Advertisement

ಉತ್ತರದಿಂದ ಐವರಿಗೆ ಮಾತ್ರ ಸಂಸದೆ ಭಾಗ್ಯ

01:50 AM Mar 17, 2019 | |

ಹುಬ್ಬಳ್ಳಿ: ಲೋಕಸಭೆ ಚುನಾವಣಾ ಇತಿಹಾಸದ 69 ವರ್ಷಗಳಲ್ಲಿ ಉತ್ತರ ಕರ್ನಾಟಕದ 12 ಲೋಕಸಭಾ ಕ್ಷೇತ್ರಗಳಿಂದ ಇಲ್ಲಿವರೆಗೆ ಸೋನಿಯಾ ಗಾಂಧಿ ಸೇರಿ ಕೇವಲ ಐವರು ಮಹಿಳೆಯರು ಮಾತ್ರ ಆಯ್ಕೆ ಯಾಗಿದ್ದಾರೆ. ಸುಮಾರು 8 ಕ್ಷೇತ್ರಗಳಲ್ಲಿ ಇದುವ ರೆಗೂ ಒಬ್ಬರೇ ಒಬ್ಬರು ಮಹಿಳೆ ಆಯ್ಕೆಯಾಗಿಲ್ಲ. ಲೋಕಸಭೆಗೆ ಆಯ್ಕೆಯಾದ ಐವರು ಮಹಿಳೆಯರಲ್ಲಿ ನಾಲ್ವರು ಕೇಂದ್ರದಲ್ಲಿ ಸಚಿವರಾಗಿದ್ದುದು ವಿಶೇಷ. ಐವರ ಪೈಕಿ ಮೂವರು ಮುಂಬೈ ಕರ್ನಾಟಕ ಭಾಗದವರಾಗಿದ್ದರೆ, ಇಬ್ಬರು ಹೈದರಾಬಾದ್‌ ಕರ್ನಾಟಕ ಭಾಗದಿಂದ ಆಯ್ಕೆಯಾಗಿದ್ದರು. ಇದರಲ್ಲಿ ನಾಲ್ವರು ಕಾಂಗ್ರೆಸ್‌ನಿಂದ ಆಯ್ಕೆಯಾದರೆ, ಒಬ್ಬರು ಮಾತ್ರ ಜನತಾದಳದಿಂದ ಆಯ್ಕೆಯಾದವರು. ಲೋಕಸಭೆ ಹಾಗೂ ವಿಧಾನಸಭೆಗಳಲ್ಲೂ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕೆಂಬ ಬಗ್ಗೆ ದೊಡ್ಡ ಚರ್ಚೆ, ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಆದರೆ, ಲೋಕಸಭೆ ವಿಚಾರಕ್ಕೆ ಬಂದರೆ ಉತ್ತರ ಕರ್ನಾಟಕದಲ್ಲಿಮಹಿಳೆಯರಿಗೆ ಅತ್ಯಲ್ಪ ಅವಕಾಶ ದೊರೆತಿದೆ ಎಂದೇ ಹೇಳಬಹುದು.

Advertisement

ರಾಜ್ಯದ ಮೊದಲ ಸಂಸದೆ 

ಚಿಕ್ಕೋಡಿ ಕ್ಷೇತ್ರದಿಂದ ರತ್ನಮಾಲಾ ಸವಣೂರು, ಧಾರವಾಡ ಕ್ಷೇತ್ರದಿಂದ ಸರೋಜಿನಿ ಮಹಿಷಿ, ಉತ್ತರ ಕನ್ನಡ ಕ್ಷೇತ್ರದಿಂದ ಮಾರ್ಗರೇಟ್‌ ಆಳ್ವಾ, ಬಳ್ಳಾರಿ ಕ್ಷೇತ್ರದಿಂದ ಬಸವರಾಜೇಶ್ವರಿ ಹಾಗೂ ಸೋನಿಯಾ ಗಾಂಧಿ ಲೋಕಸಭೆಗೆ ಆಯ್ಕೆಯಾದವರು. ಧಾರವಾಡ ಲೋಕಸಭಾ ಕ್ಷೇತ್ರ ಈ ಹಿಂದೆ ಧಾರವಾಡ ಉತ್ತರ ಕ್ಷೇತ್ರವಾಗಿತ್ತು. ಈ ಕ್ಷೇತ್ರದಿಂದ ಸರೋಜಿನಿ ಮಹಿಷಿ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಸಂಸದೆ ಎಂಬ ಕೀರ್ತಿ ಹೊಂದಿದ್ದಾರೆ. 1962ರಿಂದ 1977ರವರೆಗೆ ಸರೋಜಿನಿ ಮಹಿಷಿ ಸತತವಾಗಿ 4 ಬಾರಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 1983ರಲ್ಲಿ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆಯಾಗಿದ್ದರು. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು ನೀಡುವ ವಿಚಾರವಾಗಿ ಸರೋಜಿನಿ ಮಹಿಷಿ ನೇತೃತ್ವದ ವರದಿ ಇಂದಿಗೂ ಚರ್ಚೆಯಲ್ಲಿದೆ.

ಚಿಕ್ಕೋಡಿ ಕ್ಷೇತ್ರದಿಂದ 1996ರಲ್ಲಿ ಜನತಾದಳದಿಂದ ರತ್ನಮಾಲಾ ಸವಣೂರು ಲೋಕಸಭೆಗೆ ಆಯ್ಕೆಯಾಗಿದ್ದರು. ಇದೇ ಕ್ಷೇತ್ರದಲ್ಲಿ ಸತತವಾಗಿ ಏಳು ಬಾರಿ ಗೆದ್ದು ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದ ಬಿ.ಶಂಕರಾನಂದ ಅವರನ್ನು 1996ರ ಚುನಾವಣೆಯಲ್ಲಿ ಸೋಲಿಸಿದ್ದ ರತ್ನಮಾಲಾ ಸವಣೂರು, ಐ.ಕೆ.ಗುಜ್ರಾಲ್‌ ಸರ್ಕಾರದಲ್ಲಿ ಸಹಾಯಕ ಸಚಿವರಾಗಿದ್ದರು. ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಸವರಾಜೇಶ್ವರಿ 1984ರಿಂದ 1991ರವರೆಗೆ ಸತತವಾಗಿ ಮೂರು ಬಾರಿ ಲೋಕಸಭೆಗೆ ಆಯ್ಕೆ ಯಾಗಿ ದ್ದರು. ಪಿ.ವಿ. ನರಸಿಂಹ ರಾವ್‌ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದಿಟಛಿ ಸಹಾಯಕ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಹೈದರಾಬಾದ ಕರ್ನಾಟಕ ಭಾಗದಿಂದ ಲೋಕಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಎಂಬ ಕೀರ್ತಿಯೂ ಇವರದ್ದಾಗಿದೆ.

ಸೋನಿಯಾ ಗೆದ್ದಿದ್ದರು
1999ರಲ್ಲಿ ನಡೆದ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು. ಬಳ್ಳಾರಿಯಲ್ಲಿ ಗೆಲುವು ಸಾಧಿಸಿದ್ದ ಸೋನಿಯಾ, ತಮ್ಮ ಅಮೇಥಿ ಕ್ಷೇತ್ರವನ್ನು ಉಳಿಸಿಕೊಂಡು ಬಳ್ಳಾರಿಗೆ ರಾಜೀನಾಮೆ ನೀಡಿದ್ದರು. 2000ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕೋಳೂರು ಬಸನಗೌಡ ಆಯ್ಕೆಯಾಗಿದ್ದರು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಭಾವಿ ಮಹಿಳೆ ಮಾರ್ಗರೇಟ್‌ ಆಳ್ವಾ 1999ರ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ರಾಜ್ಯಸಭಾ ಸದಸ್ಯೆಯಾಗಿ, ಕೇಂದ್ರ ಸರ್ಕಾರದಲ್ಲಿ ಸಚಿವೆಯಾಗಿ, ವಿವಿಧ
ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.

Advertisement

ಅಮರೇಗೌಡ ಗೊನೇವಾರ 

Advertisement

Udayavani is now on Telegram. Click here to join our channel and stay updated with the latest news.

Next