Advertisement

ಮಲ್ಯಾಡಿ: ಗ್ರಾಮೀಣ ಯುವಕರಿಂದ ಹೊಳೆ ಮೀನು ಬೇಟೆ!

07:33 PM Apr 13, 2020 | Karthik A |

ತೆಕ್ಕಟ್ಟೆ: ಮುಂಗಾರು ಮಳೆ ಆಗಮನ ಕುಂದಾಪುರ ತಾಲೂಕಿನ ತೆಕ್ಕಟ್ಟೆ, ಮಲ್ಯಾಡಿ ಸುತ್ತಮುತ್ತಲ ಹೊಳೆಸಾಲುಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದ್ದು ಹಿಂಡು ಹಿಂಡಾಗಿ ಮೀನು ಸಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರ ತಂಡವೊಂದು ಕಳೆದ ಮೂರು ದಿನಗಳಿಂದಲೂ ಉತ್ಸಾಹದಿಂದ ಬಲೆ ಬೀಸುವಲ್ಲಿ ಕಾರ್ಯಪ್ರವೃತ್ತರಾಗಿವೆ.

Advertisement

ಬೃಹತ್‌ ಗಾತ್ರದ ಮೀನುಗಳು
ಮಳೆಯ ಪರಿಣಾಮ ಗ್ರಾಮೀಣ ಭಾಗಗಳಿಂದ ಹಾದು ಹೋಗುವ ಹೊಳೆ ಸಾಲುಗಳಲ್ಲಿ ಅಪಾರ ಪ್ರಮಾಣದ ಮೀನುಗಳು ಕಾಣಸಿಗುತ್ತಿವೆ. ಐರ್‌, ಕಾಟ್ಲಾ , ಕೆಂಬೇರಿ ಜಾತಿಗೆ ಸೇರಿದ ಭಾರೀ ಬೇಡಿಕೆಯ ಮೀನುಗಳು ಹಿಂಡು ಹಿಂಡಾಗಿರುವುದರಿಂದ ಗ್ರಾಮೀಣ ಯುವಕರ ತಂಡ ಹಲ್ತೂರು, ಮಲ್ಯಾಡಿ, ಕುದ್ರುಬೈಲು, ಮಣೂರು ದೇವಸ ಸೇರಿದಂತೆ ಅಲ್ಲಲ್ಲಿ ಬಲೆ ಬೀಸಿ ಮೀನುಗಾರಿಕೆ ನಡೆಸುತ್ತಿದ್ದಾರೆ.


ಈ ತಾಜಾ ಮೀನಿಗೆ ಹೆಚ್ಚಿದ ಭಾರೀ ಬೇಡಿಕೆ

ಒಂದೊಂದು ಮೀನುಗಳ ಭಾರ ಸರಿಸುಮಾರು ಮೂರು ಕೆ.ಜಿಗೂ ಅಧಿಕ ತೂಕವನ್ನು ಹೊಂದಿದೆ. ಕೆ.ಜಿ.ಗೆ ಸುಮಾರು ರೂ.350 ಕ್ಕೂ ಅಧಿಕ ಬೆಲೆ ಇದೆ. ಪ್ರಸ್ತುತ ಸಮುದ್ರ ಮೀನುಗಾರಿಕೆ ನಿಷೇಧವಿರುವುದರಿಂದ ಗ್ರಾಮೀಣ ಭಾಗದಲ್ಲಿ ಈ ಬೀಸಿದ ಬಲೆಯಲ್ಲಿ ಸಿಕ್ಕಿದ ಬೃಹತ್‌ ಮೀನುಗಳ ಖರೀದಿಗಾಗಿ ಹುಡುಕಿಕೊಂಡು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ.


3 ದಿನಗಳಿಂದ ಅಪಾರ ಮೀನು

ಮಲ್ಯಾಡಿ, ಉಳ್ತೂರು, ಬೇಳೂರು, ಕುದ್ರುಬೈಲ್‌ ಗ‌ಳಲ್ಲಿ ಹಲವು ಮಂದಿ ಪ್ರತಿ ದಿನ ಮುಂಜಾನೆಯಿಂದಲೇ ಈ ಭಾಗದಲ್ಲಿ ಬಲೆ ಬೀಸಿ ಮೀನು ಹಿಡಿಯುವ ಕಾಯಕದಲ್ಲಿ ನಿರತರಾಗಿದ್ದಾರೆ. ಅಲ್ಲದೆ ಹೊಳೆಸಾಲುಗಳಲ್ಲಿ ಅಲ್ಲಲ್ಲಿ ಅಡ್ಡಲಾಗಿ ಬಲೆ ಇರಿಸಲಾಗಿದೆ. ಮೀನುಗಳಿರುವ ನಿಶಾನೆಯನ್ನು ನೋಡಿಕೊಂಡು ಕೆಲವೊಮ್ಮೆ ಗೋರು ಬಲೆಯನ್ನು ಬೀಸಿ ದೊಡ್ಡ ಗಾತ್ರದ ಮೀನುಗಳನ್ನು ಹಿಡಿದಿದ್ದೇವೆ. ಕಳೆದ ಮೂರು ದಿನಗಳಿಂದ ಅಪಾರ ಪ್ರಮಾಣದ ಮೀನುಗಳು ಬಲೆಗೆ ಬಿದ್ದಿವೆೆ.
– ಮೇಲ್ತಾರು ಮನೆ ಶ್ರೀನಾಥ್‌ ಶೆಟ್ಟಿ, ಮೀನಿನ ಬೇಟೆಯಲ್ಲಿ ತೊಡಗಿದವರು

ಮೀನು ಖಾದ್ಯ ರುಚಿಕರ
ಮಳೆಯ ಆರಂಭದಲ್ಲೇ ದೊಡ್ಡ ಗಾತ್ರದ ಮೀನುಗಳು ಹೊಳೆಯಿಂದ ಹರಿದು ಬರುತ್ತಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡಾ ನಾಲ್ಕೈದು ಮಂದಿ ಸ್ನೇಹಿತರು ಒಗ್ಗೂಡಿಕೊಂಡು ಹವ್ಯಾಸಕ್ಕಾಗಿ ತಾಜಾ ಮೀನುಗಳನ್ನು ಹಿಡಿಯುತ್ತಿದ್ದೇವೆ. ಈ ಮೀನುಗಳಿಂದ ತಯಾರಿಸುವ ಖಾದ್ಯಗಳು ಅತ್ಯಂತ ರುಚಿಕರವಾಗಿರುವುದರಿಂದ ಭಾರೀ ಬೇಡಿಕೆ ಇದೆ.
– ಚಂದ್ರ ಮಲ್ಯಾಡಿ, ಮೀನು ಹಿಡಿಯುವ ಹವ್ಯಾಸಿ ತಂಡ

Advertisement

— ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next