Advertisement

ಕಲ್ಲಂದಡ್ಕ ಕ್ರಷರ್‌ ಘಟಕದ ವಿರುದ್ಧ ಫ್ಲೆಕ್ಸ್‌  ಸಮರ 

02:39 PM Mar 22, 2018 | Team Udayavani |

ಕುಳ : ಇಡ್ಕಿದು ಗ್ರಾ.ಪಂ. ವ್ಯಾಪ್ತಿಯ ಕುಳ ಗ್ರಾಮದ ಕಲ್ಲಂದಡ್ಕದಲ್ಲಿರುವ ಅಕ್ರಮ ಜಲ್ಲಿ ಕ್ರಷರ್‌ ಹಾಗೂ ಕೃತಕ ಮರಳು (ಎಂ. ಸ್ಯಾಂಡ್‌) ಘಟಕದ ವಿರುದ್ಧ ಅಧಿಕಾರಿಗಳ ಗಮನ ಸೆಳೆಯಲು ಜಿ.ಪಂ. ರಸ್ತೆಯ ಪಕ್ಕ ಫ್ಲೆಕ್ಸ್‌ ಅಳವಡಿಸಿದ್ದಾರೆ.

Advertisement

ಈ ಹಿಂದೆ ದೂರುಗಳ ಹಿನ್ನೆಲೆಯಲ್ಲಿ ಕಲ್ಲಂದಡ್ಕ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದ ಗಣಿ, ಪರಿಸರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕ್ರಷರ್‌ ಘಟಕ ಸ್ಥಾಪಿಸಲು ಇದು ಸುರಕ್ಷಿತ ಸ್ಥಳವಲ್ಲ ಎಂದು ತಿಳಿಸಿದ್ದರು. ಆದರೂ ಘಟಕ ಸ್ಥಗಿತಗೊಳ್ಳದ ಕಾರಣ ಕುಳ ಗ್ರಾಮದ ಕಬಕ, ಕಲ್ಲಂದಡ್ಕ, ಕುಡುವರ ಪಡ್ಡು, ಓಜಾಲ ಭಾಗಕ್ಕೆ ತೆರಳುವ ರಸ್ತೆ ಪಕ್ಕದಲ್ಲೇ ಈ ಫ್ಲೆಕ್ಸ್‌ಗಳನ್ನು ಗ್ರಾಮಸ್ಥರು ಅಳವಡಿಸಿದ್ದಾರೆ.

ಕಲ್ಲಂದಡ್ಕ ಜನವಸತಿ ಪ್ರದೇಶದಲ್ಲಿರುವ ಅಕ್ರಮ ಕ್ರಷರ್‌ ಮತ್ತು ಎಂ.ಸ್ಯಾಂಡ್‌ (ಕೃತಕ ಮರಳು) ಘಟಕ ನಿಷೇಧಿಸಿ, ಈ ಭಾಗದ ಜನರಿಗೆ ನಿರ್ಭಯವಾಗಿ ಬದುಕಲು ಅವಕಾಶ ಕಲ್ಪಿಸಿ. ಗ್ರಾಮೀಣ ರಸ್ತೆಗಳು ಗಣಿ ಮಾಫಿಯಾದ ಅಟ್ಟಹಾಸಕ್ಕೆ ಬಲಿಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಿ. ಮನೆ, ಮಂದಿರ, ಮಸೀದಿ, ಮದ್ರಸ, ಅಂಗನವಾಡಿಗಳಿರುವ ಕಲ್ಲಂದಡ್ಕ ಪ್ರದೇಶ ಕಲ್ಲು ಗಣಿ ಉದ್ಯಮಕ್ಕೆ ಸೂಕ್ತವಲ್ಲ. ಶಬ್ದ ಹಾಗೂ ಪರಿಸರ ಮಾಲಿನ್ಯವಾಗುತ್ತಿದ್ದು, ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಅಂತಾರಾಜ್ಯ ನೋಂದಣಿ ವಾಹನಗಳು ಕೇರಳಕ್ಕೆ ಕೃತಕ ಮರಳು ಹಾಗೂ ಜಲ್ಲಿಕಲ್ಲುಗಳನ್ನು ಸಾಗಿಸುತ್ತಿದ್ದು, ಜನರು ಪ್ರಾಣಭಯದಿಂದ ದಿನ ಕಳೆಯುವಂತಾಗಿದೆ. ಅಧಿಕಾರಿಗಳು ಈ ಅಕ್ರಮ ಕಲ್ಲುಗಣಿಯನ್ನು ತಡೆಯಲು ವಿಫ‌ಲರಾದರೆ ತೀವ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸುವ ಫ್ಲೆಕ್ಸ್‌ ಗಳನ್ನು ‘ನೊಂದ ಕುಳ ಗ್ರಾಮಸ್ಥರು’ ಹೆಸರಿನಲ್ಲಿ ಅಳವಡಿಸಲಾಗಿದೆ. 

ಸಮಸ್ಯೆಗಳ ಪರಿಹಾರಕ್ಕೆ ಸದಾಸಿದ್ಧ
ಸಾರ್ವಜನಿಕರಿಗೆ ತೊಂದರೆಯಾಗುವ ಉದ್ಯಮಗಳಿಗೂ ಗ್ರಾ.ಪಂ.ಅವಕಾಶ ನೀಡುವುದಿಲ್ಲ. ಕ್ರಶರ್‌ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಲೈಸೆನ್ಸ್‌ ನವೀಕರಣ ಮಾಡಿಲ್ಲ. ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸ್ಥಳೀಯಾಡಳಿತ ಸದಾ ಸಿದ್ಧವಿದೆ. ಗ್ರಾಮಸ್ಥರ ಎಲ್ಲ ನ್ಯಾಯಯುತ ಹೋರಾಟಗಳಿಗೂ ನಾವು ಸ್ಪಂದನೆ ನೀಡಿದ್ದೇವೆ.
– ಸುಧೀರ್‌ ಕುಮಾರ್‌ ಶೆಟ್ಟಿ
ಇಡ್ಕಿದು ಗ್ರಾ.ಪಂ. ಉಪಾಧ್ಯಕ್ಷ 

Advertisement

Udayavani is now on Telegram. Click here to join our channel and stay updated with the latest news.

Next