ಚಿಕ್ಕಬಳ್ಳಾಪುರ: ಕ್ಷೌರಿಕರಿಗೆ, ಅಗಸರಿಗೆ ಹಾಗೂ ಕಾರ್ಮಿಕರಿಗೆ ಕೋವಿಡ್-19 ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಧನವನ್ನು ಡಿ.ಬಿ.ಟಿ ಮೂಲಕ ಅರ್ಹ ಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ ತಿಳಿಸಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ ಜಿಲ್ಲೆಯ ಕಾರ್ಮಿಕ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಡವರ ಪರವಾಗಿ ಕೆಲಸ ಮಾಡಬೇಕಾದರೆ ಸರ್ಕಾರಿ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ಕೋವಿಡ್-19 ತುರ್ತು ಸಂದರ್ಭದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಬಾರದು, ಸಾರ್ವಜನಿಕರು ಕೋವಿಡ್ 19 ಜೊತೆ ಜೊತೆಗೆ ಬದುಕುವುದನ್ನು ಕಲಿಯಬೇಕು ಎಂದರು.
ಲೋಪದೋಷ ಇರಬಾರದು: ಕೋವಿಡ್ ತುರ್ತು ಸಂದರ್ಭದಲ್ಲಿ ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಮೂಲಕ ಕೊಡುವ ಪರಿಹಾರ ಧನ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಹಾಗೂ ಬಡವರಿಗೆ ಕೊಡುವ ಸೌಲಭ್ಯಗಳಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಅಧಿಕಾರಿಗಳು ಕಾರ್ಯನಿರ್ವಹಿಸ ಬೇಕೆಂ ದರು. ಕೋವಿಡ್ 19 ಸಂದರ್ಭದಲ್ಲಿ ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಸರ್ಕಾರದ ಮಾರ್ಗಸೂಚಿಯಂತೆ ಕಾರ್ಮಿಕರಿಗೆ ಸೇವಾ ಸೌಕರ್ಯ ಕಲ್ಪಿಸಬೇಕು. ಕಾಲಕಾಲಕ್ಕೆ ಕಾರ್ಮಿ ಕರಿಗೆ ವೇತನ ಸೇರಿದಂತೆ ಮೂಲಭೂತ ಸೌಲಭ್ಯಗಳು ಸಿಗುವಂತೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು.
4.679 ಮಂದಿ ಅರ್ಜಿ ಸಲ್ಲಿಕೆ: ಜಿಲ್ಲಾಧಿಕಾರಿ ಆರ್.ಲತಾ ಮಾತನಾಡಿ, ಜಿಲ್ಲೆಯಲ್ಲಿ ಅಸಂಘಟಿತ ಕಾರ್ಮಿಕರಾದ ಕ್ಷೌರಿಕರು 2077 ಹಾಗೂ 2602 ಅಗಸರಿದ್ದು, ಈಗಾಗಲೇ ಪರಿಹಾರ ಧನಕ್ಕಾಗಿ ಒಟ್ಟು 4,679 ನೋಂದಣಿ ಆಗಿದ್ದಾರೆ. ಈಗಾಗಲೇ 661 ಕ್ಷೌರಿಕರು ಮತ್ತು 694 ಅಗಸರ ಅರ್ಜಿಗಳನ್ನು ಪುರಸ್ಕರಿಸಿ ಉಳಿದ ಅರ್ಜಿಗಳ ಪರಿಶೀಲನೆ ನಡೆಯುತ್ತಿದ್ದು, ಎರಡು ದಿನಗಳ ಒಳಗೆ ಪೂರ್ಣಗೊಳ್ಳುತ್ತದೆ.
ಯಾವು ದೇ ಕಾರಣಕ್ಕೂ ಯಾವೊಬ್ಬ ಕಾರ್ಮಿಕರಿಗೂ ಪರಿಹಾರ ಧನ ವಿತರಣೆಯಲ್ಲಿ ವಿಳಂಬವಾಗುವುದಿಲ್ಲ ಎಂದರು. ಸಭೆಯಲ್ಲಿ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಪಂ ಸಿಇಒ ಬಿ.ಫೌಜೀಯಾ ತರುನ್ನುಮ್, ಅಪರ ಜಿಲ್ಲಾಧಿಕಾರಿ ಆರತಿ, ಜಿಲ್ಲಾ ಕಾರ್ಮಿಕ ಅಧಿಕಾರಿ ವರಲಕ್ಷಿ ಸೇರಿದಂತೆ ಜಿಲ್ಲಾ ಮಟ್ಟದ ಕಾರ್ಮಿಕ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.