Advertisement

2019ರಲ್ಲಿ ವೆಂಟಿಲೇಟರ್ ಚಂದ್ರಲೋಕದಿಂದ ಖರೀದಿಸಿದ್ರಾ: ಕಾಂಗ್ರೆಸ್ ಆರೋಪಕ್ಕೆ BJP ತಿರುಗೇಟು

04:38 PM Jul 23, 2020 | keerthan |

ಬೆಂಗಳೂರು: ಕೋವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಸಲಹೆ ನೀಡಬೇಕಿದ್ದ ಕಾಂಗ್ರೆಸ್ ಜನರ ಮನಸ್ಸು ಕೆಡಿಸುವಂತಹ, ವಿಷಬೀಜ ಬಿತ್ತುವ ಪಿತೂರಿಯನ್ನು ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

Advertisement

ಕೋವಿಡ್ ಚಿಕಿತ್ಸಾ ಉಪಕರಣಗಳ ಖರೀದಿಯಲ್ಲಿ ರಾಜ್ಯ ಸರ್ಕಾರ 2000 ಕೋಟಿ ರೂ ಅವ್ಯವಹಾರ ನಡೆಸಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಡಿಸಿಎಂ ಡಾ. ಸಿಎನ್ ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಕೆ ಸುಧಾಕರ್, ಕಂದಾಯ ಸಚಿವ ಆರ್ . ಅಶೋಕ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಒಟ್ಟಾಗಿ ಪತ್ರಿಕಾಗೋಷ್ಠಿ ನಡೆಸಿ ಉತ್ತರ ನೀಡಿದರು.

ಆರಂಭದಲ್ಲಿ ಮಾತನಾಡಿದ ಸಚಿವ ಅಶೋಕ್,  ಕಳೆದ ಜನವರಿಯಲ್ಲಿ 36 ಯುನಿಟ್ ವೆಂಟಿಲೇಟರ್ ತರಿಸಿದ್ದಾರೆ. ಆಗ ಅವರೇನು ಚಂದ್ರಲೋಕದಿಂದ ತರಿಸಿದ್ದರೇ? ತುಂಬಾ ಬೇಡಿಕೆ ಇರುವ ಈ ಕಾಲದಲ್ಲಿ ನಾವು ಪಾರದರ್ಶಕವಾಗಿ ಖರೀದಿ ಮಾಡಿದ್ದೇವೆ. ಇಂತಹ ವೇಳೆಯಲ್ಲಿ 14 ಲಕ್ಷಕ್ಕೆ 9, ಯುನಿಟ್, 15 ಲಕ್ಷಕ್ಕೆ 28 ಯುನಿಟ್ ಗಳಲ್ಲಿ ಖರೀದಿ ಮಾಡಲಾಗಿದೆ ಎಂದು ಅಶೋಕ್ ಹೇಳಿದರು.

ಮಂತ್ರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ ಎಂದ ಡಿಕೆಶಿ ಆರೋಪಕ್ಕೆ ತಿರುಗೇಟು ನೀಡಿದ ಅಶೋಕ್, ಅವರು ಭೇಟಿ ನೀಡಿದ್ದು ಒಂದೇ ಆಸ್ಪತ್ರೆಗೆ. ನಾವೆಲ್ಲಾ ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದೇವೆ. ಅವರು ಒಂದು ಆಸ್ಪತ್ರೆಗೆ ಭೇಟಿ ನೀಡಿ ಕಾಲರ್ ಮೇಲೆ ಮಾಡುತ್ತಿದ್ದಾರೆ. ಡಿಕೆಶಿ ನಮ್ಮನ್ನು ಕೇಳಿದ್ದಲ್ಲ. ಸಿದ್ದರಾಮಯ್ಯನವರನ್ನು ಕೇಳಿದ್ದು, ಯಾಕೆಂದರೆ ಅವರು ಯಾವ ಆಸ್ಪತ್ರೆಗೂ ಭೇಟಿ ನೀಡಿಲ್ಲ ಎಂದರು.

ಇದನ್ನೂ ಓದಿ: ಕೋವಿಡ್ ಉಪಕರಣ ಖರೀದಿಯಲ್ಲಿ ರಾಜ್ಯ ಸರ್ಕಾರದಿಂದ 2000 ಕೋಟಿ ರೂ ಅವ್ಯವಹಾರ: ಸಿದ್ದರಾಮಯ್ಯ

Advertisement

ಕೇರಳದವರು 2.94 ಲಕ್ಷಕ್ಕೆ ಐಫ್ಲೋ ನಾಜಲ್ ಖರೀದಿ ಮಾಡಿದ್ದಾರೆ. ನಾವು ಕೇರಳಕ್ಕಿಂತ ಕಡಿಮೆ ದರದಲ್ಲಿ 2.83 ಲಕ್ಷಕ್ಕೆ ಐಫ್ಲೋ ನಾಜಲ್ ಖರೀದಿ ಮಾಡಿದ್ದೀವಿ. ಇದು ಸಿದ್ದರಾಮಯ್ಯ ಕಣ್ಣಿಗೆ ಕಾಣಲಿಲ್ಲವೇ? ನಮ್ಮಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿಗಳಿಗೆ 800 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ, ನಾವು 232 ಕೋಟಿ ಡಿಸಿಗಳಿಗೆ ಬಿಡುಗಡೆ ಮಾಡಿದ್ದೇವೆ. 30 ಜಿಲ್ಲೆಗಳಿಗೆ 56 ಕೋಟಿ ರೂ. ಆಹಾರಕ್ಕೆ ಬಿಡುಗಡೆ ಮಾಡಿದ್ದೇವೆ. 34 ಕೋಟಿ ಕ್ವಾರಂಟೈನ್​ಗೆ ಬಿಡುಗಡೆ ಮಾಡಿದ್ದೇವೆ. ಕೋವಿಡ್​ಗ ಟೆಸ್ಟ್ 68 ಕೋಟಿಯನ್ನು ಎಲ್ಲ ಡಿಸಿಗಳಿಗೆ ಬಿಡುಗಡೆ ಮಾಡಿದ್ದೇವೆ. ಪ್ರತಿ ಜಿಲ್ಲೆಗೆ ನೀಡಿದ ಪೈಸೆ ಪೈಸೆಗೂ ಲೆಕ್ಕಕ್ಕೆ ದಾಖಲೆ ಇದೆ ಎಂದು ಅಶೋಕ್ ಹೇಳಿದರು.

ನಂತರ ಮಾತನಾಡಿದ ಡಿಸಿಎಂ ಡಾ. ಸಿಎನ್ ಅಶ್ವಥ್ ನಾರಾಯಣ, ನಾವು ಸದನದಲ್ಲೇ ಲೆಕ್ಕ ಕೊಡಲು ಸಿದ್ದರಿದ್ದೆವು. ಆದರೆ ಇವರು ಯಾವಾಗಲೂ ಕೇಳುತ್ತಾರೆಂದರೆ ಗಾಳಿಯಲ್ಲಿ ಗುಂಡು ಹೊಡೆಯುವುದಕ್ಕೆ ಉತ್ತರಿಸಲು ಸಾಧ್ಯವಿಲ್ಲ ಎಂದರು.

ಚೈನಾದಿಂದ ಪಿಪಿಇ ಕಿಟ್ ತಂದಿರುವುದಕ್ಕೆ ಸಿದ್ದರಾಮಯ್ಯ ಆರೋಪಕ್ಕೆ ಉತ್ತರಿಸಿದ ಡಿಸಿಎಂ, ಆರಂಭದಲ್ಲಿ ನಮ್ಮ ದೇಶದಲ್ಲಿ ಪಿಪಿಇ ಕಿಟ್ ತಯಾರಾಗುತ್ತಿರಲಿಲ್ಲ. ಚೀನಾದ ರಾಯಭಾರಿಗಳನ್ನು ಸಂಪರ್ಕಿಸಿ ಹಾಗಾಗಿ ಅಲ್ಲಿಂದ ತರಿಸಿದ್ದೆವು ಎಂದರು.

11 ಲಕ್ಷದ 56 ಸಾವಿರ ಮಾಸ್ಕ್ ಕೊಂಡಿದ್ದೇವೆ. ನಾವು 97 ರೂ. ಗೆ ಎನ್ 95 ಮಾಸ್ಕ್ ತೆಗೆದುಕೊಂಡಿದ್ದೇವೆ. ಆದರೆ ಇದಕ್ಕೆ ಇಂದಿಗೂ ಮಾರುಕಟ್ಟೆಯಲ್ಲಿ 200 ರೂ. ಇದೆ. ನಾವು ಹೇಳಿಕೊಂಡ ಬಂದ ಹೇಳಿಕೆಗಳನ್ನು ಸತ್ಯ ಮಾಡುವ ದುರುದ್ದೇಶದಿಂದ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಸದುದ್ದೇಶ ಇಲ್ಲ ಎಂದು ಡಿಸಿಎಂ ಹೇಳಿದರು.

ಬಯೋಮೆಡಿಕ್ಸ್ ಕಂಪೆನಿಯಿಂದ 5 ವೆಂಟಿಲೇಟರ್ ಗೆ 13 ಲಕ್ಷ ರೂ. ಗೆ ಖರೀದಿಸಿದ್ದೇವೆ. ಮೈತ್ರಿ ಸರ್ಕಾರ ಇದೇ ಕಂಪೆನಿಯಿಂದ 21 ಲಕ್ಷಕ್ಕೆ ವೆಂಟಿಲೇಟರ್ ಖರೀದಿ ಮಾಡಿತ್ತು ಎಂದರು.

ಇದನ್ನೂ ಓದಿ ರಾಜ್ಯ ಸರ್ಕಾರ ಹೆಣದ ಮೇಲೆ ಹಣ ಮಾಡಲು ಹೊರಟಿದೆ: ಇದು ಭ್ರಷ್ಟಾಚಾರದ ಸರ್ಕಾರ: ಡಿಕೆಶಿ

ನಂತರ ಮಾತನಾಡಿದ ಸಚಿವ ಸುಧಾಕರ್, ಇದು ವಿಪರ್ಯಾಸದ, ವಿಷಾದದ ಸುದ್ದಿಗೋಷ್ಠಿ. ಈ ಸಂಕಷ್ಟದ ಸಮಯದಲ್ಲಿ ಲೆಕ್ಕ ಕೇಳುವುದು ನಾಚಿಕೆಗೇಡಿನ ಕೆಲಸ. ಭ್ರಷ್ಟಾಚಾರದಲ್ಲಿ ಒಂದನೇ ಎರಡನೇ ಸ್ಥಾನದಲ್ಲಿ ಯಾರಿದ್ದಾರೆಂದು ಜನರಿಗೆ ಗೊತ್ತಿದೆ. ಅವರು ನಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯನವರೇ, ಪ್ರಸ್ತಾವನೆ, ಅನುಮೋದನೆಗೂ, ಬಿಡುಗಡೆಗೂ ವ್ಯತ್ಯಾಸ ಗೊತ್ತಿಲ್ಲವೆ. ಇದುವರೆಗೆ ಅನುಮೋದನೆಯಾಗಿ ಖರ್ಚಾಗಿರುವುದು 33 ಕೋಟಿ ರೂ. ಮಾತ್ರ ಎಂದರು.

ಈ ಸಮಯವನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಪುನಶ್ಚೇತನ ಮಾಡಬಹುದು ಎಂದು ನೀವು ಬಯಸಿದ್ದರೆ ಅದು ಆಗುವುದಿಲ್ಲ. ಜನರ ದಿಕ್ಕಿ ತಪ್ಪಿಸಿ ರಾಜಕೀಯ ಬೇಳೆ ಬೇಯುಸುವುದು ಸರಿಯಲ್ಲ. ವಿಪಕ್ಷಗಳು ಏನೇ ಆರೋಪ ಮಾಡಿದರೂ ಸಿಎಂ ಬಿಎಸ್ ವೈ ಅವರು ಈ ಪ್ರಾಯದಲ್ಲೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದರು

35 ಕೋಟಿ 45 ಸಾವಿರ ರೂ. ಗೆ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹತ್ತು ಬಗೆಯ ಉಪಕರಣಗಳನ್ನು ಖರೀದಿಸಿದ್ದೇವೆ. ಯಾವುದೇ ಉಪಕರಣಗಳ ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ನಾವು ಯಾವುದೇ ತನಿಖೆಗೆ ನಾವು ಸಿದ್ದರಿದ್ದೇವೆ. ಈ ಸಮಯದಲ್ಲಿ ಈ ರೀತಿ ಮಾಡಿ ಆರೋಪಿಸಿ ಕಾಂಗ್ರೆಸ್ ಐತಿಹಾಸಿಕ ತಪ್ಪು ಮಾಡಿದೆ ಎಂದು ಸುಧಾಕರ್ ಆರೋಪಿಸಿದರು.

ಸಾವಿರ ವೆಂಟಿಲೇಟರ್ ಖರೀದಿ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಅದರೆ 250 ಕ್ಕೂ ಹೆಚ್ಚು ವೆಂಟಿಲೇಟರ್ ಖರೀದಿ ಮಾಡಿಲ್ಲ. 2000 ಕೋಟಿ ರೂ. ಅವ್ಯವಹಾರ ಆಗಿದೆ ಎಂದಿದ್ದಾರೆ. ಆದರೆ ಖರ್ಚಾಗಿದ್ದು ಕೇವಲ 506 ಕೋಟಿ ರೂ. ಮಾತ್ರ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next