Advertisement

ಅನುಮತಿ ಇಲ್ಲದೇ ಅಳವಡಿಸಿದ್ದ ಫ್ಲೆಕ್ಸ್‌ ತೆರವು

10:05 PM Jun 10, 2019 | Team Udayavani |

ಚಿಕ್ಕಬಳ್ಳಾಪುರ: ಜಿಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಪಿ.ಎನ್‌.ಕೇಶವರೆಡ್ಡಿ ರವರ 81ನೇ ಹುಟ್ಟುಹಬ್ಬದ ಪ್ರಯುಕ್ತ ಅನುಮತಿ ಇಲ್ಲದೇ ನಗರಾದ್ಯಂತ ಅಳವಡಿಸಲಾಗಿದ್ದ ಶುಭ ಕೋರುವ ಫ್ಲೆಕ್ಸ್‌ಗಳನ್ನು ಸೋಮವಾರ ಬೆಳಗ್ಗೆ ನಗರಸಭೆ ಪೌರ ಕಾರ್ಮಿಕರು ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ ಘಟನೆ ನಡೆಯಿತು.

Advertisement

ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ತಂದೆಯವರಾದ ಪಿ.ಎನ್‌.ಕೇಶವರೆಡ್ಡಿಗೆ 81ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರ ಅಭಿಮಾನಿಗಳು ಜಿಲ್ಲಾ ಕೇಂದ್ರದ ಬಿಬಿ ರಸ್ತೆ, ಎಂಜಿ ರಸ್ತೆ, ಗಂಗಮ್ಮ ಗುಡಿ ರಸ್ತೆ, ಬಜಾರ್‌ ರಸ್ತೆಗಳಲ್ಲಿ ಅನುಮತಿ ಪಡೆಯದೇ ನೂರಾರು ಫ್ಲೆಕ್ಸ್‌ಗಳನ್ನು ಹಾಕಿದ್ದರು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದರ ಜೊತೆಗೆ ಸಾರ್ವಜನಿಕರೊಬ್ಬರು ಈ ಬಗ್ಗೆ ಜಿಲ್ಲಾಡಳಿತ ಗಮನಕ್ಕೆ ತಂದಿದ್ದಾರೆ.

ಖಡಕ್‌ ಸೂಚನೆ: ಅನುಮತಿ ಇಲ್ಲದೇ ಹಾಗೂ ನಗರಸಭೆಗೆ ಶುಲ್ಕ ಪಾವತಿ ಮಾಡದೇ ನಗರದಲ್ಲೆ ಎಲ್ಲೆಂದರಲ್ಲಿ ಫ್ಲೆಕ್ಸ್‌ಗಳನ್ನು ಹಾಕುವ ಮೂಲಕ ನಗರದ ಸೌಂದರ್ಯಕ್ಕೆ ಧಕ್ಕೆ ತಂದಿದ್ದರ ಜೊತೆಗೆ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ಮಾಡಿ ಫ್ಲೆಕ್ಸ್‌ಗಳನ್ನು ಹಾಕಿದ್ದರ ಹಿನ್ನಲೆಯಲ್ಲಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರ ಖಡಕ್‌ ಎಚ್ಚರಿಕೆಯಿಂದ ಎಚ್ಚೆತ್ತಿಕೊಂಡು ನಗರಸಭೆಯ ಪೌರ ಕಾರ್ಮಿಕರು ಬೆಳಗ್ಗೆ 11:30ರ ಸಂದರ್ಭದಲ್ಲಿ ತೆರವುಗೊಳಿಸಿದರು.

70ಕ್ಕೂ ಹೆಚ್ಚು ಫ್ಲೆಕ್ಸ್‌ ತೆರವು: ನಗರದ ಬಿಬಿ ರಸ್ತೆಯ ಶನಿಮಹಾತ್ಮ ದೇವಾಲದಯ ಕಡೆಯಿಂದ ರಸ್ತೆ ವಿಭಜಕದ ಮಧ್ಯದಲ್ಲಿನ ವಿದ್ಯುತ್‌ ಕಂಬಗಳಿಗೆ ಅಳವಡಿಸಲಾಗಿದ್ದ ಫ್ಲೆಕ್ಸ್‌ಗಳನ್ನು ಸೇರಿದಂತೆ ಸುಮಾರು 70 ಕ್ಕೂ ಹೆಚ್ಚು ಫ್ಲೆಕ್ಸ್‌ಗಳನ್ನು ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಹಲವು ಬಾರಿ ನಗರಸಭೆ ಆಯುಕ್ತ ಉಮಾಕಾಂತ್‌ರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಈ ಬಗ್ಗೆ ಪೌರ ಕಾರ್ಮಿಕರೊಬ್ಬರು ಪ್ರತಿಕ್ರಿಯಿಸಿ ನಗರಸಭೆಯಿಂದ ಅನುಮತಿ ಪಡೆದಿಲ್ಲವಂತೆ, ಅದಕ್ಕೆ ಶುಲ್ಕವೂ ಪಾವತಿಸದ್ದರಿಂದ ನಮ್ಮ ಸಾಹೇಬರು ಹೇಳಿದ್ದಕ್ಕೆ ತೆರವುಗೊಳಿಸಿದ್ದೇವೆ ಎಂದರು. ಜಿಲ್ಲಾ ಕೇಂದ್ರದಲ್ಲಿ ಸಂಪೂರ್ಣವಾಗಿ ಫ್ಲೆಕ್ಸ್‌ಗಳ ಅಳವಡಿಕೆ ಮೇಲೆ ಸ್ಥಳೀಯ ನಗರಸಭೆ ನಿಷೇಧ ಹೇರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next