Advertisement

ಒಗ್ಗಟ್ಟಿನ ಕೊರತೆಯಿಂದ ಉದ್ಘಾಟನಾ ಕಾರ್ಯಕ್ರಮ ಫ್ಲಾಪ್‌

07:33 AM Nov 03, 2017 | |

ಬೆಂಗಳೂರು: ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಗೆ ಲಕ್ಷಾಂತರ ಜನರನ್ನು ಸೇರಿಸಿ ರಾಜ್ಯ ಸರ್ಕಾರದ ವಿರುದ್ಧ ಭಾರೀ ಹೋರಾಟಕ್ಕೆ ಚಾಲನೆ ನೀಡಬೇಕೆಂಬ ರಾಜ್ಯ ಬಿಜೆಪಿಯ ಕಾರ್ಯಕ್ರಮ ಗುರುವಾರ ಉದ್ಘಾಟನೆ ಕಾರ್ಯಕ್ರಮದ ಮಟ್ಟಿಗೆ ಫ್ಲಾಪ್‌ ಶೋ ಆಗಿಹೋಯಿತು. ಇದರಿಂದಾಗಿ ನಾಯಕರಲ್ಲಿ ಒಗ್ಗಟ್ಟಿಲ್ಲದಿದ್ದರೆ ಕಾರ್ಯಕರ್ತರು ಸ್ಪಂದಿಸುವುದಿಲ್ಲ ಎಂಬ ಸತ್ಯ ಮತ್ತೂಮ್ಮೆ ಬಹಿರಂಗವಾಯಿತು.

Advertisement

ಅಷ್ಟೇ ಅಲ್ಲ, ಈ ಯಾತ್ರೆ ಮೂಲಕ ರಾಜ್ಯ ಬಿಜೆಪಿ ಮತ್ತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಕೆಂಗಣ್ಣಿಗೆ ಗುರಿಯಾಯಿತು. ಕಾರ್ಯಕ್ರಮಕ್ಕೆ ಮೂರು ಲಕ್ಷ ಜನ ಸೇರಿಸುವ ಭರವಸೆ ನೀಡಲಾಗಿತ್ತು. ಆದರೆ, ಅದರ ಅರ್ಧದಷ್ಟೂ ಜನ ಇಲ್ಲದ ಬಗ್ಗೆ ವೇದಿಕೆಯಲ್ಲೇ ಆಕ್ಷೇಪ ಎತ್ತಿದ ಅಮಿತ್‌ ಶಾ, ರಾಜ್ಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು. ಪರಿವರ್ತನಾ ಯಾತ್ರೆಗೆ ರಾಜ್ಯದ (ಉತ್ತರ ಕರ್ನಾಟಕ ಹೊರತುಪಡಿಸಿ )17 ಜಿಲ್ಲೆಗಳ 114 ವಿಧಾನಸಭಾ ಕ್ಷೇತ್ರಗಳಿಂದ ಸುಮಾರು ಒಂದು ಲಕ್ಷ ಬೈಕ್‌ಗಳಲ್ಲಿ ಎರಡು ಲಕ್ಷ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸುಮಾರು 3 ಲಕ್ಷ ಮಂದಿ ಸೇರಲಿದ್ದಾರೆಂದು ನಾಯಕರು ಘೋಷಿಸಿದ್ದರು. ಆದರೆ, ಗುರುವಾರ 25 ಸಾವಿರದಷ್ಟು ದ್ವಿಚಕ್ರ ವಾಹನಗಳಲ್ಲೂ ಕಾರ್ಯಕರ್ತರು ಬಂದಿರಲಿಲ್ಲ. ಅಲ್ಲದೆ, ನೆರೆದಿದ್ದ ಕಾರ್ಯಕರ್ತರ ಸಂಖ್ಯೆ ಒಂದು ಲಕ್ಷವನ್ನೂ ತಲುಪಲಿಲ್ಲ.

ಜನರನ್ನು ಕರೆತರಲು ಹೊರಟ ಗೋಯೆಲ್‌:
ಕಾರ್ಯಕರ್ತರಿಲ್ಲದೆ ಕುರ್ಚಿಗಳು ಖಾಲಿಯಾಗಿದ್ದರಿಂದ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಶುರುವಾಗಿದ್ದು 12.30ಕ್ಕೆ. ಎಲ್ಲಾ ಕಾರ್ಯಕರ್ತರು ವೇದಿಕೆ ಮುಂದಿನ ಆಸನಗಳಲ್ಲಿ ಕುಳಿತುಕೊಳ್ಳಬೇಕೆಂದು ಮುಖಂಡರು ಮನವಿ ಮಾಡಿಕೊಳ್ಳುತ್ತಿದ್ದರೂ ಬಿಸಿಲಿನ ಝಳಕ್ಕೆ ಯಾರೂ ಕುರ್ಚಿಗಳತ್ತ ಮುಖ ಮಾಡಲಿಲ್ಲ. ರಾಜ್ಯ ನಾಯಕರು ಮಾತು ಆರಂಭಿಸಿದರೂ ಕುರ್ಚಿಗಳು ಖಾಲಿ ಯಾಗಿಯೇ ಇದ್ದವು. ಅಮಿತ್‌ ಶಾ ವೇದಿಕೆ ಏರಿದಾಗಲೂ ಅದೇ ಪರಿಸ್ಥಿತಿ. ಇದನ್ನು ಗಮನಿಸಿದ ಶಾ ಜತೆ ವೇದಿಕೆಗೆ ಬಂದಿದ್ದ ರಾಜ್ಯ ಚುನಾವಣಾ  ಸಹ ಉಸ್ತುವಾರಿ ಪಿಯೂಷ್‌ ಗೋಯೆಲ್‌ ಅವರು ವೇದಿಕೆ ಮೇಲಿದ್ದ ಅಶೋಕ್‌, ಅರವಿಂದ ಲಿಂಬಾವಳಿ, ಸಿ.ಟಿ.ರವಿ ಮತ್ತಿತರ ಕೆಲವು ಪ್ರಮುಖರನ್ನು ಕರೆದುಕೊಂಡು ವೇದಿಕೆ ಇಳಿದು ಜನ ನಿಂತಿದ್ದ ಮರದ ನೆರಳಿನ ಕಡೆ ನಡೆದು ಅವರನ್ನು ವೇದಿಕೆಯ ಮುಂಭಾಗ ಕಳುಹಿಸುವ ಪ್ರಯತ್ನ ಮಾಡಿದರು.

ಈ ಮಧ್ಯೆ ವೇದಿಕೆಯಲ್ಲಿ ಕುಳಿತೇ ಅಮಿತ್‌ ಶಾ ಅವರು ಯಡಿಯೂರಪ್ಪ, ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್‌, ಕೇಂದ್ರ ಸಚಿವ ಅನಂತಕುಮಾರ್‌ ಅವರೊಂದಿಗೆ ಜನ ಕಡಿಮೆ ಸಂಖ್ಯೆಯಲ್ಲಿರುವ ಬಗ್ಗೆ  ಚರ್ಚಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅಮಿತ್‌ ಶಾ ಅವರ ನೀರಸ ಭಾಷಣವೂ ಅವರಲ್ಲಿದ್ದ ಬೇಸರವನ್ನು ತೋರಿಸಿಕೊಟ್ಟಿತು. 

ಆಂತರಿಕ ಅಸಮಾಧಾನವೇ ಕಾರಣ: ತಮ್ಮ ಘೋಷಣೆ 
ಹುಸಿಯಾದ ಬಗ್ಗೆ ನಾಯಕರು, ಕಾಂಗ್ರೆಸ್‌ ಸರ್ಕಾರ ಬೈಕ್‌ ರ್ಯಾಲಿಯಲ್ಲಿ ಬರುವವರನ್ನು ದಾರಿ ಮಧ್ಯೆ ಅಡ್ಡಗಟ್ಟಿದೆ ಎನ್ನುವ ಮೂಲಕ ಆರಂಭದಲ್ಲೇ ನೀರೀಕ್ಷಣಾ ಜಾಮೀನು ಪಡೆಯಲು ಯತ್ನಿಸಿದರಾದರೂ ನಿರೀಕ್ಷೆ ಹುಸಿಯಾಗಲು ಪಕ್ಷದ ಆಂತರಿಕ ಅಸಮಾಧಾನವೇ ಕಾರಣ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬೆಂಗಳೂರಿನ ಉದ್ಘಾಟನಾ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿಯನ್ನು ಮಾಜಿ ಡಿಸಿಎಂ ಆರ್‌.ಅಶೋಕ್‌ ವಹಿಸಿಕೊಂಡಿದ್ದರೂ ಕಾರ್ಯಕ್ರಮದ ವೇದಿಕೆಯನ್ನು ಯಾತ್ರೆಯ ಸಂಚಾಲಕಿ ಶೋಭಾ ಕರಂದ್ಲಾಜೆ
ಆವರಿಸಿಕೊಂಡರು. ಅಶೋಕ್‌ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್‌ ಅವರಿಗೂ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಗಲಿಲ್ಲ. 

Advertisement

ಸಿದ್ಧತಾ ಕಾರ್ಯಕ್ರಮದಿಂದ ದೂರ: ಶೋಭಾ ಕರಂದ್ಲಾಜೆ ಅವರನ್ನು ಯಾತ್ರೆಯ ಸಂಚಾಲಕಿ ಎಂದು ಘೋಷಿಸಿದಾಗಲೇ ಕೆಲವರು ಅತೃಪ್ತಿ ವ್ಯಕ್ತಪಡಿಸಿದ್ದರು. ಈ ಅತೃಪ್ತಿಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅಶೋಕ್‌ ಅವರಿಗೆ ಬೆಂಗಳೂರು ಸಮಾರಂಭದ ಜವಾಬ್ದಾರಿ ವಹಿಸಲಾಗಿತ್ತಾದರೂ ಅದು ಶಮನವಾಗಿರಲಿಲ್ಲ. ಆದರೂ ಯಡಿಯೂರಪ್ಪ ಈ ಬಗ್ಗೆ ಗಮನಹರಿಸದ ಕಾರಣ ಸಂಘಟನಾ ಚತುರ ಬಿ.ಎಲ್‌.ಸಂತೋಷ್‌ ಸೇರಿ ಅನೇಕ ಮುಖಂಡರು ಸಿದ್ಧತಾ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next