Advertisement

ಮೀನುಗಾರರ ಸಾಲಮನ್ನಾ ಗೊಂದಲ ಸರಿಪಡಿಸಿ

10:25 AM Feb 14, 2020 | Lakshmi GovindaRaj |

ಬೆಂಗಳೂರು: ಕರಾವಳಿಯ 27 ಸಾವಿರ ಮಹಿಳಾ ಮೀನುಗಾರರು ಬ್ಯಾಂಕಿನಲ್ಲಿ ಸುಸ್ತಿದಾರರಾಗಿದ್ದು ಅವರ ಸಮಸ್ಯೆ ಬಗೆಹರಿಸುವುದು, ಮೀನುಗಾರರ ಸಾಲಮನ್ನಾ ಯೋಜನೆಯ ಗೊಂದಲ ನಿವಾರಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರಾವಳಿ ಮೀನುಗಾರರ ನಿಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.

Advertisement

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ, ಮಲ್ಪೆ ಮೀನುಗಾರರ ಸಂಘ, ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ ಸೇರಿದಂತೆ ವಿವಿಧ ಮೀನುಗಾರರ ಸಂಘಟನೆಗಳು ಕರಾವಳಿ ಕರ್ನಾಟಕ ಮೀನುಗಾರರ ಮುಖಂಡ ಡಾ.ಜಿ.ಶಂಕರ್‌ ಅವರ ನೇತೃತ್ವದಲ್ಲಿ ಮುಖ್ಯ ಮಂತ್ರಿಗೆ ಬುಧವಾರ ನಗರದ ರೇಸ್‌ಕೋರ್ಸ್‌ ರಸ್ತೆಯ ಶಕ್ತಿಭವನದಲ್ಲಿ ಮನವಿ ಸಲ್ಲಿಸಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್‌, ಲಾಲಾಜಿ ಆರ್‌.ಮೆಂಡನ್‌, ದ.ಕ.ಮೋಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್‌, ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಕೃಷ್ಣ ಸುವರ್ಣ ಸೇರಿದಂತೆ ಮೀನುಗಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಲಾ 25 ಲಕ್ಷ ಪರಿಹಾರಕ್ಕೆ ಮನವಿ: ಮಲ್ಪೆಯ ಸುವರ್ಣ ತ್ರಿಭುಜ ಬೋಟು, ಆಳ ಸಮುದ್ರದಲ್ಲಿ ಕಣ್ಮರೆಯಾಗಿ, ಅದರೊಳಗಿದ್ದ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ ಸರ್ಕಾರರಿಂದ ತಲಾ 25 ಲಕ್ಷ ರೂ.ಗಳ ಪರಿಹಾರವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಬೋಟಿನ ವಿಮಾ ಮೊತ್ತಕ್ಕೆ ಸಂಬಂಧಿ ಸಿದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ನಿಯೋಗ ಮನವಿ ಸಲ್ಲಿಸಿದೆ.

ಪ್ರಮುಖ ಬೇಡಿಕೆಗಳು
* ಮಹಿಳಾ ಮೀನುಗಾರರಿಗೆ ಸಾಲ ಮಂಜೂರು ಮಾಡುವಾಗ ಕೈಗೊಂಡ ಮಾನದಂಡವನ್ನೇ ಅನುಸರಿಸಿ ಸಾಲಮನ್ನಾ ಯೋಜನೆಗಳನ್ನು ಕೈಗೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಘೋಷಣೆಯಾದ ಸಾಲಮನ್ನಾವನ್ನು ಸಹಕಾರಿ ಬ್ಯಾಂಕ್‌ಗೂ ವಿಸ್ತರಿಸಬೇಕು.

Advertisement

* ಕಳೆದ ಐದು ತಿಂಗಳಿಂದ ಮೀನುಗಾರಿಕೆಗೆ ಬಳಸುವ ಡೀಸೆಲ್‌ ಸಬ್ಸಿಡಿ ಮೊತ್ತ ಮೀನುಗಾರರ ಬ್ಯಾಂಕ್‌ ಖಾತೆಗೆ ಜಮಾ ಆಗದೇ ಇರುವುದರಿಂದ ಮೀನುಗಾರರು ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ತಿಂಗಳ 5ನೇ ತಾರೀಕಿಗೂ ಮುಂಚಿತವಾಗಿ ಮೀನುಗಾರರ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಹಣ ಜಮಾ ಮಾಡುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು.

* ತಜ್ಞರ ಸಮಿತಿ ರಚಿಸಿ ಕರಾವಳಿ ಮತ್ತು ಒಳನಾಡು ಮೀನುಗಾರಿಕೆಗೆ ಸಂಬಂಧಪಟ್ಟ ಕಟ್ಟುನಿಟ್ಟಾದ ಸಮಗ್ರ ಹೊಸ ನೀತಿ ರೂಪಿಸಬೇಕು. ಮತ್ಸಾéಶ್ರಯ ಯೋಜನೆಯಡಿ ಕಳೆದ ಎರಡು ವರ್ಷಗಳಿಂದ ಮೀನುಗಾರರಿಗೆ ಮನೆ ಮಂಜೂರಾಗದೆ ಮೀನುಗಾರರು ವಸತಿರಹಿತರಾಗಿದ್ದಾರೆ. ಕೂಡಲೇ ಮತ್ಸಾéಶ್ರಯ ಮನೆಗಳನ್ನು ಮಂಜೂರು ಮಾಡಬೇಕು.

* ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಿಡುಗಡೆಯಾಗದೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕೂಡಲೇ ಕಾಮಗಾರಿಗಳ ಮರು ಚಾಲನೆಗೆ ಕ್ರಮ ತೆಗೆದುಕೊಳ್ಳಬೇಕು.

* ಗಂಗಾಮತಸ್ಥ ಹಾಗೂ 39 ಉಪಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಬೇಕು ಎಂಬ ಪ್ರಸ್ತಾವನೆ ಸಂಬಂಧ ಕೇಂದ್ರಕ್ಕೆ ಒತ್ತಡ ಹೇರಬೇಕು.

* ಮಂಗಳೂರು ಮೀನುಗಾರಿಕಾ ಕಾಲೇಜಿನಲ್ಲಿ ಕನಿಷ್ಠ 10 ಜನರಿಗೆ ಮೀನುಗಾರಿಕೆ ವಿಷಯದಲ್ಲಿ ಪದವಿಗೆ ಮೀಸಲಾತಿ ನೀಡಬೇಕು.

* ಮೀನುಗಾರರ ಸಹಕಾರಿ ಸಂಘಗಳ ಪುನಶ್ಚೇತನಕ್ಕೆ ವಿಶೇಷ ಅನುದಾನ ಘೋಷಣೆ ಮಾಡಬೇಕು.

* ಒಣಮೀನು ವ್ಯಾಪಾರಸ್ಥರಿಗೆ ಕೇಂದ್ರ ಪುರಸ್ಕೃತ ಯೋಜನೆಗಳಂತೆ ಸೋಲಾರ್‌ ಡ್ರಯರ್‌ ಖರೀದಿಸಲು ವಿಶೇಷ ಸಹಾಯಧನ ನೀಡಬೇಕು. ಮೀನುಗಾರರಿಗೆ ನೀಡುವ ಡೀಸೆಲ್‌ನ ರಸ್ತೆ ಕರ ಮನ್ನಾ ಮಾಡಬೇಕು.

* ಎಲ್ಲಾ ಬಂದರು ಹಾಗೂ ಬ್ರೇಕ್‌ ವಾಟರ್‌ ನಿರ್ಮಾಣ, ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು. ಯಾಂತ್ರಿಕೃತ ಮೀನುಗಾರಿಕೆ ದೋಣಿಗೆ ಉಪಯೋಗಿಸುವ ಕರರಹಿತ ಡೀಸೆಲ್‌ ಮಿತಿಯಿಂದ ದಿನಕ್ಕೆ 300 ಲೀ.ನಿಂದ 500 ಲೀ.ಗೆ ಹೆಚ್ಚಿಸಬೇಕು. ನಾಡದೋಣಿ ಮೀನುಗಾರರಿಗೆ ಎಂಜಿನ್‌ ಸಬ್ಸಿಡಿ ನೀಡಿ, ಪ್ರತಿ ಪರ್ಮಿಟ್‌ಗೆ 400 ಲೀ.ಸೀಮೆ ಎಣ್ಣೆ ನೀಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next