Advertisement

ಅಬ್ಬರಿಸುತ್ತಿರುವ ಕಡಲು: ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ಸ್ಥಗಿತ

04:40 AM Jul 19, 2017 | Karthik A |

ಮಲ್ಪೆ : ಕಳೆದ ನಾಲ್ಕೈದು ದಿನಗಳಿಂದ ಜೋರಾಗಿ ಬೀಸುವ ಗಾಳಿಯಿಂದಾಗಿ ಸಮುದ್ರ ಭೀಕರ ಸ್ವರೂಪವನ್ನು ತಾಳಿದ್ದು ಕರಾವಳಿಯಾದ್ಯಂತ ಯಾವುದೇ ಸಾಂಪ್ರದಾಯಿಕ ನಾಡದೋಣಿಗಳು ಕಡಲಿಗಿಳಿಯುತ್ತಿಲ್ಲ. ಕಡಲ ರೌದ್ರಾವತಾರಕ್ಕೆ ಬೆದರಿದ ನಾಡದೋಣಿ ಮೀನುಗಾರ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಕೈಕಟ್ಟಿ ಕುಳಿತಿದ್ದಾನೆ. ಮಲ್ಪೆ ಬಂದರು ವ್ಯಾಪ್ತಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವ 200 ಟ್ರಾಲ್‌ ದೋಣಿ, 60 ಅಧಿಕ ಡಿಸ್ಕೋ ದೋಣಿ ಮತ್ತು ಕೈರಂಪಣಿ ದೋಣಿಗಳು ಲಂಗರು ಹಾಕಿವೆ. ಹೆಜಮಾಡಿಯಿಂದ ಕೋಡಿಬೆಂಗ್ರೆ ಉದ್ದಕ್ಕೂ ಇದೇ ಪರಿಸ್ಥಿತಿ ಎದುರಾಗಿದೆ. ಗಾಳಿ ಮಳೆಯಿಂದಾಗಿ ಸಮುದ್ರ ಬಿರುಸುಗೊಂಡಿದ್ದು ಸಮುದ್ರದ ದಡದಲ್ಲಿ ರಭಸದ ಅಲೆಗಳು ಧುಮುಕುತ್ತಿರುವುದರಿಂದ ಹೊಳೆಗಳ ಮುಖಾಂತರ ನಾಡದೋಣಿಗಳನ್ನು ಸಮುದ್ರಕ್ಕೆ ಇಳಿಸಲು ಸಾಧ್ಯವಾಗುತ್ತಿಲ್ಲ. ಮಲ್ಪೆ ಬಂದರಿನ ಅಳಿವೆ ಭಾಗದಲ್ಲಿ ನೀರಿನ ಒತ್ತಡದಿಂದಾಗಿ ದೋಣಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

Advertisement

ಈ ಮಧ್ಯೆ ಕೆಲವೊಂದು ಟ್ರಾಲ್‌ದೋಣಿಗಳು ಬಿರುಸಾದ ಮಳೆ ಇಲ್ಲದ ವೇಳೆ ಮೀನುಗಾರಿಕೆಗೆ ತೆರಳಿದ್ದರೂ ಸರಿಯಾದ ಮೀನು ಸಿಗದೆ ಬರಿಗೈಯಲ್ಲಿ ವಾಪಸಾಗಿದ್ದಾರೆ. ಆಷಾಢ ತಿಂಗಳಲ್ಲಿ ಸಾಮಾನ್ಯವಾಗಿ ಮಳೆಗಾಳಿ ಜೋರಾಗಿ ತೂಫಾನ್‌ ಎದ್ದಾಗ ಮತ್ತು ನೆರೆನೀರು ಸಮುದ್ರ ಸೇರಿದಾಗ ಮೀನುಗಳ ತೆಪ್ಪ ಸಮುದ್ರದ ಅಂಚಿಗೆ ವಲಸೆ ಬರುತ್ತದೆ. ಇದರಿಂದ ತೀರ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುವ ನಾಡದೋಣಿಗಳಿಗೆ ವಿವಿಧ ತರಹದ  ಹೇರಳ ಮೀನುಗಳು ಬಲೆಗೆ ಬೀಳುತ್ತವೆ. ಆದರೆ ಈ ಬಾರಿ ಇದುವರೆಗೆ ಅಂತಹ ನೆರೆ ನೀರು ಬಂದಿಲ್ಲ ಎನ್ನುತ್ತಾರೆ ಮೀನುಗಾರರು. ಪ್ರತಿ ದಿನ ಬೆಳಗ್ಗೆ ಮೀನುಗಾರರು ತಮ್ಮ ಚಪ್ಪರದ ಬಳಿ ಸೇರಿ, ಸಮುದ್ರದ ಅಬ್ಬರ ನೋಡಿ ಮನೆಗೆ ಹಿಂದಿರುಗುತ್ತಿದ್ದಾರೆ.

ಸಿಗಡಿ ಮೀನಿನ ನಿರೀಕ್ಷೆ
ಸಾಮಾನ್ಯವಾಗಿ ಆಷಾಢ ಮಾಸದಲ್ಲಿ ತೂಫಾನ್‌ ಆಗುವ ವಾತಾವರಣ ಇರುತ್ತದೆ. ಇದರಿಂದ ನಾಡದೋಣಿ ಮತ್ತು ಯಾಂತ್ರಿಕ ಮೀನುಗಾರಿಕೆ ಎರಡಕ್ಕೂ ಪೂರಕ. ಜೂ.8ಕ್ಕೆ ಸಮುದ್ರ ಪೂಜೆ ನಡೆಸಿ ಮೀನುಗಾರಿಕೆ ಆರಂಭಿಸಿದ್ದರೂ ಇದುವರೆಗೂ ಸರಿಯಾದ ಮೀನುಗಾರಿಕೆ ನಡೆಸಲಾಗಲಿಲ್ಲ. ಒಂದು ಟ್ರಿಪ್‌ಗೆ 100 ರಿಂದ 150 ಲೀ. ಸೀಮೆಎಣ್ಣೆ ಖರ್ಚಾಗುತ್ತದೆ. ಸಾಲ ಮಾಡಿ ಅಕ್ಕಿ ಪಡೆದುಕೊಂಡಿದ್ದೇವೆ. ಇದೀಗ ತೂಫಾನ್‌ ಅಗುತ್ತಿರುವುದಿಂದ ಮೀನು ಸಿಗುವ ನಿರೀಕ್ಷೆಯಲ್ಲಿದ್ದೇವೆ.
– ಕೃಷ್ಣ ಸುವರ್ಣ ಪಡುತೋನ್ಸೆ ಬೆಂಗ್ರೆ, ನಾಡದೋಣಿ ಮೀನುಗಾರ

ಇನ್ನು ಕೇವಲ ಬೆರಳೆಣಿಕೆ ದಿನ 
ಸಮುದ್ರದಲ್ಲಿ ತೂಫಾನ್‌ ಇನ್ನೂ ಎರಡು ಮೂರು ದಿನ ಇರುವ ಸಾಧ್ಯತೆ ಇದೆ. ನಾಡದೋಣಿ ಮೀನುಗಾರಿಕೆಯು ಜು. 31ಕ್ಕೆ ಕೊನೆಗೊಳ್ಳುತ್ತದೆ ಆ. 1 ರಿಂದ ಯಾಂತ್ರಿಕ ಮೀನುಗಾರಿಕೆ ಆರಂಭಗೊಳ್ಳುತ್ತದೆ. ಇದುವರೆಗೂ ಯಾರಿಗೂ ನಿರೀಕ್ಷಿತ ಪ್ರಮಾಣದಲ್ಲಿ ಸಂಪಾದನೆಯಾಗಿಲ್ಲ. ಬೆರಳೆಣಿಕೆಯ ದಿನಗಳು ಮಾತ್ರ ಉಳಿದಿವೆ. ಕೆಲವೇ ದೋಣಿಗಳಿಗೆ  ಬಂಗುಡೆ, ಬೂತಾಯಿ ಚಿಲ್ಲರೆ ಚಿಲ್ಲರೆ ಬಂದಿದ್ದು ಆದರಿಂದ ಸಾಲ ತೀರಿಸಲು ಸಾಧ್ಯವಿಲ್ಲ. ಸಿಗಡಿ ಮೀನು ಬಲೆಗೆ ಬಿದ್ದರೆ ಮಾತ್ರ ಏನಾದರೂ ಸ್ವಲ್ಪ ಉಳಿಯಬಹುದು.
– ರಾಮ ಕಾಂಚನ್‌, ಹಿರಿಯ ಮೀನುಗಾರ

ಕರಾವಳಿಯಲ್ಲಿ ಮೀನಿಗೆ ಬರವಿದ್ದ  ಸಮಯದಲ್ಲಿ ತರಕಾರಿ ದರಗಳಲ್ಲಿ ಹೆಚ್ಚಳ ಕಂಡು ಬರುತ್ತದೆ. ಟೊಮ್ಯಾಟೋ ದರ ಮಾತ್ರ ಗಗನಕ್ಕೆ ಏರಿದ್ದು ರಮ್ಜಾನ್‌ ಹಬ್ಬದ ಸಮಯದಲ್ಲಿ ಕೆ.ಜಿ.ಗೆ 30 ರೂ. ಇದ್ದ ಟೊಮ್ಯಾಟೋ ದರ ಇದೀಗ ರೂ. 80ಕ್ಕೆ ಏರಿಕೆ ಕಂಡಿದೆ. ಉಳಿದಂತೆ ಬೆಂಡೆ ಕೆ.ಜಿ.ಗೆ 50 ರೂ., ಬೀನ್ಸ್‌ 50 ರೂ., ತೊಂಡೆಕಾಯಿ 40 ರೂ., ಸೌತೆಕಾಯಿ 30 ರೂ. ಗುಳ್ಳ  40 ರೂ. ಇದೆ. ಕೋಳಿ ಮೊಟ್ಟೆ  4.50 ರೂ. ನಿಂದ 5 ರೂ. ಗೆ ಏರಿಕೆಯಾಗಿದೆ.

Advertisement

– ನಟರಾಜ್‌ ಮಲ್ಪೆ

Advertisement

Udayavani is now on Telegram. Click here to join our channel and stay updated with the latest news.

Next