Advertisement

ಧ್ವಜ ತೆರವು ವಿವಾದ: ಆಯೋಗಕ್ಕೆ ನೋಟಿಸ್‌

06:46 AM Mar 13, 2019 | Team Udayavani |

ಬೆಂಗಳೂರು: 2015ರಲ್ಲಿ ಬಿಬಿಎಂಪಿ ಚುನಾವಣೆ ವೇಳೆ ಮತದಾನದ ದಿನ ನಗರದ ಭಾರತೀಯ ಜನತಾ ಪಕ್ಷದ ಕಚೇರಿ ಮುಂದಿರುವ ಪಕ್ಷದ ಧ್ವಜ ಹಾಗೂ ಚಿಹ್ನೆ ತೆರವುಗೊಳಿಲು ನೋಟಿಸ್‌ ನೀಡಿದ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ.

Advertisement

ಈ ಕುರಿತಂತೆ ಭಾರತೀಯ ಜನತಾಪಕ್ಷ ಸಲ್ಲಿಸಿದ್ದ ಮೇಲ್ಮನವಿಯು ನ್ಯಾ. ರವಿಮಳಿ ಮಠ ಹಾಗೂ ನ್ಯಾ. ಎಸ್‌.ಜಿ. ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಆಯುಕ್ತರು ಹಾಗೂ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವಾರ್ಡ್‌ ಸಂಖ್ಯೆ 64, 65, 66 ಹಾಗೂ 76ರ ಚುನಾವಣಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?: 2015ರಲ್ಲಿ ನಡೆದ ಬಿಬಿಎಂಪಿ ಚುನಾವಣೆಗೆ ಮಲ್ಲೇಶ್ವರ 11ನೇ ಅಡ್ಡರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯ ಎದುರಿನ ಕೋದಂಡರಾಮಪುರ ಸರ್ಕಾರಿ ಶಾಲೆಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಶಾಲೆಯು ಪಕ್ಷದ ಕಚೇರಿಯ 100 ಮೀಟರ್‌ ವ್ಯಾಪ್ತಿಯಲ್ಲಿ ಬರುವುದರಿಂದ ಮತಗಟ್ಟೆಯನ್ನು ಬೇರೆ ಕಡೆ ಸ್ಥಳಾಂತರಿಸಬೇಕು ಎಂದು ಬಿಜೆಪಿ ಕಾರ್ಯದರ್ಶಿ ಚುನಾವಣಾಧಿಕಾರಿಗೆ ಮನವಿ ಸಲ್ಲಿಸಿದ್ದರು.

ಆದರೆ, ಮನವಿ ಪರಿಗಣಿಸುವ ಬದಲು, ಪಕ್ಷದ ಕಚೇರಿಯ ಮುಂದಿರುವ ಧ್ವಜ ಮತ್ತು ಚಿನ್ಹೆಯನ್ನು ತೆರವುಗೊಳಿಸುವಂತೆ ಚುನಾವಣಾ ಆಯೋಗ 2015ರ ಆ.16ರಂದು ನೋಟಿಸ್‌ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್‌ ಏಕಸದಸ್ಯ ನ್ಯಾಯಪೀಠ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next