Advertisement

ಸಮರ್ಥ ರಾಷ್ಟ್ರಕ್ಕಾಗಿ ಫಿಟ್‌ ಇಂಡಿಯಾ ಯೋಜನೆ

09:56 PM Aug 30, 2019 | Lakshmi GovindaRaj |

ಹೊಸಕೋಟೆ: ಸಮರ್ಥ ರಾಷ್ಟ್ರ ನಿರ್ಮಿಸುವುದು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಫಿಟ್‌ ಇಂಡಿಯಾ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ಬಿ.ಎನ್‌.ಬಚ್ಚೇಗೌಡ ಹೇಳಿದರು.

Advertisement

ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಭಾರತೀಯ ಶಾಲಾ ಕ್ರೀಡಾ ಮಂಡಳಿ ನಿರ್ದೇಶಿತ ತಾಲೂಕು ಮಟ್ಟದ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಮಾತನಾಡಿದ ಅವರು, ಯುವಕರು ಕ್ರೀಡಾಭ್ಯಾಸದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಶಕ್ತಿಯುತವಾಗಿ, ಆರೋಗ್ಯವಂತರಾಗಿ ರೂಪುಗೊಳ್ಳಬೇಕು. ಇಂದು ವ್ಯಾಯಾಮದ ತೀವ್ರ ಕೊರತೆಯಿಂದಾಗಿ ಯುವಕರು ಸಹ ಮಧುಮೇಹದಂತಹ ಆರೋಗ್ಯದ ಸಮಸ್ಯೆಗಳಿಗೆ ಒಳಗಾಗುತ್ತಿರುವುದು ವಿಷಾದನೀಯ ಎಂದು ಹೇಳಿದರು.

ಶಿಕ್ಷಣದಲ್ಲಿ ಕ್ರೀಡೆ ಅವಿಭಾಜ್ಯ ಅಂಗ: ಮಾನಸಿಕ, ದೈಹಿಕ ಸಮತೋಲನ ಕಾಪಾಡಿಕೊಳ್ಳುವುದರೊಂದಿಗೆ ಸದೃಢರಾಗಲು ಕ್ರೀಡಾಭ್ಯಾಸ ಸಹಕಾರಿಯಾಗಿದೆ. ಕ್ರೀಡೆಯನ್ನು ಶಿಕ್ಷಣದ ಅವಿಭಾಜ್ಯ ಅಂಗವಾಗಿ ಪರಿಗಣಿಸಿದಲ್ಲಿ ಇಂತಹ ನ್ಯೂನತೆಗಳನ್ನು ಸರಿಪಡಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ಕ್ರೀಡಾ ವಸ್ತು ಪೂರೈಕೆಗೆ ಕ್ರಮ: ತಾಲೂಕು ಹಿಂದಿನಿಂದಲೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಹೊಂದಿರುವ ಖ್ಯಾತಿ ಗಳಿಸಿದೆ. ಪರಂಪರೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಆದ್ಯತೆ ನೀಡಬೇಕು. ಇದಕ್ಕಾಗಿ ಪೂರಕವಾದ ಸುಸಜ್ಜಿತವಾದ ಕ್ರೀಡಾಂಗಣದಂತಹ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕಲ್ಪಿಸಲಾಗಿದೆ. ಕ್ರೀಡೆಗಾಗಿ ಅಗತ್ಯತೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಿದಲ್ಲಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿದ್ಯಾರ್ಥಿಗಳಿಗೆ ತಕ್ಕಂತೆ ಶಿಕ್ಷಕರು ನೇಮಕ: ತಾಲೂಕು ಪಂಚಾಯ್ತಿ ಅಧ್ಯಕ್ಷ ವಿ.ಸಿ. ಜಯದೇವಯ್ಯ ಮಾತನಾಡಿ, ತಾಲೂಕಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ದೈಹಿಕ ಶಿಕ್ಷಕರನ್ನು ನೇಮಿಸಲಾಗಿದೆ. ಆಟದ ಮೈದಾನ ವ್ಯವಸ್ಥೆಯೊಂದಿಗೆ ಕ್ರೀಡಾ ಉಪಕರಣಗಳನ್ನು ದಾನಿಗಳ ಸಹಕಾರದಿಂದ ನೀಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಿ ಕೊಡುಗೆಯನ್ನು ಸಾರ್ಥಕಗೊಳಿಸ‌ಬೇಕು ಎಂದು ಹೇಳಿದರು.

Advertisement

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಕೆ.ರಮೇಶ್‌, ಕ್ಷೇತ್ರ ಸಮನ್ವಯಾಧಿಕಾರಿ ಎಂ. ಲಲಿತಮ್ಮ, ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸತೀಶ್‌, ನಿರ್ದೇಶಕ ಸಿ.ಮುನಿಯಪ್ಪ, ತಾಲೂಕು ಪಂಚಾಯ್ತಿ ಸದಸ್ಯ ಡಿ.ಟಿ.ವೆಂಕಟೇಶ್‌, ಮುಖಂಡರಾದ ಅರುಣ್‌ ಕುಮಾರ್‌, ಎಚ್‌.ಎಂ.ಸುಬ್ಬರಾಜು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್‌.ಮುನಿಶಾಮಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್‌.ಎನ್‌.ಎಸ್‌.ಹುಸೇನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಪ್ರಾಥಮಿಕ, ಪ್ರೌಢಶಾಲೆಗಳ ಸುಮಾರು 1 ಸಾವಿರ ವಿದ್ಯಾರ್ಥಿಗಳು ಎರಡು ದಿನಗಳು ಏರ್ಪಡಿಸಿರುವ ಒಟ್ಟು 28 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
-ಎಸ್‌.ಎನ್‌.ಕನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next