ಮಲ್ಪೆ: ಕೋವಿಡ್ ಹಿನ್ನೆಲೆಯಲ್ಲಿ ಇರುವ ಸಾಮಾಜಿಕ ಅಂತರ ಸಹಿತ ಎಲ್ಲ ನಿಯಮಗಳನ್ನು ಪಾಲಿಸಲು ನಾವು ಬದ್ಧರಿದ್ದು, ಯಾಂತ್ರೀಕೃತ ಮೀನುಗಾರಿಕೆಗೂ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅವರನ್ನು ಭೇಟಿಯಾಗಿ ಮನವಿ ಮಾಡಿರುವುದಾಗಿ ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ತಿಳಿಸಿದ್ದಾರೆ. ಸರಕಾರದ ಸೂಚನೆಯನ್ನು ಆಧರಿಸಿಯೇ ಬೋಟುಗಳು ನೀರಿಗಿಳಿಯಲಿವೆ. ಕಡಲಿನಿಂದ ಮರಳಿದ ಬಳಿಕ ಮೀನನ್ನು ಇಳಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುವುದು. ಬಂದರಿನೊಳಗೆ ಸಾರ್ವಜನಿಕವಾಗಿ ಮೀನು ಹರಾಜು ಮತ್ತು ಚಿಲ್ಲರೆ ಮಾರಾಟ ಮಾಡದಂತೆ ನೋಡಿಕೊಳ್ಳುವುದು, ಹೊರರಾಜ್ಯದ ಮೀನಿನ ಲಾರಿಗಳಿಗೆ ಬಂದರು ಪ್ರವೇಶಕ್ಕೆ ನಿರ್ಬಂಧ, ಮೀನುಗಾರಿಕೆ ಚಟುವಟಿಕೆ ನಿಯಮ ಬದ್ಧವಾಗಿ ನಡೆಯುವಂತೆ ನಿಗಾ ಇಡುವ ಜವಾಬ್ದಾರಿಯನ್ನು ಮೀನುಗಾರ ಸಂಘವೇ ವಹಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ದೋಣಿಗಳು ಅಪಾಯದಲ್ಲಿ
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾ. 24ರಿಂದ ಇಲ್ಲಿನ ದೋಣಿಗಳಲ್ಲದೆ ಗಂಗೊಳ್ಳಿ, ಹಂಗಾರಕಟ್ಟೆ ಕೋಡಿ, ಭಟ್ಕಳ, ಹೊರರಾಜ್ಯದ ಕೆಲವು ಬೋಟುಗಳು ಮಲ್ಪೆಯಲ್ಲಿ ತಂಗಿವೆ. ಬಂದರಿನಲ್ಲಿ ಜಾಗದ ಸಮಸ್ಯೆಯಿಂದಾಗಿ ಹಲವು ದೋಣಿಗಳು ಹೊಳೆಯಲ್ಲಿಯೇ ನಿಂತಿದ್ದು, ಮಳೆಗಾಲ ಆರಂಭಗೊಂಡರೆ ಹೊಳೆಯ ನೀರಿನ ರಭಸಕ್ಕೆ ನಿಯಂತ್ರಣ ತಪ್ಪಿ ಸಮುದ್ರ ಸೇರುವ ಸಾಧ್ಯತೆ ಇದೆ. ಒಂದು ಸಲ ಮೀನುಗಾರಿಕೆಗೆ ಅವಕಾಶ ಕೊಟ್ಟಲ್ಲಿ ಬೋಟುಗಳು ತೆರವುಗೊಂಡು ತಮ್ಮ ತಮ್ಮ ಬಂದರು ಸೇರಿಕೊಳ್ಳಲು ಅನುಕೂಲವಾಗುತ್ತದೆ ಎನ್ನುತ್ತಾರೆ ಮೀನುಗಾರ ಸಂಘದ ಉಪಾಧ್ಯಕ್ಷ ರಮೇಶ್ ಕೋಟ್ಯಾನ್.