Advertisement

ಸಾಹಿತ್ಯ ಅಕಾಡೆಮಿಯಿಂದ ಐದು ಹೊಸ ಯೋಜನೆಗಳು

12:37 PM Dec 06, 2017 | |

ಬೆಂಗಳೂರು: “ದಲಿತ ಕ್ರೈಸ್ತರು ಸಾಂಸ್ಕೃತಿಕ ಶೋಧ ಮಾಲೆ’ ಸಂಪುಟ ಮತ್ತು “ಬಂಗಾರದ ಎಲೆಗಳು’ ಎಂಬ ಕನ್ನಡ ಸಾಹಿತಿಗಳ ಕೋಶ ಯೋಜನೆ ಸೇರಿದಂತೆ ನೂತನ ಐದು ಯೋಜನೆಗಳ ಪ್ರಾರಂಭೋತ್ಸವಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಿದ್ಧತೆ ನಡೆಸಿದೆ. 

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ, ಗುರುವಾರ ಬೆಳಗ್ಗೆ 10ಕ್ಕೆ ನಯನ ಸಭಾಂಗಣದಲ್ಲಿ ಅಕಾಡೆಮಿಯ ಐದು ಯೋಜನೆಗಳ ಪ್ರಾರಂಭೋತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಉದ್ಘಾಟಿಸುವರು. ಅತಿಥಿಗಳಾಗಿ ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ಇಲಾಖೆ ನಿರ್ದೇಶಕ ಎನ್‌.ಆರ್‌.ವಿಶುಕುಮಾರ್‌ ಉಪಸ್ಥಿತರಿರುವರು ಎಂದರು. 

ಸಾಂಸ್ಕೃತಿಕ ಶೋಧ: ಕರ್ನಾಟಕದಲ್ಲಿ ಮತಾಂತರ ಹೊಂದಿದ ದಲಿತರ ಕುರಿತ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆ ಕುರಿತಾದ ಸಂಶೋಧನಾತ್ಮಕ ಅಧ್ಯಯನ ಈ ಯೋಜನೆ ಉದ್ದೇಶ. ಈ ಸಂಬಂಧ 10 ಸಂಪುಟಗಳನ್ನು ಹೊರತರಲಾಗುವುದು. ಈ ಕುರಿತು ಜಿಲ್ಲಾವಾರು ಸಂಶೋಧಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

“ಬಂಗಾರದ ಎಲೆಗಳು- ಕನ್ನಡ ಸಾಹಿತಿಗಳ ಕೋಶ’: ಕ್ರಿ.ಶ.1820ರಿಂದ 2020ರವರೆಗೆ ಸಾಹಿತಿಗಳ ಸಂಕ್ಷಿಪ್ತ ಮಾಹಿತಿಗಳನ್ನೊಳಗೊಂಡ ಕೋಶ ಇದಾಗಿದೆ. ಎಂಟು ಸಂಪುಟಗಳಲ್ಲಿ ಇದನ್ನು ಪ್ರಕಟಿಸುವ ಗುರಿ ಇದ್ದು, 50ಕ್ಕೂ ಅಧಿಕ ಲೇಖಕರು ಭಾಗಹಿಸಲಿದ್ದಾರೆ ಎಂದರು. 

“ವಜ್ರದ ಬೇರುಗಳು-ಸಾಹಿತ್ಯ ಪ್ರಕಾರದ ಮಾಲಿಕೆ’: ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಿಗೆ ಸಂಬಂಧಿಸಿದಂತೆ ತಾತ್ವಿಕವಾದ
ವಿಚಾರಗಳನ್ನೊಳಗೊಂಡಂತೆ ಕಿರುಹೊತ್ತಿಗೆಗಳ ಹೊಸ ಮಾಲಿಕೆ ಇದಾಗಿದೆ. ಪ್ರಾಚೀನ ಹಾಗೂ ಹೊಸಗನ್ನಡದ ಸಾಹಿತ್ಯದ 25ಕ್ಕೂ ಹೆಚ್ಚು ಪ್ರಕಾರಗಳು ಇದರಲ್ಲಿ ಒಳಗೊಂಡಿದೆ.

Advertisement

ಯುವಕಾವ್ಯ ಅಭಿಯಾನ: ಸಾಹಿತ್ಯಾಸಕ್ತಿ ಹೊಂದಿದ ಪಿಯು ವಿದ್ಯಾರ್ಥಿಗಳಿಗೆ ಒಂದು ವರ್ಷದ ಅಭಿಯಾನ ಇದಾಗಿದೆ. ಅಕ್ಕಪಕ್ಕದ ಎರಡು ಜಿಲ್ಲೆಗಳನ್ನು ಒಳಗೊಂಡಂತೆ ತಲಾ 50 ಜನ ಪದವಿಪೂರ್ವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇನ್ನು 50 ಜನ 30 ವರ್ಷದೊಳಗಿನ ಯುವ ಕವಿಗಳು ಇರುತ್ತಾರೆ. ಒಟ್ಟು 150 ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ.

ಚಕೋರ- ಮಾಸಿಕ ಕಾರ್ಯಕ್ರಮ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕನಿಷ್ಠ 30-40 ಜನ ಕಾವ್ಯಾಸಕ್ತರ ಗುಂಪನ್ನು ಅಕಾಡೆಮಿಯು ಗುರುತಿಸುತ್ತದೆ. ಗುಂಪು ಯಾವುದೋ ಒಂದು ಸ್ಥಳದಲ್ಲಿ ಸೇರಿ ಕಾವ್ಯವಾಚನ, ವಿಮರ್ಶೆ, ಸಂವಾದ ನಡೆಸುತ್ತದೆ. ಈ ಯೋಜನೆಯ ಮೂಲಕ ಸಾಹಿತ್ಯಾಸಕ್ತರ ಗುಂಪಿಗೊಂದು ವೇದಿಕೆಯನ್ನು ಒದಗಿಸುವ ಉದ್ದೇಶ ಅಕಾಡೆಮಿ ಹೊಂದಿದೆ ಎಂದು ಹೇಳಿದರು.

ಸಂವಾದ: ಗುರುವಾರ ಬೆಳಗ್ಗೆ 11.30ಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ತಲ್ಲಣಗಳು, ಬಹುತ್ವದ ಭಾರತ ಮತ್ತು ಧರ್ಮದ ಅಸ್ತಿತ್ವ ಕುರಿತು ಸಂವಾದ ಗೋಷ್ಠಿ ನಡೆಯಲಿದೆ. ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ಹಿರಿಯ ಸಾಹಿತಿ ಡಾ.ಸಿ.ವೀರಣ್ಣ ಭಾಷಣ ಮಾಡಲಿದ್ದಾರೆ.

ಶುಕ್ರವಾರ ಬೆಳಗ್ಗೆ 10ಕ್ಕೆ ರವೀಂದ್ರ ಕಲಾಕ್ಷೇತ್ರ ಮಹಿಳೆಯರ ವಿಶ್ರಾಂತಿ ಕೊಠಡಿಯಲ್ಲಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಕನ್ನಡ ಭವನದ ವರ್ಣ ಆರ್ಟ್‌ ಗ್ಯಾಲರಿಯಲ್ಲಿ ಬೆಳಗ್ಗೆ 10ರಿಂದ ಬಂಗಾರದ ಎಲೆಗಳು-ಕನ್ನಡ ಸಾಹಿತಿಗಳ ಕೋಶದ ವಿವಿಧ ವಿಷಯಗಳ ಸಂಗ್ರಹ ವಿಧಾನ ಮತ್ತು ಸಂವಾದ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next