Advertisement

ಕಾಂಗ್ರೆಸ್‌ ಸಂಸದರಿಂದಲೇ ಬಹಿಷ್ಕಾರ

11:17 PM Jan 27, 2022 | Team Udayavani |

ಹೊಸದಿಲ್ಲಿ: ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವಂತೆಯೇ ಕಾಂಗ್ರೆಸ್‌ನೊಳಗೇ “ನಾಯಕತ್ವ’ದ ಬಗೆಗಿರುವ ಅಸಮಾಧಾನ ಸ್ಫೋಟಗೊಳ್ಳತೊಡಗಿದೆ. ಗುರುವಾರ ಪಂಜಾಬ್‌ನಲ್ಲಿ ಚುನಾವಣ ಪ್ರಚಾರಕ್ಕೆ ಚಾಲನೆ ನೀಡಲು ಪಕ್ಷದ ನಾಯಕ ರಾಹುಲ್‌ ಗಾಂಧಿ ಆಗಮಿಸಿದ್ದರೂ ಕಾಂಗ್ರೆಸ್‌ನ ಐವರು ಸಂಸದರು ಗೈರಾಗಿದ್ದದ್ದು ಈ ವಾದಕ್ಕೆ ಪುಷ್ಟಿ ನೀಡಿದೆ.

Advertisement

ರಾಹುಲ್‌ ಗಾಂಧಿ ಅವರ “ನಾಯಕತ್ವ’ದ ಬಗ್ಗೆ ಅಸಮಾಧಾನವಿರುವ ಸಂಸದರಾದ ಮನೀಷ್‌ ತಿವಾರಿ, ಜಸ್ಬೀರ್‌ ಸಿಂಗ್‌, ರಣವೀತ್‌ ಸಿಂಗ್‌ ಬಿಟ್ಟು, ಪ್ರಣೀತ್‌ ಕೌರ್‌ ಮತ್ತು ಮೊಹಮ್ಮದ್‌ ಸಾದಿಕ್‌ ಅವರೇ ಗೈರಾದವರು ಎಂದು ಮೂಲಗಳು ತಿಳಿಸಿವೆ. ಸಂಸದರು ಈ ರೀತಿ ಕಾರ್ಯಕ್ರಮ “ಬಹಿಷ್ಕರಿಸಿದ್ದು’ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಆದರೆ ಇದನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ತಳ್ಳಿಹಾಕಿದ್ದಾರೆ. ನಾವು ಅಭ್ಯರ್ಥಿಗಳನ್ನು ಮಾತ್ರ ಆಹ್ವಾನಿಸಿದ್ದೆವು, ಸಂಸದರಿಗೆ ಆಹ್ವಾನವನ್ನೇ ನೀಡಿಲ್ಲ. ಇನ್ನು ಬಹಿಷ್ಕಾರದ ಮಾತೆಲ್ಲಿ ಬಂತು ಎಂದು ಅವರು ಪ್ರಶ್ನಿಸಿದ್ದಾರೆ.

ಸ್ವರ್ಣಮಂದಿರದಲ್ಲಿ ರಾಹುಲ್‌: ರಾಹುಲ್‌ ಗಾಂಧಿ ಅವರು ಗುರುವಾರ ಪಂಜಾಬ್‌ನ ಕಾಂಗ್ರೆಸ್‌ ಅಭ್ಯರ್ಥಿಗಳೊಂದಿಗೆ ಅಮೃತಸರದ ಸ್ವರ್ಣಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಅನಂತರ ಗುರುದ್ವಾರದ ಲಂಗಾರ್‌ ಸೇವಿಸಿದ್ದಾರೆ. ವಿಶೇಷವೆಂದರೆ ಅನಂತರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಚನ್ನಿ, “ನಮ್ಮ ನಡುವೆ ಯಾವುದೇ ಗಲಾಟೆ­ಯಿಲ್ಲ. ಪಂಜಾಬ್‌ ಸಿಎಂ ಅಭ್ಯರ್ಥಿ ಹೆಸರನ್ನು ಘೋಷಿಸಿ’ ಎಂದು ರಾಹುಲ್‌ ಸಮ್ಮು­ಖದಲ್ಲೇ ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.

ಪಕ್ಷಾಂತರಿಗಳಿಗೆ ಟಿಕೆಟ್‌: ಗುರುವಾರ ಬಿಜೆಪಿ 27 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್‌ನಿಂದ ಇತ್ತೀಚೆಗೆ ಬಿಜೆಪಿ ಸೇರಿರುವ ಇಬ್ಬರು ಹಾಗೂ ಕೇಂದ್ರದ ಮಾಜಿ ಸಚಿವ ವಿಜಯ್‌ ಸಂಪ್ಲಾ ಅವರಿಗೂ ಟಿಕೆಟ್‌ ನೀಡಲಾಗಿದೆ.

ಕಾಂಗ್ರೆಸ್‌ ನಾಯಕ ಬಿಜೆಪಿಗೆ :

Advertisement

ಉತ್ತರಾಖಂಡ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಕಿಶೋರ್‌ ಉಪಾಧ್ಯಾಯ ಗುರುವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೇಂದ್ರ ಸಚಿವ, ರಾಜ್ಯ ಉಸ್ತುವಾರಿ ಪ್ರಹ್ಲಾದ್‌ ಜೋಶಿ ಅವರ ಸಮ್ಮುಖದಲ್ಲಿ ಕಮಲ ಪಾಳಯಕ್ಕೆ ಸೇರಿದ್ದು, ತೆಹ್ರಿ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆಯಿದೆ.

ಸಿಎಂ ಧಮಿ ನಾಮಪತ್ರ ಸಲ್ಲಿಕೆ: ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಮಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಖತೀಮಾ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಸ್ಥಳೀಯ ದೇಗುಲದಲ್ಲಿ ಪೂಜೆ ಸಲ್ಲಿಸಿ, ಮನೆ ಮನೆ ಪ್ರಚಾರವನ್ನೂ ನಡೆಸಿದ್ದಾರೆ.

ಅಪ್ಪನ ಪರ 7 ವರ್ಷದ ಪುತ್ರಿ ಪ್ರಚಾರ! :

ಉ.ಪ್ರ.ದ ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷದಿಂದ ಕಣಕ್ಕಿಳಿದಿರುವ ಪವನ್‌ ಪಾಂಡೆ ಪರ ಸ್ಟಾರ್‌ ಪ್ರಚಾರಕರೊಬ್ಬರು ಭರ್ಜರಿ ಕ್ಯಾಂಪೇನ್‌ ಮಾಡುತ್ತಿದ್ದಾರೆ. ಅವರು ಬೇರಾರೂ ಅಲ್ಲ, ಪಾಂಡೆ ಅವರ 7 ವರ್ಷದ ಪುತ್ರಿ ಗಾಯತ್ರಿ ಪಾಂಡೆ. ಪ್ರತೀ ದಿನ ಬೆಳಗ್ಗೆ 6 ಗಂಟೆಗೇ ಅಪ್ಪನೊಂದಿಗೆ ಪ್ರಚಾರಕ್ಕೆ ತೆರಳುವ ಬಾಲಕಿ, ಮನೆ- ಮನೆಗೆ ಹೋಗಿ, “ಅಂಕಲ್‌, ನನ್ನ ಅಪ್ಪನಿಗೇ ಮತ ನೀಡಿ. ಅಖೀಲೇಶ್‌ಜೀ ಸಿಎಂ ಆಗುತ್ತಾರೆ. ಎಲ್ಲ ಕೆಲಸಗಳೂ ಆಗುತ್ತವೆ’ ಎಂದು ಹೇಳುತ್ತಾಳೆ.

ಕಾರಿನಲ್ಲಿತ್ತು 21 ಲಕ್ಷ ರೂ.: ಚುನಾವಣೆ ಸಮೀಪಿಸುತ್ತಿರುವಂತೆಯೇ ನೋಯ್ಡಾದಲ್ಲಿ ಉದ್ಯಮಿಯೊಬ್ಬರ ಪೋರ್ಶೆ ಕಾರಿನಲ್ಲಿ ಬರೋಬ್ಬರಿ 21 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ಹಣದ ಲೆಕ್ಕ ನೀಡುವಲ್ಲಿ ಉದ್ಯಮಿ ರೋಹಿತ್‌ ಅವಾನಾ ವಿಫ‌ಲರಾಗಿದ್ದಾರೆ. ತಾವು ಪೆಟ್ರೋಲ್‌ ಬಂಕ್‌ ಮಾಲಕರಾಗಿದ್ದು, ಕಳೆದ 3-4 ದಿನಗಳಲ್ಲಿ ಸಂಗ್ರಹವಾದ ಹಣ ಒಯ್ಯುತ್ತಿದ್ದೆ ಎಂದು ಅವರು ಹೇಳಿದ್ದಾರೆ.

ಕಣದಲ್ಲಿ  ಇದ್ದಾರೆ ಐದು ದಂಪತಿ! :

ಸಮರಕ್ಕೆ ಸಿದ್ಧವಾಗಿರುವ ಗೋವಾ ಚುನಾವಣೆಗೆ ಈಗ “ದಂಪತಿ ಫೈಟ್‌’ ಮೆರುಗು ನೀಡಿದೆ. ಏಕೆಂದರೆ ಐದು ದಂಪತಿ ಈ ಬಾರಿ ಚುನಾವಣ ಕಣದಲ್ಲಿದ್ದಾರೆ. ಒಂದು ವೇಳೆ ಅವರೆಲ್ಲರೂ ಚುನಾಯಿತರಾದರೆ 40 ಸದಸ್ಯಬಲದ ವಿಧಾನಸಭೆಯಲ್ಲಿ ನಾಲ್ಕನೇ ಒಂದು ಭಾಗ ಅವರ ಪಾಲಾಗುತ್ತದೆ. ಬಿಜೆಪಿಯು ಇಬ್ಬರು ದಂಪತಿಗೆ ಟಿಕೆಟ್‌ ನೀಡಿದೆ. ಜತೆಗೆ ಬಿಜೆಪಿ ಟಿಕೆಟ್‌ ಪಡೆದಿರುವ ಪಕ್ಷದ ಮತ್ತೂಬ್ಬ ನಾಯಕನಿಗೆ ಹೊಸ ತಲೆನೋವು ಎಂಬಂತೆ, ಅವರ ಪತ್ನಿ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ ಮತ್ತು ಟಿಎಂಸಿ ತಲಾ ಒಂದೊಂದು ದಂಪತಿಯನ್ನು ಕಣಕ್ಕಿಳಿಸಿವೆ. ಇದೇ ವೇಳೆ ಗುರುವಾರ ಸಿಎಂ ಪ್ರಮೋದ್‌ ಸಾವಂತ್‌ ಸ್ಯಾಂಕ್ವೆಲಿಮ್‌ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ಸೊಸೆಗೆ ಕ್ಷೇತ್ರ ಬಿಟ್ಟುಕೊಟ್ಟ ಮಾವ!: ಗೋವಾದ ಪೋರಿಮ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಸಿಎಂ ಪ್ರತಾಪ್‌ಸಿನ್ಹ ರಾಣೆ (87) ಕೊನೇ ಕ್ಷಣದಲ್ಲಿ ಹಿಂದೆ ಸರಿದಿದ್ದಾರೆ. ಅವರ ಸೊಸೆ ದೇವಿಯಾ ವಿಶ್ವಜೀತ್‌ ರಾಣೆ ಅವರಿಗೆ ಬಿಜೆಪಿ ಇದೇ ಕ್ಷೇತ್ರದಲ್ಲಿ ಟಿಕೆಟ್‌ ನೀಡಿತ್ತು. ಸೊಸೆಗಾಗಿ ಕ್ಷೇತ್ರ ಬಿಟ್ಟುಕೊಟ್ಟಿರುವ ರಾಣೆ, ನನ್ನ ವಯಸ್ಸಿನ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇನೆ  ಎಂದು ಹೇಳಿದ್ದಾರೆ. ಆದರೆ ಈ ನಿರ್ಧಾರದಿಂದ  ಕಾಂಗ್ರೆಸ್‌ಗೆ ತೀವ್ರ ಮುಖಭಂಗ ಉಂಟಾಗಿದೆ.

ಒಪ್ಪಂದಕ್ಕೆ ಸಹಿ ಹಾಕಿಸಿದ ಬಿಜೆಪಿ :

ಪಕ್ಷಾಂತರ ಮಾಡಲ್ಲವೆಂದು ಗೋವಾದಲ್ಲಿ ಅಭ್ಯರ್ಥಿಗಳಿಂದ ಕಾಂಗ್ರೆಸ್‌ ದೇವರ ಮೇಲೆ ಪ್ರಮಾಣ ಮಾಡಿಸಿದ್ದು ಸುದ್ದಿಯಾದ ಬೆನ್ನಲ್ಲೇ ಈಗ ಮಣಿಪುರದಲ್ಲೂ ಇಂಥದ್ದೇ ಘಟನೆ ನಡೆದಿದೆ. ಪಕ್ಷಾಂತರ ತಪ್ಪಿಸಲು ಬಿಜೆಪಿ ತನ್ನ ನಾಯಕರಿಗೆ “ಸಹಕಾರದ ಒಪ್ಪಂದ’ಕ್ಕೆ ಸಹಿ ಹಾಕಿಸಿದೆ. ಪಕ್ಷಾಂತರ ಮಾಡದೇ ಪಕ್ಷದ ನಿರ್ಧಾರಕ್ಕೆ ಸಂಪೂರ್ಣ ಸಹಮತ ನೀಡುತ್ತೇವೆ ಎಂದು ಒಪ್ಪಂದದಲ್ಲಿ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next