Advertisement

ಸಾಂಪ್ರದಾಯಿಕ ಮೀನುಗಾರಿಕೆಗೆ ಮೀನುಗಾರರು ಸಜ್ಜು 

10:18 AM Jun 25, 2018 | Team Udayavani |

ಮಹಾನಗರ: ಆಳ ಸಮುದ್ರ ಮೀನುಗಾರಿಕೆಗೆ ಈಗ ರಜೆ ಇರುವುದರಿಂದ ನಾಡ ದೋಣಿಗಳಲ್ಲಿ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಲು ಮೀನುಗಾರರು ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಮಂಗಳೂರು ವಲಯದಲ್ಲಿ ನಾಡದೋಣಿ ಮೀನುಗಾರಿಕೆ ಆರಂಭವಾಗಲಿದೆ.

Advertisement

ಒಟ್ಟು ಮೀನುಗಾರಿಕೆಯ ಪೈಕಿ ಶೇ.15ರಿಂದ 18ರಷ್ಟು ಮೀನುಗಳು ನಾಡದೋಣಿಯಿಂದ ದೊರೆಯುತ್ತದೆ. ಹೀಗಾಗಿ ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಗೆ ಹೆಚ್ಚಿನ ಪ್ರಾಮುಖ್ಯ ನೀಡಲಾಗುತ್ತದೆ. ಈ ಬಾರಿ ಮಂಗಳೂರು ವಲಯದಲ್ಲಿ ಸುಮಾರು 135 ಜೋಡಿ ದೋಣಿಗಳು ಸಮುದ್ರಕ್ಕಿಳಿಯುವ ತವಕದಲ್ಲಿವೆ. ಈಗಾಗಲೇ 2,500 ಮೀನುಗಾರರಿಗೆ ಪಾಸ್‌ ನೀಡುವ ಕೆಲಸವಾಗಿದೆ. ಅವರು ಮೀನಿಗೆ ಬಲೆ ಬೀಸಲು ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ ಎಂದು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷರು ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ.

ಬಹುತೇಕ ನಾಡದೋಣಿಗಳಿಗೆ ಇಂದು ಮುಹೂರ್ತ
ಆಳಸಮುದ್ರ ಮೀನುಗಾರಿಕೆ ನಿಷೇಧವಾದ ಬಳಿಕ ಆರಂಭವಾಗುವ ನಾಡದೋಣಿ ಮೀನುಗಾರಿಕೆ ಆರಂಭವಿಸುವ ಮೊದಲು ಸೂಕ್ತ ಮುಹೂರ್ತ ನೋಡಿ ಸಮುದ್ರಕ್ಕಿಳಿಸಲಾಗುತ್ತದೆ. ಸೋಮವಾರ ದಿನ ಒಳ್ಳೆಯದಿದೆ ಹಾಗೂ ಮುಹೂರ್ತ ಇದೆ ಎನ್ನುವ ಕಾರಣಕ್ಕಾಗಿ ಇಂದು ಬಹುತೇಕ ನಾಡದೋಣಿಗಳು ಸಮುದ್ರಕ್ಕಿಳಿಯಲಿವೆ. ಮೊದಲು ದೋಣಿಗಳಿಗೆ ಪೂಜೆ ಮಾಡಿ ಬಳಿಕ ಸಮುದ್ರದತ್ತ ತೆರಳುತ್ತಾರೆ.

ಮಂಗಳೂರು ವಲಯದಲ್ಲಿ ಸುಮಾರು 150 ಜೋಡಿ ನಾಡದೋಣಿಗಳಿವೆ. ಅದರಲ್ಲಿ ರಾಣಿ ಬಲೆಯಲ್ಲಿ 50 ಯೂನಿಟ್‌ಗಳಿವೆ. ಒಂದು ಯೂನಿಟ್‌ನಲ್ಲಿ ಎರಡು ಮದರ್‌ ಬೋಟ್‌, ಒಂದು ಕ್ಯಾರಿಯರ್‌ ಸೇರಿ 40 ಜನರಿರುತ್ತಾರೆ. ಇನ್ನು ಪಟ್ಟೆಬಲೆಯಲ್ಲಿ 50 ಯೂನಿಟ್‌ ಗಳಿದ್ದು, ಅದರ ಒಂದು ಯೂನಿಟ್‌ನಲ್ಲಿ ಒಂದು ಬೋಟ್‌ ಹಾಗೂ 7 ಜನರಿರುತ್ತಾರೆ. 50 ಬುಲ್‌ ಟ್ರಾಲ್‌ಗ‌ಳ ಒಂದು ಯೂನಿಟ್‌ನಲ್ಲಿ ಎರಡು ಬೋಟ್‌ ಹಾಗೂ ಐದು ಜನರಿರುತ್ತಾರೆ.

20 ಕಿ.ಮೀ.ನ ವ್ಯಾಪ್ತಿಯಲ್ಲಿ ನಾಡದೋಣಿ ಮೀನುಗಾರಿಕೆ 
ಜೂನ್‌ ಮೊದಲ ವಾರದಲ್ಲಿ ಸಾಮಾನ್ಯವಾಗಿ ಮೀನುಗಾರಿಕಾ ಋತು ಅಂತ್ಯಗೊಳ್ಳುತ್ತದೆ. ಮತ್ತೆ ಮೀನುಗಾರಿಕೆ ಆರಂಭಗೊಳ್ಳುವುದು ಆಗಸ್ಟ್‌ನಲ್ಲಿ. ಈ ಮಧ್ಯದ ಅವಧಿಯಲ್ಲಿ ನಾಡದೋಣಿ ಮೀನುಗಾರಿಕೆ ನಡೆಸಲಾಗುತ್ತದೆ. ಸಮುದ್ರದಲ್ಲಿ ಸುಮಾರು 20 ಕಿ.ಮೀ.ನ ಒಳಗಡೆಯಲ್ಲಿ ನಾಡದೋಣಿ ಮೀನುಗಾರಿಕೆ ನಡೆಯುತ್ತದೆ. ಆದರೆ, ಸಮುದ್ರ ಪ್ರಕ್ಷುಬ್ಧವಾಗಿರುವ ಸಮಯದಲ್ಲಿ 10 ಕಿ.ಮೀ.ನ ಒಳಗಡೆಯೇ ಮೀನುಗಾರಿಕೆ ನಡೆಯುತ್ತದೆ. ಎರಡು ಗಂಟೆಯಿಂದ ಸುಮಾರು 10 ಗಂಟೆಗಳವರೆಗೆ ಮಾತ್ರ ಸಮುದ್ರದಲ್ಲಿದ್ದು, ಸುತ್ತು ಬಲೆ ಮೂಲಕ ಮೀನುಗಾರಿಕೆ ನಡೆಸುತ್ತಾರೆ. ಸಮುದ್ರದಲ್ಲಿ ಯಾವುದೇ ಅವಘಡ ಸಂಭವಿಸಿದರೆ ಕೂಡಲೇ ದಡ ಸೇರುವಷ್ಟು ದೂರ ಮಾತ್ರ ಮೀನುಗಾರರು ತೆರಳುತ್ತಾರೆ.

Advertisement

ಇಂದು ನಾಡದೋಣಿಗಳು ಸಮುದ್ರದತ್ತ
ಆಳಸಮುದ್ರ ಮೀನುಗಾರಿಕೆ ಬಳಿಕ ಇಂದಿನಿಂದ ಬಹುತೇಕ ನಾಡದೋಣಿಗಳು ಮೀನುಗಾರಿಕೆಗೆ ತೆರಳಲಿವೆ. ಕೆಲವು ದಿನಗಳಿಂದ ಸಮುದ್ರ ಪ್ರಕ್ಷುಬ್ಧಗೊಂಡಿದ್ದರಿಂದ ಮೀನುಗಾರಿಕೆಗೆ ತೆರಳಲು ಸಾಧ್ಯವಾಗಿರಲಿಲ್ಲ. ಈಗ ಹತೋಟಿಗೆ ಬಂದಿದೆ.
– ವಾಸುದೇವ ಬಿ. ಕರ್ಕೇರ, 
ಅಧ್ಯಕ್ಷರು, ಕರಾವಳಿ ನಾಡದೋಣಿ ಮೀನುಗಾರರ ಸಂಘ, ಮಂಗಳೂರು ವಲಯ 

Advertisement

Udayavani is now on Telegram. Click here to join our channel and stay updated with the latest news.

Next