Advertisement

ರಾತ್ರಿ ಪಯಣದಲ್ಲಿ ಫ್ಲ್ಯಾಶ್‌ಬ್ಯಾಕ್‌

11:52 AM Oct 14, 2018 | Team Udayavani |

ಚಿತ್ರರಂಗದಲ್ಲಿ ಎಲ್ಲವೂ ಹೀಗೆ ಅಂತ ಹೇಳುವುದಕ್ಕಾಗಲ್ಲ. ಇಲ್ಲಿ ನಟರಾದವರು ನಿರ್ದೇಶಕರಾಗಿದ್ದಾರೆ, ನಿರ್ದೇಶಕರಾದವರು ನಟರಾಗಿದ್ದಾರೆ. ಆ ಸಾಲಿಗೆ ಈಗ ನಟ ರಾಕೇಶ್‌ ಅಡಿಗ ಸೇರಿದ್ದಾರೆ. “ಜೋಶ್‌’ ಮೂಲಕ ನಾಯಕರಾಗಿ ಗಾಂಧಿನಗರಕ್ಕೆ ಕಾಲಿಟ್ಟ ರಾಕೇಶ್‌ ಅಡಿಗ, “ನೈಟ್‌ ಔಟ್‌’ ಎಂಬ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಸುಮಾರು 13 ಚಿತ್ರಗಳಲ್ಲಿ ನಾಯಕರಾಗಿ ನಟಿಸಿ, ಅನುಭವ ಪಡೆದ ರಾಕೇಶ್‌ ಅಡಿಗ, ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement

ಕಾಲೇಜು ದಿನಗಳಲ್ಲೇ ರಂಗಭೂಮಿಯ ನಂಟು ಬೆಳೆಸಿಕೊಂಡಿದ್ದ ರಾಕೇಶ್‌ ಅಡಿಗ, ಆಗಲೇ ನಿರ್ದೇಶನದ ಕನಸು ಕಂಡವರು. ಆದರೆ, ಆಗಿದ್ದು ಮಾತ್ರ ಹೀರೋ. ಈಗ “ನೈಟ್‌ ಔಟ್‌’ ಮೂಲಕ ನಿರ್ದೇಶನದ ಕನಸು ನನಸಾಗಿದೆ. ಅಂದಹಾಗೆ, ಇದು ಮೂರು ಪಾತ್ರಗಳ ಸುತ್ತ ನಡೆಯುವ ಕಥೆ. ಕೇವಲ ಆರು ಗಂಟೆಯಲ್ಲಿ ಸಾಗುವ ಕಥೆಯಲ್ಲಿ ಇಬ್ಬರು ಬಾಲ್ಯದ ಗೆಳೆಯರ ಫ್ಲ್ಯಾಶ್‌ಬ್ಯಾಕ್‌ ಚಿತ್ರದ ಹೈಲೆಟ್‌.

ರಾತ್ರಿ ಸಮಯದಲ್ಲಿ ಇಬ್ಬರು ಗೆಳೆಯರು ಪ್ರಯಾಣ ಮಾಡುವಾಗ, ಇಬ್ಬರ ನಡುವಿನ ಮಾತುಕತೆ ಫ್ಲ್ಯಾಶ್‌ಬ್ಯಾಕ್‌ಗೆ ಹೋಗುತ್ತೆ. ಅಲ್ಲೊಬ್ಬ ಹುಡುಗಿಯ ಎಂಟ್ರಿಯಾಗುತ್ತೆ. ಅವಳು ಯಾರು, ಯಾಕೆ ಭೇಟಿಯಾದಳು, ಅವರು ಎಲ್ಲಿಗೆ ಪಯಣ ಬೆಳೆಸುತ್ತಾರೆ ಎಂಬುದೇ ಕಥೆಯ ತಿರುಳು. ಇದೊಂದು ಸಸ್ಪೆನ್ಸ್‌ ಮಾದರಿಯಲ್ಲೇ ಪ್ರೇಕ್ಷಕರನ್ನು ನೋಡಿಸಿಕೊಂಡು ಹೋಗುತ್ತೆ ಎಂಬುದು ನಿರ್ದೇಶಕರ ಮಾತು.

ಚಿತ್ರದಲ್ಲಿ ಭರತ್‌ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಆಟೋ ಚಾಲಕರಾಗಿ ನಟಿಸಿದ್ದಾರೆ. ಇನ್ನು, ಇದುವರೆಗೆ ಹಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದ ಅಕ್ಷಯ್‌, ಈ ಚಿತ್ರದಲ್ಲಿ ನಾಯಕನ ಗೆಳೆಯನಾಗಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಇವರಿಗೆ ಶ್ರುತಿ ಗೊರಾಡಿಯ ನಾಯಕಿಯಾಗಿ ನಟಿಸಿದ್ದು, ಅವರಿಲ್ಲಿ, ಹಳ್ಳಿಯಿಂದ ಬೆಂಗಳೂರಿಗೆ ಓದಲು ಬರುವ ಹುಡುಗಿಯಾಗಿ ನಟಿಸಿದ್ದಾರೆ. ಬೆಂಗಳೂರು, ಹೆಸರುಘಟ್ಟ, ಕನಕಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ನಾಲ್ಕು ಹಾಡುಗಳಿಗೆ ಸಮೀರ್‌ ಕುಲಕರ್ಣಿ ಸಂಗೀತ ನೀಡಿದ್ದಾರೆ. ಅರುಣ್‌.ಕೆ.ಅಲೆಕ್ಸಾಂಡರ್‌ ಅವರ ಛಾಯಾಗ್ರಹಣವಿದೆ. ರಿತ್ವಿಕ್‌ ಸಂಕಲನವಿದೆ. ಭಾಘರವ ನೃತ್ಯ ಸಂಯೋಜಿಸಿದ್ದಾರೆ. ಅಮೆರಿಕಾ ಕನ್ನಡಿಗರಾದ ನವೀನ್‌ಕೃಷ್ಣ, ಲಕ್ಷ್ಮೀ ನವೀನ್‌ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಫೆಬ್ರವರಿಯಲ್ಲಿ ಚಿತ್ರ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next