸ್ತ್ರ ಸಹಿತ ಯೋಧರನ್ನು ಸೇರಿಸಿರುವ ಅಂಶವೂ ಬೆಳಕಿಗೆ ಬಂದಿದೆ.

Advertisement

ಪುಟಿನ್‌ಗೆ ಎಚ್ಚರಿಕೆ:
ಉಕ್ರೇನ್‌ ವಿರುದ್ಧ ದಾಳಿ ನಡೆಸಿದ್ದೇ ಆದಲ್ಲಿ ಕಠಿಣ ರೀತಿಯ ಆರ್ಥಿಕ ದಿಗ್ಬಂಧನ ವಿಧಿಸುವ ಎಚ್ಚರಿಕೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ಗೆ ನೀಡಿದ್ದಾರೆ. ಬಿಗಡಾಯಿಸಿರುವ ಬಿಕ್ಕಟ್ಟು ತಗ್ಗಿಸಲು ಮುಂದಾಗಬೇಕು ಎಂದು ರಷ್ಯಾ ಅಧ್ಯಕ್ಷರಿಗೆ ಬೈಡೆನ್‌ ಮನವಿ ಮಾಡಿದ್ದಾರೆ. ಒಂದು ಗಂಟೆ ಕಾಲದ ಸಂಭಾಷಣೆಯಲ್ಲಿ ಹಾಲಿ ಬಿಕ್ಕಟ್ಟನ್ನು ರಾಜತಾಂತ್ರಿಕ ನೆಲೆಯಲ್ಲಿ ಬಗೆಹರಿಸಲು ಅಮೆರಿಕ ಮುಂದಾಗಿದೆ ಎಂಬ ಅಂಶವನ್ನು ಪುಟಿನ್‌ಗೆ ಮನವರಿಕೆ ಮಾಡಿಕೊಡಲಾಯಿತು ಎಂದು ಶ್ವೇತಭವನ ತಿಳಿಸಿದೆ.

ಬೈಡೆನ್‌ ಎಚ್ಚರಿಕೆಯ ಬಗ್ಗೆ  ಕಿಲುಬು ಕಾಸಿನ ಬೆಲೆ ನೀಡುವುದಿಲ್ಲ ಎಂದು ಸ್ವೀಡನ್‌ನಲ್ಲಿ ರಷ್ಯಾ ರಾಯಭಾರಿ ವಿಕ್ಟೊರ್‌ ಟಟಾನಿಸ್ತೇವ್‌ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next