ವಿಧಾನ ಪರಿಷತ್ತು: ಅಯೋಧ್ಯೆ ಹಾಗೂ ಕೊಪ್ಪಳದ ಅಂಜನಾದ್ರಿ ಬೆಟ್ಟದ ನಡುವೆ ರೈಲು ಮತ್ತು ವಿಮಾನ ಸೇವೆ ಕಲ್ಪಿಸಲು ಸರ್ಕಾರ ಚಿಂತನೆ ನಡೆಸಿದೆ.
ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಅಭಿವೃದ್ಧಿಪಡಿಸಲಾಗಿದೆ. ಇದೇ ಮಾದರಿಯಲ್ಲಿ ರಾಮನ ಭಕ್ತ ಆಂಜನೇಯ ಸ್ವಾಮಿಯ ಜನ್ಮಸ್ಥಳವೆಂದು ಹೇಳಲಾಗುವ ಅಂಜನಾದ್ರಿ ಬೆಟ್ಟದ ನಡುವೆ ರೈಲು ಮತ್ತು ವಿಮಾನ ಸೇವೆ ಕಲ್ಪಿಸುವ ಚಿಂತನೆ ಸರ್ಕಾರದ ಮುಂದಿದೆ. ಈ ಸಂಬಂಧದ ಚರ್ಚೆ ನಡೆದಿದ್ದು, ಇದನ್ನು ಕಾರ್ಯರೂಪಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಬುಧವಾರ ಪ್ರಶ್ನೋತ್ತರ ವೇಳೆ ಬಿಜೆಪಿಯ ಎನ್. ರವಿಕುಮಾರ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗಾಗಿ 13.34 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಹಾಗೂ ಇದಕ್ಕೆ ತಗಲುವ ವೆಚ್ಚ 5.50 ಕೋಟಿ ರೂ. ಬಿಡುಗಡೆ ಮಾಡುವ ಬಗ್ಗೆ ಪ್ರಸ್ತಾವನೆ ಸ್ವೀಕೃತಗೊಂಡಿದೆ. ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಜಾಗದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಇದಲ್ಲದೆ, ಅಂಜನಾದ್ರಿ ಬೆಟ್ಟ ತಲುಪಲು ವೃದ್ಧರು, ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗುವಂತೆ ರೋಪ್‌ವೇ ನಿರ್ಮಾಣ ಕಾಮಗಾರಿ ಕೂಡ ಕೈಗೊಳ್ಳುವ ಬಗ್ಗೆ ಪ್ರಸ್ತಾವನೆ ಪಡೆದು, ಪರಿಶೀಲನೆ ನಡೆಸಲಾಗುವುದು. ಒಟ್ಟಾರೆ ಇದೊಂದು ಮಾದರಿಯಾಗಿ ಬೆಟ್ಟವನ್ನು ಅಭಿವೃದ್ಧಿಪಡಿಸುವ ಗುರಿ ಇದೆ ಎಂದು ಮಾಹಿತಿ ನೀಡಿದರು.
ಇದರ ಜತೆಗೆ ಸರ್ಕಾರದ “ದೈವ ಸಂಕಲ್ಪ’ ಯೋಜನೆ ಅಡಿ ಇದೇ ಮೊದಲ ಬಾರಿಗೆ “ಎ’ ಶ್ರೇಣಿಯ 25 ದೇವಾಲಯಗಳನ್ನು ಗುರುತಿಸಿ, ಅಲ್ಲಿ ಬರುವ ಆದಾಯದಿಂದ ದೇವಾಲಯಗಳಲ್ಲಿ ಯೋಜಿತ ಅಭಿವೃದ್ಧಿ ಕಾರ್ಯಗಳನ್ನು ಹಂತ-ಹಂತವಾಗಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ರಸ್ತೆ, ಶೌಚಾಲಯ, ಘನತ್ಯಾಜ್ಯ ವಿಲೇವಾರಿ ಸೇರಿದಂತೆ ಹತ್ತಾರು ಮೂಲಸೌಕರ್ಯಗಳನ್ನು ಕಲ್ಪಿಸಲಿದ್ದು, ಈ ಸಂಬಂಧ ಮಾಸ್ಟರ್‌ಪ್ಲಾನ್ ರೂಪಿಸಲಾಗುತ್ತಿದೆ. ಅಂದಾಜು 1,035 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಮೊದಲ ಹಂತದಲ್ಲಿ ಮಾಸ್ಟರ್‌ಪ್ಲಾನ್ ತಯಾರಿ, ಮಾರ್ಗಸೂಚಿ, ವಿನ್ಯಾಸದ ರೂಪುರೇಷೆಗಳು ಸಿದ್ಧಗೊಳ್ಳಲಿವೆ. ನಂತರದ ಹಂತಗಳಲ್ಲಿ ಅಂದಾಜು ಪಟ್ಟಿ ತಯಾರಿಕೆ, ಕಾಮಗಾರಿ ಕಾರ್ಯರೂಪ ಹಾಗೂ ಅನುಮೋದನೆ ಮತ್ತು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.