ಬೆಂಗಳೂರು: ಸರ್ಕಾರಿ ನೌಕರರೇ ನ್ಯಾಯಾಲಯದ ಆದೇಶ ಉಲ್ಲಂಘಿಸಿ ನಗರದಲ್ಲಿ ಫ್ಲೆಕ್ಸ್ ಅಳವಡಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೈಕೋರ್ಟ್‌ನಿಂದ 50-100 ಮೀ. ಅಂತರದಲ್ಲಿರುವ ಲೋಕೋಪಯೋಗಿ ಕಚೇರಿ ಆವರಣದಲ್ಲಿ ನಿಷೇಧಿತ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.
ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಅಧ್ಯಕ್ಷ ಷಡಕ್ಷರಿಗೆ ಶುಭ ಕೋರುವ ಭರದಲ್ಲಿ ಲೋಕೋಪಯೋಗಿ ನೌಕರರ ಸಂಘ ಕಾನೂನನ್ನೇ ಮರೆತಿದೆ. ಈ ಮೂಲಕ ಸಂಘ ಕೋರ್ಟ್ ಆದೇಶ ಉಲ್ಲಂಘಿಸಿ ಸಂಕಷ್ಟಕ್ಕೆ ಸಿಲುಕಿದೆ.
2018ರಿಂದ ರಾಜಧಾನಿಯಲ್ಲಿ ಫ್ಲೆಕ್ಸ್‌ಗಳ ಬಳಕೆ ನಿಷೇಧಿಸಿದ್ದು, ನಿಯಮ ಉಲ್ಲಂಘಿಸಿ ಫ್ಲೆಕ್ಸ್ ಅಳವಡಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಹೈಕೋರ್ಟ್ ಬಿಬಿಎಂಪಿಗೆ ಸೂಚಿಸಿದೆ. ಕರ್ನಾಟಕ ತೆರೆದ ಸ್ಥಳ ಸೌಂದರ್ಯ ಹಾನಿ ಕಾಯಿದೆ -1971 (ಕರ್ನಾಟಕ ಓಪನ್ ಪ್ಲೇಸ್ ಡಿಸ್‌ಫಿಗರ್ಮೆಂಟ್ ಆಕ್ಟ್ -1971) ಅನ್ವಯ ನಗರದಲ್ಲಿ ಫ್ಲೆಕ್ಸ್ ಅಳವಡಿಸಿ ಸಾರ್ವಜನಿಕ ಸ್ಥಳಗಳ ಸೌಂದರ್ಯ ಕೆಡಿಸಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಒಂದು ಲಕ್ಷ ರೂ. ದಂಡ ಹಾಕಲು ಮತ್ತು 6 ತಿಂಗಳ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.
ಹಾಗಾಗಿ ಲೋಕೋಪಯೋಗಿ ಇಲಾಖೆ ನೌಕರರ ಸಂಘದ ವಿರುದ್ಧ ದೂರು ದಾಖಲಿಸಿ, ಫ್ಲೆಕ್ಸ್ ಅಳವಡಿಸಿರುವ ಸಿಬ್ಬಂದಿಯನ್ನು ಇಲಾಖೆ ಅಮಾನತಿನಲ್ಲಿಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಒತ್ತಾಯಿಸಿದ್ದಾರೆ. ರಾಜಧಾನಿಯಲ್ಲಿ ಫ್ಲೆಕ್ಸ್‌ಗಳ ಹಾವಳಿಯಿಂದ ಸಾವಿರಾರು ಮರಗಳ ಕೊಂಬೆಗಳನ್ನು ಕತ್ತರಿಸಲಾಗಿತ್ತು. ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಿತ್ತು ಮತ್ತು ನಗರದ ಸೌಂದರ್ಯ ಹಾಳಾಗುತ್ತಿದೆ ಎಂಬ ಕಾರಣಕ್ಕೆ ಹೈಕೋರ್ಟ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ನಗರದಲ್ಲಿ ಫ್ಲೆಕ್ಸ್ ಅಳವಡಿಕೆಗೆ ಅವಕಾಶ ನೀಡದಂತೆ ಮತ್ತು ಈಗಾಗಲೇ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ಕೂಡಲೇ ತೆರವುಗೊಳಿಸುವಂತೆ ಬಿಬಿಎಂಪಿಗೆ ಸೂಚಿಸಿತ್ತು. ಬಳಿಕ ಬಿಬಿಎಂಪಿ ನಗರದೆಲ್ಲೆಡೆ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ, 450ಕ್ಕೂ ಅಧಿಕ ಕೇಸು ದಾಖಲಿಸಿತ್ತು.
ಕೋರ್ಟ್ ಆದೇಶ ಉಲ್ಲಂಘಿಸಿ ಫ್ಲೆಕ್ಸ್ ಅಳವಡಿಸಿರುವ ನೌಕರರನ್ನು ಕೆಲಸದಿಂದ ಅಮಾನತುಗೊಳಿಸಿ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರಿ ಕಚೇರಿ ಆವರಣಗಳಲ್ಲೇ ಕಾನೂನು ಅನುಷ್ಠಾನ ವಿಫಲವಾಗಿದೆ. ಇದಕ್ಕೆ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ.
-ಸಾಯಿದತ್ತ, ಸಾಮಾಜಿಕ ಕಾರ್ಯಕರ್ತ
ಕೋರ್ಟ್ ಆದೇಶ ಉಲ್ಲಂಘಿಸಿ ಫ್ಲೆಕ್ಸ್ ಅಳವಡಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ದೂರು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು.
-ಬಿ.ಎಚ್.ಅನಿಲ್‌ಕುಮಾರ್, ಬಿಬಿಎಂಪಿ ಆಯುಕ್ತ