ಸಾಗರ: ಮಾಹಿತಿ ಹಕ್ಕು ಅರ್ಜಿದಾರರಿಗೆ ಮಾಹಿತಿ ನೀಡದಿರುವುದು ಮತ್ತು ವಿಚಾರಣೆಗೆ ಖುದ್ದು ಹಾಜರಾಗಲು ನೀಡಿದ ಸೂಚನೆಯನ್ನೂ ಉಲ್ಲಂಘಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಾಹಿತಿ ಆಯೋಗದ ಆಯುಕ್ತರಾದ ಎಸ್.ಎಲ್.ಪಾಟೀಲ್ ಸಾಗರ ಉಪವಿಭಾಗದ ಸಹಾಯಕ ಆಯುಕ್ತ ಡಾ. ನಾಗರಾಜ್ ಎಲ್. ಅವರಿಗೆ ಐದು ಸಾವಿರ ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಕೆಳದಿ ರಸ್ತೆಯ ರಾಜಕುಮಾರ ಎಂಬುವವರು 2020ರ ಮಾರ್ಚ್‌ನಲ್ಲಿ ಮಾಹಿತಿ ಹಕ್ಕು ಅರ್ಜಿ ಹಾಕಿ, ಆನಂದಪುರ ಹೋಬಳಿಯ ಮಲಂದೂರು ಗ್ರಾಮದ ಸರ್ವೆ ನಂಬರ್ ಒಂದಕ್ಕೆ ಸಂಬಂಧಿಸಿದಂತೆ ಮ್ಯುಟೇಷನ್, ಭೂ ಪರಿವರ್ತನೆ ದಾಖಲೆ ಮೊದಲಾದವುಗಳನ್ನು ಕೇಳಿದ್ದರು. ಮಾಹಿತಿ ಸಿಗದ ಕಾರಣ ಮೇಲ್ಮನವಿಯನ್ನು ಸಲ್ಲಿಸಿದ್ದರೂ ಪರಿಣಾಮವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2020ರ ಅಕ್ಟೋಬರ್ 7ರಂದು ರಾಜ್ಯ ಮಾಹಿತಿ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಈ ನಡುವೆ ಆಯೋಗ ಜುಲೈ 30ರಂದು ವಿಚಾರಣೆ ನಡೆಸಿ, ಉಚಿತವಾಗಿ ಮಾಹಿತಿ ನೀಡಿ ವರದಿ ಸಲ್ಲಿಸಲು ಎಸಿಯವರಿಗೆ ತಿಳಿಸಿತ್ತು. ಆದರೆ ಎಸಿ ಕಾರ್ಯಾಲಯ ಸದರಿ ವಿಷಯದ ಕಡತ ಲಭ್ಯವಿಲ್ಲ ಎಂದು ಅರ್ಜಿದಾರರಿಗೆ ತಿಳಿಸಿತ್ತು. ಈ ಅಂಶವನ್ನು ಪರಿಗಣಿಸಿದ ಮಾಹಿತಿ ಆಯೋಗ, ಶಾಶ್ವತ ದಾಖಲೆಗಳನ್ನು ಕಾಯ್ದಿರಿಸಿಕೊಳ್ಳುವುದು ಸಾರ್ವಜನಿಕ ಪ್ರಾಧಿಕಾರದ ಆದ್ಯ ಕರ್ತವ್ಯ. ಕಡತ ನಿರ್ವಹಿಸಿದ ಅಧಿಕಾರಿಯನ್ನು ಗುರುತಿಸಿ ಅವರ ವಿರುದ್ಧ 2010ರ ಸಾರ್ವಜನಿಕ ದಾಖಲೆ ಕಾನೂನು ಆಧಾರದಲ್ಲಿ ತನಿಖೆ ನಡೆಸಿ ಆಯೋಗಕ್ಕೆ ವರದಿ ಸಲ್ಲಿಸಲು ಎಸಿ ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಸೂಚಿಸಿತು.
ಇದನ್ನೂ ಓದಿ: ನಿಮ್ಮ ಪಾಕ್ ಗೆಳತಿಗೂ ಐಎಸ್ ಐಗೂ ಏನು ಸಂಬಂಧ: ಅಮರಿಂದರ್ ಸಿಂಗ್ ಗೆ ರಾಂಧವಾ
ಮಾಹಿತಿ ಹಕ್ಕು ಅರ್ಜಿಗೆ 30 ದಿನಗಳೊಳಗೆ ಮಾಹಿತಿ ನೀಡದಿರುವುದು, ಕಡತ ಲಭ್ಯ ಇಲ್ಲ ಎಂದು ಹಿಂಬರಹ ನೀಡಿದ್ದು, ಎರಡು ವರ್ಷದಿಂದಲೂ ಮಾಹಿತಿ ನೀಡದೆ ಸತಾಯಿಸಿರುವುದು, ಖುದ್ದು ಹಾಜರಾತಿಗೆ ತಿಳಿಸಿದ್ದರೂ ಗೈರಾಗಿರುವುದು, ಲಿಖಿತ ಸಮಜಾಯಿಷಿಯನ್ನು ನೀಡದಿರುವುದನ್ನು ಪರಿಗಣಿಸಿ ಸಾಗರದ ಸಹಾಯಕ ಆಯುಕ್ತ ಡಾ. ನಾಗರಾಜ್ ಎಲ್. ಅವರಿಗೆ ಐದು ಸಾವಿರ ರೂ. ದಂಡ ವಿಧಿಸಿ, ಆ ಮೊತ್ತವನ್ನು ಅವರ ವೇತನದಿಂದ ಕಡಿತಗೊಳಿಸಲು ಮಾಹಿತಿ ಆಯುಕ್ತರು ಸೆ. 14ರಂದು ಆನ್‌ಲೈನ್ ವಿಚಾರಣೆ ನಡೆಸಿದ ನಂತರ ನೀಡಿದ ಆದೇಶದಲ್ಲಿ ನಿರ್ದೇಶಿಸಿದ್ದಾರೆ.