ಬೆಂಗಳೂರು: ಹಲವು ವಿವಾದಗಳ ಬಳಿಕ ಚಾಮರಾಜಪೇಟೆ ಮೈದಾನದಲ್ಲಿ ಇಂದು ಬೆಳಿಗ್ಗೆ ಎಂಟು ಗಂಟೆಗೆ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿಲಾಯಿತು.
ಇದೇ ಪ್ರಥಮ ಬಾರಿಗೆ ಈ ಮೈದಾನದಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಧ್ವಜಾರೋಹಣವನ್ನು ಉಪವಿಭಾಗಾಧಿಕಾರಿಗಳಾದ ಡಾ.ಎಂ. ಜಿ. ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಪಿ.ಸಿ. ಮೋಹನ್, ಶಾಸಕರಾದ ಜಮೀರ್ ಅಹಮ್ಮದ್, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ ಆಯುಕ್ತ ಲಕ್ಮಣ ಲಿಂಬರಗಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಗಂಗಾವತಿ ಭಾಗದಲ್ಲಿ ನಡೆಯಿತು ಎರಡು ಸ್ವಾತಂತ್ರ್ಯ ಹೋರಾಟ
ಧ್ವಜಾರೋಹಣ ನಂತರ ರಾಷ್ಟ್ರ ಗೀತೆ ಮೊಳಗಿದುದು ನೆರೆದಿದ್ದ ಸ್ಥಳೀಯ ಸಾರ್ವಜನಿಕರು ಪುಳಕಿತರಾದರು. ರಾಷ್ಟ್ರ ಗೀತೆ ನಂತರ ಬೊಲೊ ಭಾರತ್ ಮಾತಾಕಿ ಜೈ ಘೋಷಣೆ ಮುಗಿಲು ಮುಟ್ಟಿತು. ಧ್ವಜಾರೋಹಣ ಅತ್ಯಂತ ಶಾಂತಿಯುತವಾಗಿ ನೆರವೇರಿತು. ಐತಿಹಾಸಿಕ ಧ್ವಜಾರೋಹಣಕ್ಕೆ ಚಾಮರಾಜಪೇಟೆಯ ಸಾರ್ವಜನಿಕರು ಸಾಕ್ಷಿಯಾದರು.
ಚಾಮರಾಜಪೇಟೆ ಸರ್ಕಾರಿ ಶಾಲಾ ಮಕ್ಕಳು ವಿವಿಧ ದೇಶ ಭಕ್ತಿ ಕುರಿತ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. 9 ನೇ ತರಗತಿಯ ಸಿಂಚನ ಮತ್ತು ತಂಡ ಒನಕೆ ಓಬವ್ವ ಕಿರು ನಾಟಕ ಪ್ರದರ್ಶನ ಮಾಡಿದರು. ಮಕ್ಕಳು ವಂದೇ ಮಾತರಂ ಗೀತೆಗೆ ನೃತ್ಯ ಮಾಡಿದರು.