Advertisement
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹಿರಾತು ಫಲಕಗಳನ್ನು ತೆರವುಗೊಳಿಸಲು ಕೋರಿ ಸಮಾಜ ಸೇವಕ ಮಾಯ್ಗೇಗೌಡ ಮತ್ತಿತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಶುಕ್ರವಾರ ಹಂಗಾಮಿ ಮುಖ್ಯ ನ್ಯಾ. ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಎಸ್. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
Related Articles
Advertisement
ನೀತಿ ಅಂತಿಮಗೊಳಿಸಿ: ಜಾಹಿರಾತು ನೀತಿ ಮತ್ತು ಬೈಲಾ ಬಗ್ಗೆ ಬಿಬಿಎಂಪಿಯಿಂದ ಕೆಲವೊಂದು ಸ್ಪಷ್ಟನೆಗಳನ್ನು ಕೇಳಿ, ಅದನ್ನು ಜ.14ಕ್ಕೆ ಕಳಿಸಿಕೊಡಲಾಗಿದೆ ಎಂದು ಅಡ್ವೋಕೇಟ್ ಜನರಲ್ ಹೇಳಿದರು.
ಇನ್ನೆರಡು ದಿನಗಳಲ್ಲಿ ಸ್ಪಷ್ಟನೆಗಳನ್ನು ಸರ್ಕಾರಕ್ಕೆ ಸ್ಪಷ್ಟನೆಗಳನ್ನು ಕಳಿಸಿಕೊಡಲಾಗುವುದು ಎಂದು ಬಿಬಿಎಂಪಿ ಪರ ವಕೀಲರು ಭರವಸೆ ನೀಡಿದರು. ಎರಡು ವಾರಗಳಲ್ಲಿ ಜಾಹಿರಾತು ನೀತಿ ಅಂತಿಮಗೊಳಿಸಿ ಎಂದು ತಾಕೀತು ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿತು.
‘ಸೀತಾರಾಮ ಕಲ್ಯಾಣ’ ಪೋಸ್ಟರ್ ಪ್ರಸ್ತಾಪ
ಊರ್ವಶಿ ಚಿತ್ರಮಂದಿರದ ಪಕ್ಕದಲ್ಲಿನ ಪಾದಚಾರಿ ಮಾರ್ಗದ ಮೇಲೆ ನಿಖೀಲ್ ಕುಮಾರಸ್ವಾಮಿ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರದ ಪೋಸ್ಟರ್ ಹಾಕಿದ್ದನ್ನು ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ಶುಕ್ರವಾರ ಹೈಕೋರ್ಟ್‌ನಲ್ಲಿ ಪ್ರಸ್ತಾಪಿಸಿದರು. ವಿಚಾರಣೆ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯಪೀಠದ ಮುಂದೆ, ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ಪಾದಚಾರಿ ಮಾರ್ಗದ ಮೇಲೆ ಪೋಸ್ಟರ್ ಹಾಕಿರುವ ವಿಷಯ ಗಮನಕ್ಕೆ ತಂದರು. ”ಊರ್ವಶಿ ಚಿತ್ರ ಮಂದಿರಕ್ಕೆ ಹೊಂದಿಕೊಂಡಿರುವ ಪಾದಚಾರಿ ಮಾರ್ಗದ ಮೇಲೆ ಗುರುವಾರ ಬೆಳಿಗ್ಗೆ ನಿಖೀಲ್ ಕುಮಾರಸ್ವಾಮಿ ಅಭಿನಯದ ಚಿತ್ರದ ಪೋಸ್ಟರ್ ಹಾಕಲಾಗಿತ್ತು. ಆ ಬಗ್ಗೆ ಬಿಬಿಎಂಪಿಗೆ ವಾಟ್ಸಾಪ್ ಮೂಲಕ ದೂರು ನೀಡಲಾಗಿತ್ತು. ಗುರುವಾರ ಮಧ್ಯಾಹ್ನ ಅದನ್ನು ತೆರವುಗೊಳಿಸಿ, ಪಾಲಿಕೆ ಅಧಿಕಾರಿಗಳು ತಮಗೆ ಮಾಹಿತಿ ನೀಡಿದ್ದರು. ಆದರೆ ಶುಕ್ರವಾರ ಮತ್ತೆ ಅದೇ ಜಾಗದಲ್ಲಿ ಪೋಸ್ಟರ್ ಹಾಕಲಾಗಿದೆ. ಆ ಬಗ್ಗೆಯೂ ಪಾಲಿಕೆಗೆ ದೂರು ನೀಡಲಾಗಿದೆ”ಎಂದು ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.
ಹೈಕೋರ್ಟ್‌ಗೆ ಪ್ರಮಾಣ ಪತ್ರ
ಬೆಂಗಳೂರು: ನಗರದ ವ್ಯಾಪ್ತಿಯಲ್ಲಿ ಮಳೆ ನೀರು ಕಾಲುವೆಗಳಿಗೆ ಒಳಚರಂಡಿ ನೀರು ಹರಿದು ಹೋಗುವ 914 ಸ್ಥಳಗಳನ್ನು ಗುರುತಿಸಲಾಗಿದ್ದು, ಈ ಸ್ಥಳಗಳಲ್ಲಿ ಕಾಮಗಾರಿ ಕೈಗೊಳ್ಳಲು 76.55 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ರೂಪಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ನಗರದಲ್ಲಿ ಮಳೆ ನೀರು ಕಾಲುವೆಗಳ ಸಂರಕ್ಷಣೆ ಮತ್ತು ನಿರ್ವಹಣೆ ಕುರಿತು ಸಿಟಿಜನ್ ಆ್ಯಕ್ಷನ್ ಗ್ರೂಪ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯಪೀಠಕ್ಕೆ ಬೆಂಗಳೂರು ಜಲಮಂಡಳಿಯ ಮುಖ್ಯ ಇಂಜಿನಿಯರ್ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಮಳೆ ನೀರು ಕಾಲುವೆಗಳಿಗೆ ಒಳಚರಂಡಿ ನೀರು ಹರಿದು ಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಕೈಗೊಂಡಿರುವ ಕ್ರಮಗಳ ಬಗ್ಗೆ ಈವರೆಗೆ 10 ಕಾರ್ಯಪ್ರಗತಿಯ ವಸ್ತುಸ್ಥಿತಿ ವರದಿಗಳನ್ನು ಹೈಕೋರ್ಟ್‌ಗೆ ಸಲ್ಲಿಸಲಾಗಿದೆ. ಮಳೆ ನೀರು ಕಾಲುವೆಗಳಿಗೆ ಒಳಚರಂಡಿ ನೀರು ಹರಿದು ಹೋಗುವುದನ್ನು ಸಂಪೂರ್ಣವಾಗಿ ನಿಲ್ಲಿಸಲು ಜಲಮಂಡಳಿ ಬದ್ಧವಾಗಿದೆ. ಈ ನಿಟ್ಟಿನಲ್ಲಿ ತ್ವರಿತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.