ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 2ನೇ ಹಂತದ ಮತದಾನ ಬಾಕಿ ಇರುವ ಹೊಸ್ತಿಲಲ್ಲೇ ಪ್ರಜ್ವಲಿಸಿರುವ ಪೆನ್ ಡ್ರೈವ್ ವಿವಾದ ಜೆಡಿಎಸ್ ಜತೆಗೆ ಬಿಜೆಪಿಯನ್ನೂ ಮುಜುಗರಕ್ಕೆ ಸಿಲುಕಿಸಿದೆ. ಆದರೆ ಇದು ವೈಯಕ್ತಿಕ ಪ್ರಕರಣವೆಂದು ಅಂತರ ಕಾಯ್ದುಕೊಳ್ಳಲು ಕೇಸರಿ ಪಾಳಯ ಮುಂದಾಗಿದೆ.
ಈ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರನ್ನೇ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಸಹಿತ ರಾಷ್ಟ್ರ ಮಟ್ಟದ ನಾಯಕರು ಬಿಜೆಪಿಯನ್ನು ಪ್ರಶ್ನೆ ಮಾಡತೊಡಗಿದ್ದರೆ, ರಾಜ್ಯಮಟ್ಟದ ನಾಯಕರು ಈಗ ಜೆಡಿಎಸ್ ಹಾಗೂ ದೇವೇಗೌಡರ ಕುಟುಂಬವನ್ನೇ ಗುರಿ ಮಾಡಿ ನಿರಂತರ ದಾಳಿ ನಡೆಸುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಒಂದು ರೀತಿ ಸಂಕಷ್ಟಕ್ಕೆ ಸಿಲುಕಿದೆ.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪ್ರಯಾಣ ಬೆಳೆಸುವುದಕ್ಕೆ ಕೇಂದ್ರ ಸರಕಾರವೇ ಸಹಾಯ ಮಾಡಿದೆ ಎಂದೂ ಕಾಂಗ್ರೆಸ್ ಆರೋಪಿಸಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಸಾಕಷ್ಟು ಅಂತರ ಕಾಯ್ದುಕೊಳ್ಳುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಹರ ಸಾಹಸ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ವಿಪಕ್ಷ ನಾಯಕ ಆರ್.ಅಶೋಕ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮೊದಲಾದವರು ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಪ್ರತಿ ಶಬ್ದವನ್ನೂ ಜಾಗರೂಕತೆಯಿಂದ ಪ್ರಯೋಗಿಸಿದ್ದಾರೆ. ಇದು ವ್ಯಕ್ತಿಗತ ವಿಚಾರವೆಂದು ಹೇಳುವ ಮೂಲಕ ಮೈತ್ರಿಕೂಟದ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ.
ಬಿಜೆಪಿ ಮೂಲಗಳ ಪ್ರಕಾರ, ಪ್ರಜ್ವಲ್ ವಿಚಾರದಲ್ಲಿ ಪ್ರಾರಂಭದಿಂದಲೂ ಪಕ್ಷ ಒಂದೇ ನಿಲುವು ತೆಗೆದುಕೊಂಡಿದೆ. ಹಾಸನ ಟಿಕೆಟ್ ನಮಗೆ ನೀಡಿ ಎಂದು ರಾಷ್ಟ್ರೀಯ ನಾಯಕರಿಗೆ ಮನವಿ ಮಾಡಿದ್ದೆವು. ಭವಿಷ್ಯದಲ್ಲಿ ಮುಜುಗರ ಸೃಷ್ಟಿಯಾಗುವಂಥ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ ಅಭ್ಯರ್ಥಿ ಬದಲಿಸಿ ಎಂದು ಕೋರಿದ್ದೆವು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡ ಒಂದು ಹಂತದಲ್ಲಿ ಈ ಪ್ರಸ್ತಾವವನ್ನು ಒಪ್ಪಿದ್ದರು. ಹಾಸನದ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರಿಂದಲೂ ಬದಲಿ ಅಭ್ಯರ್ಥಿ ಬೇಡಿಕೆ ಬಂದಿತ್ತು. ಹೀಗಾಗಿ ಪಕ್ಷದ ಮೇಲೆ ಈ ವಿಚಾರದಲ್ಲಿ ಗೂಬೆ ಕೂರಿಸುವ ಪ್ರಯತ್ನ ಫಲ ನೀಡುವುದಿಲ್ಲ ಎಂಬುದು ಬಿಜೆಪಿಯ ವಾದ. ಆದಾಗಿಯೂ ಎರಡನೇ ಹಂತದ ಮತದಾನದ ಮೇಲೆ ಈ ಬೆಳವಣಿಗೆ ಒಂದಿಷ್ಟು ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಆತಂಕದಿಂದ ಬಿಜೆಪಿ ಹೊರತಾಗಿಲ್ಲ.
ಎಚ್‌ಡಿಕೆ ಮೇಲುಗೈ?
ಈ ಬೆಳವಣಿಗೆಯಿಂದ ಜೆಡಿಎಸ್‌ನ ಕೌಟುಂಬಿಕ ರಾಜಕಾರಣದಲ್ಲಿ ಕುಮಾರಸ್ವಾಮಿ ಮೇಲುಗೈ ಸಾಧಿಸಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೊದಲಿನಿಂದಲೂ ಕುಮಾರಸ್ವಾಮಿಯವರ ರಾಜಕೀಯ ನಿರ್ಧಾರಗಳಿಗೆ ಭವಾನಿ ರೇವಣ್ಣ ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ. ಆದರೆ ಈಗ ರೇವಣ್ಣ ಹಾಗೂ ಪ್ರಜ್ವಲ್ ಇಬ್ಬರೂ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ದೇವೇಗೌಡರು ಹಾಗೂ ನಾವು ಪ್ರತ್ಯೇಕವಾಗಿ ವಾಸವಿದ್ದೇವೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ನಿರೀಕ್ಷಣ ಜಾಮೀನು ಪಡೆದು ರೇವಣ್ಣ ಕುಟುಂಬದಿಂದ ಅಂತರ ಕಾಯ್ದುಕೊಂಡಿದ್ದಾರೆ.