Advertisement

ಅಕಾಡೆಮಿ 5; ರಿಜಿಸ್ಟ್ರಾರ್‌ ಒಬ್ಬರು!

06:00 AM Oct 27, 2018 | |

ಮಂಗಳೂರು: ಕರಾವಳಿ ಮತ್ತು ನೆರೆಯ ಕೊಡಗಿನ ಸ್ಥಳೀಯ ಭಾಷೆ ಹಾಗೂ ಸಾಹಿತ್ಯ ಉತ್ತೇಜನಕ್ಕೆ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ, ಕೊಡವ -ಹೀಗೆ ಐದು ಪ್ರತ್ಯೇಕ ಸಾಹಿತ್ಯ ಅಕಾಡೆಮಿಗಳು ಇವೆ. ಆದರೆ ಈ ಪೈಕಿ ನಾಲ್ಕು ಅಕಾಡೆಮಿಗಳಿಗೆ ಪೂರ್ಣ ಪ್ರಮಾಣದ ರಿಜಿಸ್ಟ್ರಾರ್‌ ಇಲ್ಲದೆ ಹಿನ್ನಡೆಯಾಗುತ್ತಿದೆ. ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್‌ ಚಂದ್ರಹಾಸ ರೈ ಅವರನ್ನೇ ಉಳಿದ ನಾಲ್ಕು ಅಕಾಡೆಮಿಗಳಿಗೂ ಹೆಚ್ಚುವರಿ ಪ್ರಭಾರ ರಿಜಿಸ್ಟ್ರಾರ್‌ ಆಗಿ ನಿಯೋಜಿಸಲಾಗಿದೆ. ಐದೂ ಅಕಾಡೆಮಿಗಳ ಉಸ್ತುವಾರಿಯನ್ನು ಒಬ್ಬರೇ ನೋಡಿಕೊಳ್ಳಬೇಕಿದ್ದು, ಎಲ್ಲ ಅಕಾಡೆಮಿಗಳ ಕೆಲಸ ಕಾರ್ಯಗಳು ತೆವಳುತ್ತಿವೆ.

Advertisement

ರಿಜಿಸ್ಟ್ರಾರ್‌ ಪಾತ್ರ ಹಿರಿದು 
ಅಕಾಡೆಮಿಗಳು ಆಯಾ ಭಾಷಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಹಾಗೂ ಭಾಷೆ ಆಧಾರಿತ ಚಟುವಟಿಕೆ ಹಮ್ಮಿಕೊಳ್ಳಬೇಕಾಗಿರುವುದರಿಂದ ಪ್ರತೀ ಅಕಾಡೆಮಿಗೂ ಪ್ರತ್ಯೇಕ ರಿಜಿಸ್ಟ್ರಾರ್‌ ಅತ್ಯಗತ್ಯ. ಪ್ರತೀ ಅಕಾಡೆಮಿಗೆ ಪ್ರತಿ ವರ್ಷ ಸರಿಸುಮಾರು 1 ಕೋ.ರೂ.ಗಳಷ್ಟು ಅನುದಾನ ಸಿಗುತ್ತದೆ, ಇದು ಸಮರ್ಪಕವಾಗಿ ವಿನಿಯೋಗವಾಗುವಲ್ಲಿ ರಿಜಿಸ್ಟ್ರಾರ್‌ ಪಾತ್ರ ಹಿರಿದು.  ಹೊಸ ಯೋಜನೆಗಳನ್ನು ರೂಪಿಸುವ ಪ್ರತೀ ಭಾಷಿಕ ಅಕಾಡೆಮಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ತುಡಿತಕ್ಕೆ ರಿಜಿಸ್ಟ್ರಾರ್‌ ಕೊರತೆ ತಣ್ಣೀರೆರಚುತ್ತಿದೆ.  

ಐದು ಅಕಾಡೆಮಿ ನಿರ್ವಹಿಸುವ ಸವಾಲು
ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳು ಮಂಗಳೂರಿ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಕೊಡವ ಮತ್ತು ಅರೆ ಭಾಷೆ ಅಕಾಡೆಮಿಗಳು ಮಡಿಕೇರಿಯಲ್ಲಿವೆ. ಹೀಗಾಗಿ ಭೌಗೋಳಿಕ ಅಂತರದಿಂದಾಗಿಯೂ ಹಾಲಿ ಹೆಚ್ಚುವರಿ ರಿಜಿಸ್ಟ್ರಾರ್‌ ಅವರಿಗೆ ಐದು ಅಕಾಡೆಮಿಗಳ ನಿರ್ವಹಣೆ ಸವಾಲಾಗಿದೆ. 

ಉನ್ನತಿಯ ಬಗ್ಗೆ ಗಮನಹರಿಸುತ್ತಿಲ್ಲ 
ಒಂದೊಂದು ಅಕಾಡೆಮಿಯಲ್ಲಿ ಒಂದೊಂದು ದಿನ ರಿಜಿಸ್ಟ್ರಾರ್‌ ಇದ್ದರೂ ವಾರದ 5 ದಿನ ಅದಕ್ಕೇ ಬೇಕು. ಸರಕಾರಿ ರಜೆ ಬಂದರೆ ಮತ್ತೆ ತೊಂದರೆಯಾಗುತ್ತದೆ. ಅಕಾಡೆಮಿ ಯಲ್ಲಿ ಯಾವುದೇ ಕಾರ್ಯಕ್ರಮ ಮಾಡುವುದಕ್ಕೆ ಸಿದ್ಧತೆ ನಡೆಸಲು ಕೂಡ ಆಗದ ಪರಿಸ್ಥಿತಿ ಇದೆ. ಸರಕಾರ ಅಕಾಡೆಮಿ ಗಳ ಉನ್ನತಿಯ ಬಗ್ಗೆ ಗಮನಹರಿಸುತ್ತಿಲ್ಲದಿರುವುದು ಸ್ಪಷ್ಟವಾಗುತ್ತಿದೆ ಎಂಬುದು ಸಾಹಿತಿಯೊಬ್ಬರ ಆರೋಪ. 

ಮೂರಿದ್ದ  ಅಕಾಡೆಮಿ ಈಗ ಐದು!
ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್‌ಗೆ ಒಂದು ವರ್ಷದ ಹಿಂದಿನಿಂದಲೇ ಬ್ಯಾರಿ ಅಕಾಡೆಮಿಯ ಹೆಚ್ಚುವರಿ ಪ್ರಭಾರ ಜವಾಬ್ದಾರಿ ನೀಡಲಾಗಿತ್ತು. ಮೂರು ತಿಂಗಳ ಹಿಂದೆ ಕೊಂಕಣಿ ಸಾಹಿತ್ಯ ಅಕಾಡೆಮಿಗೂ ಅವರನ್ನೇ ಪ್ರಭಾರ ಮಾಡಲಾಯಿತು. ಒಂದು ತಿಂಗಳಿನಿಂದ ಕೊಡವ ಹಾಗೂ ಅರೆಭಾಷಾ ಅಕಾಡೆಮಿಯ ಜವಾಬ್ದಾರಿಯನ್ನೂ ನೀಡಲಾಗಿದೆ.

Advertisement

ಆದಷ್ಟು ಬೇಗ ನೇಮಕ
ಹಲವು ಅಕಾಡೆಮಿಗಳಿಗೆ ಒಬ್ಬರೇ ರಿಜಿಸ್ಟ್ರಾರ್‌ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತಿದ್ದು ಆದಷ್ಟು ಬೇಗ ನೇಮಕ ಮಾಡಲಾಗುವುದು. 
ಡಾ| ಜಯಮಾಲಾ, ಕನ್ನಡ, ಸಂಸ್ಕೃತಿ, ಮಹಿಳಾ  ಮತ್ತು ಮಕ್ಕಳ ಕಲ್ಯಾಣ ಸಚಿವರು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next